ಏ.15ರವರೆಗೆ ಆಕ್ಷೇಪಣೆ ಅರ್ಜಿ ಸಲ್ಲಿಸಲು ಅವಕಾಶ|ಫಸಲ್ ಬೀಮಾ ಯೋಜನೆಯಲ್ಲಿ ತಿರಸ್ಕೃತ ಅರ್ಜಿಗಳು – ರೈತರಿಗೆ ಮತ್ತೊಮ್ಮೆ ಅವಕಾಶ.


ಸುರಪುರ ಟೈಮ್ಸ್ ವಾರ್ತೆ

ಸುರಪುರ:2024-25ನೇ ಸಾಲಿನ ಬೆಳೆ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯಡಿ ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ಬೆಳೆ ನೋಂದಣಿ ಮಾಡಿಕೊಂಡಿರುವ ರೈತರ ಅರ್ಜಿಗಳ ಪರಿಶೀಲನೆ ಪ್ರಕ್ರಿಯೆ ನಡೆಯುತ್ತಿದ್ದು, ಕೆಲವು ಅರ್ಜಿಗಳು ತಿರಸ್ಕೃತಗೊಂಡಿರುವುದು ಬೆಳಕಿಗೆ ಬಂದಿದೆ.
ಬೆಳೆ ಸಮೀಕ್ಷೆ ದತ್ತಾಂಶಗಳೊಂದಿಗೆ ಹೋಲಿಕೆ ನಡೆಸಿದಾಗ ಹುಣಸಗಿ ತಾಲೂಕಿನಲ್ಲಿ 293 ಮತ್ತು ಸುರಪುರ ತಾಲೂಕಿನಲ್ಲಿ 264 ಅರ್ಜಿಗಳು ತಾಳೆಯಾಗದೆ ತಿರಸ್ಕೃತಗೊಂಡಿವೆ ಎಂದು ಕೃಷಿ ಇಲಾಖೆ ತಿಳಿಸಿದೆ. ಈ ತಿರಸ್ಕೃತ ಅರ್ಜಿಗಳ ಪಟ್ಟಿಯನ್ನು ಸಂಬಂಧಿತ ಗ್ರಾಮ ಪಂಚಾಯಿತಿ ಕಚೇರಿಗಳು ಹಾಗೂ ರೈತ ಸಂಪರ್ಕ ಕೇಂದ್ರಗಳ ಸೂಚನಾ ಫಲಕಗಳಲ್ಲಿ ಪ್ರಕಟಿಸಲಾಗಿದೆ.


ಇದರ ಹಿನ್ನೆಲೆ, ರೈತರಿಗೆ ಮತ್ತೊಮ್ಮೆ ಅವಕಾಶ ಕಲ್ಪಿಸಲಾಗಿದ್ದು, ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಏಪ್ರಿಲ್ 15ರೊಳಗಾಗಿ ಸಂಬಂಧಿತ ರೈತ ಸಂಪರ್ಕ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.
ಆಕ್ಷೇಪಣೆ ಸಲ್ಲಿಸುವ ವೇಳೆ 2024-25ನೇ ಸಾಲಿನ ವಿಮಾ ಅರ್ಜಿ, ವಿಮೆ ನೋಂದಾಯಿಸಿದ ಬೆಳೆ ವಿವರ, ಪಹಣಿ (RTC), ಬೆಂಬಲ ಬೆಲೆ ರಸೀದಿ ಸೇರಿದಂತೆ ಅಗತ್ಯ ದಾಖಲೆಗಳನ್ನು ಕಡ್ಡಾಯವಾಗಿ ಜೊತೆಯಾಗಿ ನೀಡಬೇಕು ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರಾಮನಗೌಡ ಮಾಲಿ ಪಾಟೀಲ್ ತಿಳಿಸಿದ್ದಾರೆ.
ರೈತರು ಸಮಯಮಿತಿಯೊಳಗೆ ಆಕ್ಷೇಪಣೆ ಸಲ್ಲಿಸಿ ತಮ್ಮ ಹಕ್ಕುಗಳನ್ನು ಕಾಪಾಡಿಕೊಳ್ಳಬೇಕು ಎಂದು ಇಲಾಖೆ ಮನವಿ ಮಾಡಿದೆ.

Leave a Reply

Your email address will not be published. Required fields are marked *

error: Content is protected !!