“ವಿಧವೆದಿಂದ ಮೆರಿಟ್‌ಗೆ ಯೂ-ಟರ್ನ್! ಲಿಂಗಸುಗೂರಿನ ಅಂಗನವಾಡಿ ನೇಮಕಾತಿಯಲ್ಲಿ ಗಂಭೀರ ಗೊಂದಲ”.|ಒಂದೇ ಅಭ್ಯರ್ಥಿಗೆ ಎರಡು ಕೋಟಾ ಪ್ರಕಟಣೆ ದಾಖಲೆ ತಿದ್ದುಪಡಿ ಶಂಕೆ, ತನಿಖೆಗೆ ಸಾರ್ವಜನಿಕರ ಆಗ್ರಹ.


ಸುರಪುರ ಟೈಮ್ಸ್ ವಾರ್ತೆ

ಲಿಂಗಸುಗೂರು;ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಯಳಗುಂದಿ ಗ್ರಾಮದಲ್ಲಿ ಅಂಗನವಾಡಿ ಕಾರ್ಯಕರ್ತೆ ನೇಮಕಾತಿ ಪ್ರಕ್ರಿಯೆ ಇದೀಗ ಗಂಭೀರ ವಿವಾದದ ರೂಪ ಪಡೆದುಕೊಂಡಿದೆ. ಒಂದೇ ಅಭ್ಯರ್ಥಿಗೆ ಸಂಬಂಧಿಸಿದಂತೆ ಒಂದೇ ದಿನದ ಅಂತರದಲ್ಲಿ ಎರಡು ವಿಭಿನ್ನ ಕೋಟಾಗಳಡಿ ಆಯ್ಕೆ ಪ್ರಕಟವಾಗಿರುವುದು ಸಾರ್ವಜನಿಕರಲ್ಲಿ ಅನುಮಾನ ಮತ್ತು ಅಸಮಾಧಾನಕ್ಕೆ ಕಾರಣವಾಗಿದೆ.
ಮೂಲ ಮಾಹಿತಿ ಪ್ರಕಾರ, ಸಂಬಂಧಿತ ಅಧಿಕಾರಿಗಳು ನಿನ್ನೆವರೆಗೆ ಆ ಮಹಿಳೆಯನ್ನು ವಿಧವೆ ಕೋಟಾದಡಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದರು. ಆದರೆ ಇಂದು ಅದೇ ಅಭ್ಯರ್ಥಿಯನ್ನು ಮೆರಿಟ್ ಕೋಟಾದಡಿ ಆಯ್ಕೆ ಮಾಡಲಾಗಿದೆ ಎಂದು ನೋಟಿಸ್ ಬೋರ್ಡ್‌ನಲ್ಲಿ ಪ್ರಕಟಿಸಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಈ ರೀತಿಯ ತಕ್ಷಣದ ಬದಲಾವಣೆ, ನೇಮಕಾತಿ ಪ್ರಕ್ರಿಯೆಯ ನಂಬಿಕೆ ಮತ್ತು ಪಾರದರ್ಶಕತೆಯ ಮೇಲೆ ಪ್ರಶ್ನಾರ್ಥಕ ಚಿಹ್ನೆ ಮೂಡಿಸಿದೆ.


ಇದಲ್ಲದೆ, ಗಂಡ ಜೀವಂತವಾಗಿದ್ದರೂ ವಿಧವೆ ಪಟ್ಟವನ್ನು ಪಡೆದು ಹುದ್ದೆ ಪಡೆದಿದ್ದಾರೆ ಎಂಬ ಆರೋಪಗಳು ಸ್ಥಳೀಯವಾಗಿ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ, ಈ ಯೂ-ಟರ್ನ್ ಘಟನೆ ಮತ್ತಷ್ಟು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಸಾರ್ವಜನಿಕರ ಮಾತಿನ ಪ್ರಕಾರ, ಆರಂಭದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲೇ ಗೊಂದಲ ಉಂಟಾಗಿದ್ದು, ನಂತರ ಅದನ್ನು ಮರೆಮಾಚಲು ಕೋಟಾ ಬದಲಾವಣೆ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗುತ್ತಿದೆ.
ಈ ಬೆಳವಣಿಗೆಯಿಂದ ಸಂಬಂಧಿತ ಇಲಾಖೆಯ ಅಧಿಕಾರಿಗಳ ನಡೆಗೆ ಪ್ರಶ್ನೆಗಳು ಏಳುತ್ತಿದ್ದು, ದಾಖಲೆಗಳಲ್ಲಿ ತಿದ್ದುಪಡಿ ಮಾಡಿರುವ ಸಾಧ್ಯತೆ ಅಥವಾ ಮಾಹಿತಿ ಮರೆಮಾಚುವ ಪ್ರಯತ್ನ ನಡೆದಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ನೇಮಕಾತಿ ಪ್ರಕ್ರಿಯೆಯಲ್ಲಿ ನಿಯಮಗಳನ್ನು ಪಾಲಿಸಲಾಗಿದೆವೆಯೇ? ಅಥವಾ ಒಬ್ಬರ ಪರವಾಗಿ ಕ್ರಮ ಕೈಗೊಳ್ಳಲಾಗಿದೆವೆಯೇ? ಎಂಬ ಪ್ರಶ್ನೆಗಳು ಈಗ ಸಾರ್ವಜನಿಕ ಚರ್ಚೆಯ ವಿಷಯವಾಗಿವೆ.


ಸ್ಥಳೀಯರು ಹಾಗೂ ಹುದ್ದೆಗೆ ಅರ್ಜಿ ಸಲ್ಲಿಸಿದ್ದ ಇತರ ಅಭ್ಯರ್ಥಿಗಳು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ನೇಮಕಾತಿ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಮರುಪರಿಶೀಲನೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಜೊತೆಗೆ, ಈ ಪ್ರಕರಣವನ್ನು ಮೇಲಾಧಿಕಾರಿಗಳು ಗಂಭೀರವಾಗಿ ಪರಿಗಣಿಸಿ, ಸಮಗ್ರ ತನಿಖೆ ನಡೆಸಿ ನಿಜಸ್ಥಿತಿಯನ್ನು ಬಹಿರಂಗಪಡಿಸಬೇಕು ಎಂಬ ಒತ್ತಾಯ ವ್ಯಕ್ತವಾಗಿದೆ.
ತಪ್ಪಿತಸ್ಥರು ಯಾರೇ ಆಗಿರಲಿ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಮುಂದಿನ ದಿನಗಳಲ್ಲಿ ಇಂತಹ ಗೊಂದಲಗಳು ಮರುಕಳಿಸದಂತೆ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

Leave a Reply

Your email address will not be published. Required fields are marked *

error: Content is protected !!