ಅಬಕಾರಿ ದಾಳಿ: 4.9 ಕೆಜಿ ಗಾಂಜಾ, 30 ಗಿಡಗಳ ಜಪ್ತಿ|ನಗನೂರಿನಲ್ಲಿ ಅಕ್ರಮ ಬೆಳೆ ಪತ್ತೆ| ಆರೋಪಿಗೆ NDPS ಕಾಯ್ದೆಡಿ ಬಂಧನ.


ಸುರಪುರ ಟೈಮ್ಸ್ ವಾರ್ತೆ

ಕೆಂಭಾವಿ;ಯಾದಗಿರಿಜಿಲ್ಲೆಯಲ್ಲಿ ನಕಲಿ ಮದ್ಯ, ಅಕ್ರಮ ಮದ್ಯ, ಕಲಬೆರಕೆ ಸೇಂದಿ ಹಾಗೂ ಕಳ್ಳಭಟ್ಟಿ ಸಾರಾಯಿ ಸೇರಿದಂತೆ ವಿವಿಧ ಅಬಕಾರಿ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟುವ ಉದ್ದೇಶದಿಂದ ರಚಿಸಲಾದ ವಿಶೇಷ ತನಿಖಾ ತಂಡಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ಅದರ ಭಾಗವಾಗಿ ಏಪ್ರಿಲ್ 8ರಂದು ಮಹತ್ವದ ದಾಳಿ ನಡೆಸಲಾಗಿದೆ.
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ವ್ಯಾಪ್ತಿಯ ನಗನೂರು ಗ್ರಾಮದಲ್ಲಿ ಅಬಕಾರಿ ಇಲಾಖೆಯ ಅಧಿಕಾರಿಗಳು ಜಾರಿ ಮತ್ತು ತನಿಖೆ ಕೈಗೊಂಡ ವೇಳೆ ಅಕ್ರಮವಾಗಿ ಹಸಿ ಗಾಂಜಾ ಗಿಡಗಳನ್ನು ಬೆಳೆಸಲಾಗುತ್ತಿರುವುದು ಪತ್ತೆಯಾಯಿತು. ತಕ್ಷಣ ಕ್ರಮ ಕೈಗೊಂಡ ಅಧಿಕಾರಿಗಳು ಸುಮಾರು 4 ಕೆಜಿ 900 ಗ್ರಾಂ ತೂಕದ, ಹೂ ಮತ್ತು ತೆನೆಗಳಿಂದ ಕೂಡಿದ ಒಟ್ಟು 30 ಹಸಿ ಗಾಂಜಾ ಗಿಡಗಳನ್ನು ವಶಪಡಿಸಿಕೊಂಡಿದ್ದಾರೆ.


ಈ ದಾಳಿ ಕಲಬುರಗಿ ವಿಭಾಗದ ಮಾನ್ಯ ಅಬಕಾರಿ ಜಂಟಿ ಆಯುಕ್ತರ ನಿರ್ದೇಶನದ ಮೇರೆಗೆ ಹಾಗೂ ಅಬಕಾರಿ ಉಪ ಆಯುಕ್ತರಾದ ಶ್ರೀಮತಿ ಶಾರದಾ ಸಿ. ಕೋಲಕಾರ ಅವರ ಮಾರ್ಗದರ್ಶನದಲ್ಲಿ, ಅಬಕಾರಿ ಉಪ ಅಧೀಕ್ಷಕರಾದ ಶ್ರೀ ಹರ್ಷರಾಜ್ ಬಿ. ಅವರ ನೇತೃತ್ವದಲ್ಲಿ ಖಚಿತ ಮಾಹಿತಿಯ ಆಧಾರದ ಮೇಲೆ ಯಶಸ್ವಿಯಾಗಿ ನಡೆದಿದೆ.
ಪರಿಶೀಲನೆ ವೇಳೆ ನಗನೂರು ಗ್ರಾಮದ ಬಸವರಾಜ (ತಂದೆ: ಭೀಮಣ್ಣ ಬೆಳ್ಳಿ) ಅವರಿಗೆ ಸೇರಿದ ಪರಸನಹಳ್ಳಿ ಗ್ರಾಮದ ಸರ್ವೆ ನಂ. 296ರ ಜಮೀನಿನಲ್ಲಿ ಅಕ್ರಮವಾಗಿ ಗಾಂಜಾ ಬೆಳೆಸಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಆರೋಪಿಯ ವಿರುದ್ಧ ಎನ್.ಡಿ.ಪಿ.ಎಸ್ (NDPS) ಕಾಯ್ದೆ-1985ರ ಅಡಿಯಲ್ಲಿ ಪ್ರಕರಣ ದಾಖಲಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.


ದಾಳಿಯ ವೇಳೆ ಸುರಪುರ ವಲಯದ ಅಬಕಾರಿ ನಿರೀಕ್ಷಕರಾದ ಶ್ರೀ ಕೇದಾರನಾಥ ಎಸ್.ಟಿ., ಉಪ ನಿರೀಕ್ಷಕರಾದ ಶ್ರೀ ವಸಂತಕುಮಾರ್ ಹಾಗೂ ಶ್ರೀ ಅನಿಲಕುಮಾರ್, ಅಬಕಾರಿ ಸಿಬ್ಬಂದಿಗಳಾದ ಯಮನಪ್ಪ, ಸಂಪತಕುಮಾರ್, ಸಂದೀಪ್ ನಾಯಕ, ವಾಹನ ಚಾಲಕರಾದ ರಮೇಶ್ ದೇಸಾಯಿ ಮತ್ತು ಗೃಹ ರಕ್ಷಕ ದಳದ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಪ್ರಕರಣದ ಮುಂದಿನ ತನಿಖೆ ಮುಂದುವರಿದಿದೆ ಎಂದು ಅಬಕಾರಿ ಇಲಾಖೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!