ಮನೆಗೊಂದು ಗ್ರಂಥಾಲಯ ಅಭಿಯಾನಕ್ಕೆ ಚಾಲನೆ: 1 ಲಕ್ಷ ಮನೆಗಳಲ್ಲಿ ಗ್ರಂಥಾಲಯ ಗುರಿ;ಡಾ.ಮಾನಸ


ಸುರಪುರ ಟೈಮ್ಸ್ ವಾರ್ತೆ ಸುರಪುರ :ಪುಸ್ತಕ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ “ಮನೆಗೊಂದು ಗ್ರಂಥಾಲಯ” ಅಭಿಯಾನಕ್ಕೆ ರಾಜ್ಯಾದ್ಯಂತ ಚಾಲನೆ ನೀಡಲಾಗಿದ್ದು, ಒಂದು ಲಕ್ಷ ಮನೆಗಳಲ್ಲಿ ಗ್ರಂಥಾಲಯ ಸ್ಥಾಪಿಸುವ ಮಹತ್ವಾಕಾಂಕ್ಷಿ ಗುರಿ ಹೊಂದಲಾಗಿದೆ.
ನಗರದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶರಣಬಸಪ್ಪ ಯಾಳವಾರ ಅವರ ಮನೆಯಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು ಹಾಗೂ ಮನೆಗೊಂದು ಗ್ರಂಥಾಲಯ ಜಿಲ್ಲಾ ಜಾಗೃತಿ ಸಮಿತಿ ಯಾದಗಿರಿ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಅನುಷ್ಠಾನ ಸಮಾರಂಭವನ್ನು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಉದ್ಘಾಟಿಸಿ ಮಾತನಾಡಿದರು.
ಪುಸ್ತಕ ಓದುವ ಹವ್ಯಾಸವನ್ನು ಬೆಳೆಸುವುದು ಇಂದಿನ ಕಾಲದಲ್ಲಿ ಅತ್ಯವಶ್ಯಕವಾಗಿದ್ದು, ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಗ್ರಂಥಾಲಯ ಸ್ಥಾಪಿಸಲು ಮುಂದಾಗಬೇಕು. ಪುಸ್ತಕಗಳು ವ್ಯಕ್ತಿಗೆ ಜ್ಞಾನ ನೀಡುವುದಲ್ಲದೆ ಉತ್ತಮ ವ್ಯಕ್ತಿತ್ವ ರೂಪಿಸಲು ಸಹಕಾರಿಯಾಗುತ್ತವೆ ಎಂದು ಹೇಳಿದರು. ಮನೆಗಳಲ್ಲಿ ಗ್ರಂಥಾಲಯಗಳ ಸ್ಥಾಪನೆಯಿಂದ ಮಕ್ಕಳಲ್ಲಿ ಓದುವ ಆಸಕ್ತಿ ಹೆಚ್ಚಿಸಿ, ಮೊಬೈಲ್ ಮತ್ತು ಟಿವಿ ಬಳಕೆಯನ್ನು ಕಡಿಮೆ ಮಾಡಲು ಸಹಾಯಕವಾಗುತ್ತದೆ ಎಂದರು. �
ಪ್ರತಿ ಮನೆಯಲ್ಲೂ ಒಂದು ಕೋಣೆಯನ್ನು ಗ್ರಂಥಾಲಯಕ್ಕಾಗಿ ಮೀಸಲಿಟ್ಟು ಪುಸ್ತಕ ಸಂಗ್ರಹಿಸುವ ಸಂಸ್ಕೃತಿ ಬೆಳೆಸಬೇಕು. ಪುಸ್ತಕವಿಲ್ಲದ ಮನೆ ಆತ್ಮವಿಲ್ಲದ ದೇಹದಂತಿದೆ ಎಂದು ತಿಳಿಸಿದರು. �
ಮನೆಗೊಂದು ಗ್ರಂಥಾಲಯ ಜಾಗೃತಿ ಸಮಿತಿ ಜಿಲ್ಲಾ ಸಂಚಾಲಕ ಪ್ರಕಾಶ ಅಂಗಡಿ ಕನ್ನಳ್ಳಿ ಮಾತನಾಡಿ, ಸುರಪುರ ತಾಲೂಕಿನಲ್ಲಿ ಸಾಕಷ್ಟು ಬರಹಗಾರರಿದ್ದು, ಇಲ್ಲಿ ಪುಸ್ತಕ ಪ್ರಕಟಣೆ ಹೆಚ್ಚು ನಡೆಯುತ್ತಿದೆ. ಈ ನಿಟ್ಟಿನಲ್ಲಿ ನಗರದಲ್ಲಿ ಈಗಾಗಲೇ 15 ಮನೆಗಳಲ್ಲಿ ಗ್ರಂಥಾಲಯಗಳನ್ನು ಅನುಷ್ಠಾನಗೊಳಿಸುವ ಕಾರ್ಯ ಆರಂಭಿಸಲಾಗಿದೆ ಎಂದು ಹೇಳಿದರು.
ಕೆವೈಡಿಸಿಸಿ ಬ್ಯಾಂಕ್ ನಿರ್ದೇಶಕ ಸುರೇಶ ಸಜ್ಜನ್ ಮಾತನಾಡಿ, ಪ್ರಾಧಿಕಾರದ ಈ ಯೋಜನೆ ಶ್ಲಾಘನೀಯವಾಗಿದ್ದು, ಮುಂದಿನ ದಿನಗಳಲ್ಲಿ ಪ್ರತಿಯೊಂದು ಮನೆಯಲ್ಲೂ ಗ್ರಂಥಾಲಯ ಸ್ಥಾಪಿಸುವ ಕಾರ್ಯ ಹೆಚ್ಚಳವಾಗಬೇಕು. ಗ್ರಂಥಾಲಯ ಆರಂಭಿಸಿದವರನ್ನು ಗೌರವಿಸುವ ಮೂಲಕ ಮತ್ತಷ್ಟು ಜನರನ್ನು ಪ್ರೇರೇಪಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಾನಪದ ಶ್ರೀ ಪ್ರಶಸ್ತಿ ಪುರಸ್ಕೃತ ಜಾನಪದ ಕಲಾವಿದ ಲಕ್ಷ್ಮಣ ಗುತ್ತೇದಾರ್ ಅವರಿಗೆ ಸನ್ಮಾನಿಸಲಾಯಿತು. ಜಾಗೃತಿ ಸಮಿತಿ ಸದಸ್ಯ ಕನಕಪ್ಪ ವಾಗಣಗೇರಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಶರಣಯ್ಯಸ್ವಾಮಿ ಮಠಪತಿ, ಶರಣಬಸಪ್ಪ ಯಾಳವಾರ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕ ದೇವು ಹೆಬ್ಬಾಳ ನಿರೂಪಿಸಿ ವಂದಿಸಿದರು.
ಪ್ರತಿ ಮನೆಯಲ್ಲೂ ಗ್ರಂಥಾಲಯ ಸ್ಥಾಪನೆ ಮಾಡುವುದು ಕಾಲದ ಅವಶ್ಯಕತೆ. ಈ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕು.”
– ಸುರೇಶ ಸಜ್ಜನ್, ಕೆವೈಡಿಸಿಸಿ ಬ್ಯಾಂಕ್ ನಿರ್ದೇಶಕರು.

Leave a Reply

Your email address will not be published. Required fields are marked *

error: Content is protected !!