ಪಿಂಚಣಿ ಮೌಲೀಕರಣ ಕಾಯಿದೆ ರದ್ದುಗೊಳಿಸಲು ಒತ್ತಾಯಿಸಿ ಪ್ರತಿಭಟನೆ| ನಿವೃತ್ತ ನೌಕರರು–ಕುಟುಂಬ ಪಿಂಚಣಿದಾರರಿಗೆ ಅನ್ಯಾಯವಾಗುತ್ತದೆ ಎಂದು ಆರೋಪ | ಹಳೆಯ ಪಿಂಚಣಿ ವ್ಯವಸ್ಥೆ ಮುಂದುವರಿಸಲು ಆಗ್ರಹ.
ಸುರಪುರ ಟೈಮ್ಸ್ ವಾರ್ತೆ
ಸುರಪುರ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ 2025ರ ಪಿಂಚಣಿ ಮೌಲೀಕರಣ ಕಾಯಿದೆಯನ್ನು ತಕ್ಷಣವೇ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿ ರಾಜ್ಯ ಸರಕಾರಿ ನಿವೃತ್ತ ನೌಕರರ ಸಂಘದ ಕರೆ ಮೇರೆಗೆ ಸ್ಥಳೀಯ ಘಟಕದ ವತಿಯಿಂದ ಮಂಗಳವಾರ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯಲ್ಲಿ ಮಾತನಾಡಿದ ಸಂಘದ ಪ್ರಮುಖರು, ಮಾರ್ಚ್ 25ರಂದು ಜಾರಿಗೊಂಡಿರುವ ಈ ಮೌಲೀಕರಣ ಕಾಯಿದೆ ನಿವೃತ್ತ ನೌಕರರು ಮತ್ತು ಕುಟುಂಬ ಪಿಂಚಣಿದಾರರನ್ನು ವರ್ಗೀಕರಿಸಿ ಅವರ ನಡುವೆ ಅಸಮಾನತೆ ಸೃಷ್ಟಿಸುವ ಉದ್ದೇಶ ಹೊಂದಿದೆ ಎಂದು ಆರೋಪಿಸಿದರು. ಹಣಕಾಸು ಇಲಾಖೆಯ ಸಮಗ್ರ ಪರಿಶೀಲನೆಯಿಲ್ಲದೆ ಕಾಯಿದೆಯನ್ನು ಸಂಸತ್ತಿನಲ್ಲಿ ಅಂಗೀಕರಿಸಿರುವುದು ಸರಿಯಲ್ಲ ಎಂದು ಟೀಕಿಸಿದರು.
ಈ ಕಾಯಿದೆಯಿಂದ ನಿವೃತ್ತ ನೌಕರರು ಮತ್ತು ಪಿಂಚಣಿದಾರರು ಇನ್ನಷ್ಟು ಸಂಕಷ್ಟಕ್ಕೆ ಒಳಗಾಗಲಿದ್ದಾರೆ. ಕುಟುಂಬ ಪಿಂಚಣಿದಾರರಿಗೆ ಸಾಮಾಜಿಕ ನ್ಯಾಯ ಹಾಗೂ ಭದ್ರತೆ ಒದಗಿಸುವಲ್ಲಿ ಇದು ತೊಡಕಾಗಲಿದೆ. ಅಲ್ಲದೆ, ಭಾರತದ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಆತ್ಮಕ್ಕೂ ವಿರುದ್ಧವಾಗಿದೆ ಎಂದು ಅಭಿಪ್ರಾಯಪಟ್ಟರು.
ಇನ್ನಷ್ಟು ಮಾತನಾಡಿದ ಅವರು, ಈ ಕಾಯಿದೆಯಿಂದ ಪಿಂಚಣಿದಾರರು ವೇತನ ಆಯೋಗದ ಶಿಫಾರಸ್ಸುಗಳ ಪ್ರಯೋಜನ ಕಳೆದುಕೊಳ್ಳುವ ಸಾಧ್ಯತೆ ಇದೆ. ಇದರಿಂದ ಅವರ ಆರ್ಥಿಕ ಸ್ಥಿತಿ ಹದಗೆದು, ನೆಮ್ಮದಿಯ ಜೀವನವೂ ಅಸ್ತವ್ಯಸ್ತವಾಗುವ ಭೀತಿ ಇದೆ ಎಂದು ಆತಂಕ ವ್ಯಕ್ತಪಡಿಸಿದರು.

ಹೀಗಾಗಿ, 2025ರ ಮೌಲೀಕರಣ ಕಾಯಿದೆಯನ್ನು ತಕ್ಷಣವೇ ವಾಪಸ್ ಪಡೆದು ಹಳೆಯ ಪಿಂಚಣಿ ವ್ಯವಸ್ಥೆಯನ್ನು ಮುಂದುವರೆಸಬೇಕು. ನಿವೃತ್ತರಿಗೆ ದೊರೆಯಬೇಕಾದ ಎಲ್ಲಾ ಸೌಲಭ್ಯಗಳನ್ನು ಯಾವುದೇ ಕಡಿತವಿಲ್ಲದೆ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಪ್ರತಿಭಟನೆ ಬಳಿಕ ಪ್ರಧಾನಮಂತ್ರಿಗೆ ಸಲ್ಲಿಸುವಂತೆ ಮನವಿಯನ್ನು ತಹಸೀಲ್ದಾರ್ ಎಚ್.ಎ. ಸರಕಾವಸ್ ಅವರಿಗೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಶಿವಪ್ಪ ಕಟ್ಟಿಮನಿ, ಉಪಾಧ್ಯಕ್ಷ ರಾಜಾ ಅಮರಪ್ಪ, ಹನುಮಂತ ಪೂಜಾರಿ, ದೇವಿಂದ್ರ ಹಾದಿಮನಿ, ವಾಸುದೇವ ಗಂಗಿ, ದೇವಿಂದ್ರಪ್ಪ ಬಳಿಚಕ್ರ, ರಾಜಾ ಪಿಡ್ಡ ನಾಯಕ, ಭೀಮಣ್ಣ ಹುದ್ದಾರೆ, ನಾರಾಯಣರಾವ್ ಜೂಜಾರಿ, ಸಿದ್ದಯ್ಯಸ್ವಾಮಿ ಪುರಾಣಿಕಮಠ, ಭೀಮರಾಯ ದರಬಾರಿ, ಶ್ರೀನಿವಾಸ ಪಾಣಿಭಾಷೆ, ವಿಜಯ ವಿಭೂತೆ, ಗೂಳೆಪ್ಪ ಕುಂಬಾರ, ಅಮ್ಮಣ್ಣ ತಳವಾರ, ಹಣಮಂತ್ರಾಯ ಕಮತಗಿ, ಸೈಯದ್ ಬಂದೇ ಆಲಿ, ನಿಂಗಪ್ಪ ಹಾದಿಮನಿ, ಎಂ.ಎಸ್. ಸಜ್ಜನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

