ಸುರಪುರದಲ್ಲಿ NRJ ಟ್ರೋಫಿ ಭರ್ಜರಿ ಶುಭಾರಂಭ: 360 ತಂಡಗಳ ಕ್ರಿಕೆಟ್ ಮಹಾಯಜ್ಞಕ್ಕೆ ಚಾಲನೆ|ಕ್ರೀಡೆಯಿಂದಲೇ ಮಾನಸಿಕ ನೆಮ್ಮದಿ – ರಾಜುಗೌಡ | ಐಪಿಎಲ್ ಕನಸು ಕಾಣಲು ಯುವಕರಿಗೆ ತರುಣ್ ಸುಧೀರ್ ಕರೆ.

ಸುರಪುರ ಟೈಮ್ಸ್ ವಾರ್ತೆ
ಸುರಪುರ: ಕ್ರೀಡೆ ಮಾನವ ಜೀವನದಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ನೀಡುವ ಮಹತ್ವದ ಅಂಶವಾಗಿದೆ ಎಂದು ಮಾಜಿ ಸಚಿವರು ಹಾಗೂ ಬಿಜೆಪಿಯ ರಾಜ್ಯ ಉಪಾಧ್ಯಕ್ಷ ನರಸಿಂಹ ನಾಯಕ (ರಾಜುಗೌಡ) ಹೇಳಿದರು.


ನಗರದ ರಂಗಂಪೇಟೆಯ ವೀರಶೈವ ಕಲ್ಯಾಣ ಮಂಟಪದ ಆವರಣದಲ್ಲಿ ಹಮ್ಮಿಕೊಂಡಿದ್ದ ಎನ್‌ಆರ್‌ಜಿ ಟ್ರೋಫಿ–2026 ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕೆಲವರು ಕ್ರಿಕೆಟ್ ಆಟದ ಬಗ್ಗೆ ಟೀಕೆ ಮಾಡುತ್ತಾರೆ. ಆದರೆ ಅದೇ ಜನರು ನಾಲ್ಕು ಗೋಡೆಗಳೊಳಗೆ ಕುಳಿತು ಇಸ್ಪೇಟ್ ಆಡುತ್ತಾರೆ. ಅದು ಒಳ್ಳೆಯದೆಯೇ ಎಂಬುದನ್ನು ಯೋಚಿಸಬೇಕು ಎಂದು ಹೇಳಿದರು.
“ನಾನು ಮೂರು ಬಾರಿ ಶಾಸಕನಾಗಿದ್ದರೂ ಈಗ ಸೋತಿದ್ದೇನೆ. ಆದರೂ ನಾನು ನೆಮ್ಮದಿಯಿಂದ ಇದ್ದೇನೆ ಎಂದರೆ ಅದಕ್ಕೆ ಕಾರಣ ನಾನು ಕ್ರೀಡಾಪಟುವಾಗಿರುವುದು,” ಎಂದು ತಮ್ಮ ಅನುಭವ ಹಂಚಿಕೊಂಡರು.
“ನನ್ನ ಜನ – ನನ್ನ ಕ್ಷೇತ್ರ” ಎಂಬ ಘೋಷಣೆಯೊಂದಿಗೆ ಈ ಟೂರ್ನಮೆಂಟ್ ಆರಂಭವಾಗಿದ್ದು, ಒಟ್ಟು 360 ತಂಡಗಳು ಭಾಗವಹಿಸುತ್ತಿವೆ ಎಂದು ತಿಳಿಸಿದರು.


ಸುರಪುರ ಮತ್ತು ಹುಣಸಗಿ ತಾಲೂಕಿನ 8 ಮೈದಾನಗಳಲ್ಲಿ ಪಂದ್ಯಗಳು ನಡೆಯಲಿದ್ದು, ಎಲ್ಲಾ ತಂಡಗಳಿಗೆ ಸಮವಸ್ತ್ರಗಳನ್ನು ನೀಡಲಾಗುತ್ತಿದೆ. ಎಲ್ಲಾ ಕ್ರೀಡಾಪಟುಗಳು ಕ್ರೀಡಾ ಮನೋಭಾವದಿಂದ ಯಾವುದೇ ವಿವಾದವಿಲ್ಲದೆ ಆಟವಾಡಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಖ್ಯಾತ ಚಲನಚಿತ್ರ ನಿರ್ದೇಶಕ ತರುಣ್ ಸುಧೀರ್ ಮಾತನಾಡಿ, “ರಾಜುಗೌಡರಿಗೆ ಕ್ರೀಡೆಯ ಮೇಲಿರುವ ಆಸಕ್ತಿ ನೋಡಿ ಸಂತೋಷವಾಗುತ್ತದೆ. ಇಂತಹ ದೊಡ್ಡ ಮಟ್ಟದ ಟೂರ್ನಮೆಂಟ್ ಈ ಕ್ಷೇತ್ರದಲ್ಲಿ ನಡೆಯುತ್ತಿರುವುದು ಹೆಮ್ಮೆಯ ಸಂಗತಿ. ಇಲ್ಲಿನ ಯುವಕರು ಮುಂದಿನ ದಿನಗಳಲ್ಲಿ ಐಪಿಎಲ್ ಮಟ್ಟದ ಆಟಗಾರರಾಗಲಿ,” ಎಂದು ಹಾರೈಸಿದರು.


ಕಾರ್ಯಕ್ರಮದಲ್ಲಿ ರಾಜಾ ಹನುಮಪ್ಪ ನಾಯಕ ತಾತಾ, ಹಣಮಂತ ನಾಯಕ ಬಬ್ಲುಗೌಡ,  ಡಾ.ಬಿ ಎಮ್ ಅಳ್ಳಿಕೋಟಿ,ರಾಜಾ ಮುಕುಂದ ನಾಯಕ, ಶಂಕರ ನಾಯಕ, ಬಸವರಾಜ ಸ್ವಾಮಿ ಸ್ಥಾವರ ಮಠ, ಡಾಕ್ಟರ್ ಸುರೇಶ್ ಆರ್ ಸಜ್ಜನ್ ಹೆಚ್.ಸಿ. ಪಾಟೀಲ, ಯಲ್ಲಪ್ಪ ಕುರಕುಂದಿ , ಪ್ರಕಾಶ ಸಜ್ಜನ ಮಹೇಶ ಪಾಟೀಲ್,,ಶ್ರೀನಿವಾಸ ನಾಯಕ ದರಬಾರಿ ಸೇರಿದಂತೆ ಅನೇಕ ಮುಖಂಡರು ಹಾಗೂ ಸಾವಿರಾರು ಕ್ರೀಡಾಭಿಮಾನಿಗಳು ಭಾಗವಹಿಸಿದ್ದರು.



ಟೂರ್ನಮೆಂಟ್ ವಿಶೇಷತೆಗಳು:
8 ಮೈದಾನಗಳು | 360 ತಂಡಗಳು | ಪ್ರತಿದಿನ 3 ಪಂದ್ಯಗಳು | 12 ಓವರ್‌ಗಳ ಪಂದ್ಯ | ಒಬ್ಬ ಬೌಲರ್‌ಗೆ ಗರಿಷ್ಠ 3 ಓವರ್ | ಕ್ವಾರ್ಟರ್, ಸೆಮಿ, ಫೈನಲ್ ಪಂದ್ಯಗಳ ಟಿವಿ ನೇರ ಪ್ರಸಾರ
ಪ್ರೋತ್ಸಾಹ:
ನಾರಾಯಣಪುರದ ಬಾಲ ಕ್ರೀಡಾಪಟು ಮಣಿಕಂಠಗೆ ಬ್ಯಾಟ್ ನೀಡಿ, “ಮುಂದೆ ಐಪಿಎಲ್ ಆಡಲಿ” ಎಂದು ರಾಜುಗೌಡ ಶುಭ ಹಾರೈಸಿದರು.
ಸನ್ಮಾನ:
ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ರಾಜ್ಯಕ್ಕೆ 10ನೇ ರ್ಯಾಂಕ್ ಪಡೆದ ರಂಗಂಪೇಟೆಯ ಮದನಕುಮಾರ್ ಎಲಿಗಾರ ಅವರನ್ನು ಸನ್ಮಾನಿಸಲಾಯಿತು.
ಭವಿಷ್ಯದ ಭರವಸೆ:
ಈ ವರ್ಷದ ಪಂದ್ಯಾವಳಿ ಯಶಸ್ವಿಯಾದರೆ ಮುಂದಿನ ಬಾರಿ ಇನ್ನಷ್ಟು ದೊಡ್ಡ ಮಟ್ಟದಲ್ಲಿ ಆಯೋಜನೆ ಮಾಡುವುದಾಗಿ ರಾಜುಗೌಡ ಭರವಸೆ ನೀಡಿದರು.
ಮನರಂಜನೆ ರಂಗು:
ಖ್ಯಾತ ಗಾಯಕ ಕರಿಬಸವಯ್ಯ ಪೂಜಾ ವಿಭೂತಿಮಠ ಮತ್ತು ತಂಡದಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು. ಸಿನೆಮಾ ಹಾಡುಗಳಿಗೆ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಯಿತು.

ಕಾರ್ಯಕ್ರಮವನ್ನು ಕರ್ನಾಟಕ ಜಾನಪದ ಅಕಾಡೆಮಿ ನಿಕಟಪೂರ್ವ ಸದಸ್ಯ ಅಮರಯ್ಯ ಸ್ವಾಮಿ ಜಾಲಿಬೆಂಚಿ ನಿರೂಪಿಸಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!