ಜಾಲಿಬೆಂಚಿಯಲ್ಲಿ ಮಲ್ಲಿಕಾರ್ಜುನ ಸ್ವಾಮಿಯ ಜಾತ್ರಾ ಮಹೋತ್ಸವ ಅದ್ಧೂರಿ.ರಥೋತ್ಸವದಲ್ಲಿ ಭಕ್ತರ ಸಾಗರ | ವಿಶೇಷ ಪೂಜೆಗಳು, ಭಕ್ತಿ ಸಂಭ್ರಮಕ್ಕೆ ಸಾಕ್ಷಿಯಾದ ಗ್ರಾಮ.

ಸುರಪುರ ಟೈಮ್ಸ್ ವಾರ್ತೆ
ಸುರಪುರ: ತಾಲೂಕಿನ ಜಾಲಿಬೆಂಚಿ ಗ್ರಾಮದ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಜಾತ್ರಾ ಮಹೋತ್ಸವ ಗುರುವಾರ ಸಂಜೆ ಭಕ್ತಿಭಾವದೊಂದಿಗೆ ಅದ್ಧೂರಿಯಾಗಿ ನಡೆಯಿತು. ಜಾತ್ರೆ ನಿಮಿತ್ತ ದೇವಸ್ಥಾನದಲ್ಲಿ ಬೆಳಗ್ಗಿನಿಂದಲೇ ವಿಶೇಷ ಪೂಜೆಗಳು ಜರುಗಿದವು. ಬೆಳಗ್ಗೆ ೧೧ ಗಂಟೆಗೆ ರಥದ ಕಳಸಾರೋಹಣ ಕಾರ್ಯಕ್ರಮ ನೆರವೇರಿತು.
ಜಾತ್ರೆಯ ಅಂಗವಾಗಿ ದೇವರಿಗೆ ವಿವಿಧ ಪುಷ್ಪಗಳ ಅಲಂಕಾರ, ಸಹಸ್ರ ಬಿಲ್ವಾರ್ಚನೆ, ಮಹಾ ಮಂಗಳಾರತಿ ಹಾಗೂ ಮಹಾ ರುದ್ರಾಭಿಷೇಕ ಕಾರ್ಯಕ್ರಮಗಳು ನಡೆದವು. ಇವುಗಳಿಂದ ಗ್ರಾಮದಲ್ಲಿ ಭಕ್ತಿ ಮತ್ತು ಸಂಭ್ರಮದ ವಾತಾವರಣ ಹೆಚ್ಚಿತು. ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಭಾಗಗಳಿಂದ ಆಗಮಿಸಿದ ಭಕ್ತರು ದೇವಸ್ಥಾನಕ್ಕೆ ಬಂದು ಕಾಯಿ, ಕರ್ಪೂರ ಅರ್ಪಿಸಿ ದೇವರ ದರ್ಶನ ಪಡೆದರು. ಭಕ್ತರಿಗೆ ತೀರ್ಥ ಹಾಗೂ ಪ್ರಸಾದ ವಿತರಣೆ ಮಾಡಲಾಯಿತು.


ದೇವಸ್ಥಾನದ ಪ್ರಧಾನ ಅರ್ಚಕರಾದ ಅಮರಯ್ಯಸ್ವಾಮಿ ಜಾಲಿಬೆಂಚಿ ಹಾಗೂ ಬಸವರಾಜಸ್ವಾಮಿ ಅವರ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮಗಳು ನೆರವೇರಿದವು. ಗೂಳಿ ಮೌನೇಶ್ವರ ತಾತಾ ಮತ್ತು ರಾಮಲಿಂಗೇಶ್ವರ ಮಠದ ಶ್ರೀರಾಮ ಶರಣರು ಸಾನ್ನಿಧ್ಯ ವಹಿಸಿದ್ದರು. ಜಾಲಿಬೆಂಚಿ ಜಹಗೀರದಾರ್ ಮನೆತನ, ಪೊಲೀಸ್ ಪಾಟೀಲ್ ಮನೆತನ ಮತ್ತು ಮಾಲಿ ಪಾಟೀಲ್ ಮನೆತನದವರ ನೇತೃತ್ವದಲ್ಲಿ ರಥೋತ್ಸವದ ಕಾರ್ಯಕ್ರಮಗಳು ಯಶಸ್ವಿಯಾಗಿ ಜರುಗಿದವು.
ಸಂಜೆ ೬ ಗಂಟೆಗೆ ಭಕ್ತರು ತೇರನ್ನು ಎಳೆಯುವ ಮೂಲಕ ಭಕ್ತಿ ಭಾವ ಮೆರೆದರು. ತೇರಿಗೆ ಉತ್ತುತ್ತಿ ಹಾಗೂ ಬಾಳೆಹಣ್ಣು ಅರ್ಪಿಸಿ ಭಕ್ತರು ನಮನ ಸಲ್ಲಿಸಿದರು. “ಶ್ರೀ ಮಲ್ಲಿಕಾರ್ಜುನ ಸ್ವಾಮಿ ಕೀ ಜೈ” ಎಂಬ ಘೋಷಣೆಗಳು ಮೊಳಗಿದವು. ಗ್ರಾಮಸ್ಥರು, ಮುಖಂಡರು ಹಾಗೂ ವಿವಿಧ ಊರುಗಳಿಂದ ಆಗಮಿಸಿದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.


ಜಾತ್ರೆಯಲ್ಲಿ ಆಟಿಕೆಗಳು, ತಿಂಡಿ-ತಿನಿಸುಗಳು ಹಾಗೂ ವಿವಿಧ ವಸ್ತುಗಳ ಮಾರಾಟ ಜೋರಾಗಿದ್ದು, ಜಾತ್ರೆಯ ಸಂಭ್ರಮಕ್ಕೆ ಇನ್ನಷ್ಟು ರಂಗು ತುಂಬಿತು.


ಗ್ರಾಮೀಣ ಸಂಸ್ಕೃತಿಯ ಜೀವಾಳ
ಜಾತ್ರೆ ಮತ್ತು ಉತ್ಸವಗಳು ಗ್ರಾಮೀಣ ಜೀವನದ ಅವಿಭಾಜ್ಯ ಅಂಗವಾಗಿದ್ದು, ಸಂಸ್ಕೃತಿಯ ಜೀವಾಳವಾಗಿವೆ. ಇವು ನಮ್ಮ ಪರಂಪರೆ, ಭಕ್ತಿ ಮತ್ತು ಸಂಪ್ರದಾಯಗಳನ್ನು ಉಳಿಸಿ ಬೆಳೆಸುವ ಪ್ರಮುಖ ಹಬ್ಬಗಳಾಗಿವೆ. ಜಾತ್ರೆಗಳು ಜನರ ಮಧ್ಯೆ ಐಕ್ಯತೆ, ಭಕ್ತಿ ಮತ್ತು ಸಂತೋಷವನ್ನು ಹೆಚ್ಚಿಸುವುದರ ಜೊತೆಗೆ ಸಾಮಾಜಿಕ ಬಾಂಧವ್ಯವನ್ನು ಗಟ್ಟಿಗೊಳಿಸುವ ವೇದಿಕೆಗಳಾಗಿವೆ.
ಜಾಲಿಬೆಂಚಿ ಮಲ್ಲಿಕಾರ್ಜುನ ಸ್ವಾಮಿ ಈ ಭಾಗದ ಆರಾಧ್ಯ ದೈವವಾಗಿದ್ದು, ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಮಹಾಸ್ವಾಮಿ ಎಂದು ನಂಬಿಕೆ ಇದೆ. ಪ್ರತಿ ವರ್ಷವೂ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯುತ್ತಿದ್ದು, ಅದರ ವೈಭವವನ್ನು ಕಣ್ತುಂಬಿಕೊಳ್ಳುವುದು ಭಕ್ತರಿಗೆ ದೊಡ್ಡ ಹಬ್ಬವಾಗುತ್ತದೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ಮಾಜಿ ಸದಸ್ಯ ಅಮರಯ್ಯಸ್ವಾಮಿ ಜಾಲಿಬೆಂಚಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!