ಏ.21 ಶಂಕರಾಚಾರ್ಯರು, ಏ.23 ಭಗೀರಥ ಜಯಂತಿ – ಕಡ್ಡಾಯ ಆಚರಣೆ : ಹೆಚ್.ಎ. ಸರಕಾವಸ್

ಸುರಪುರ ಟೈಮ್ಸ್ ವಾರ್ತೆ
ಸುರಪುರ: ತಾಲೂಕು ಆಡಳಿತದ ವತಿಯಿಂದ ಜಗದ್ಗುರು ಶಂಕರಾಚಾರ್ಯರ ಜಯಂತಿ ಹಾಗೂ ಮಹರ್ಷಿ ಭಗೀರಥ ಜಯಂತಿಯನ್ನು ಕಡ್ಡಾಯವಾಗಿ ಆಚರಿಸಲಾಗುವುದು ಎಂದು ತಹಸೀಲ್ದಾರ್ ಹೆಚ್.ಎ. ಸರಕಾವಸ್ ತಿಳಿಸಿದ್ದಾರೆ.
ನಗರದ ಪ್ರಜಾಸೌಧದಲ್ಲಿ ಶನಿವಾರ ನಡೆದ ಜಯಂತಿಗಳ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಏಪ್ರಿಲ್ 21ರಂದು ಜಗದ್ಗುರು ಶಂಕರಾಚಾರ್ಯರ ಜಯಂತಿ ಮತ್ತು ಏಪ್ರಿಲ್ 23ರಂದು ಮಹರ್ಷಿ ಭಗೀರಥ ಜಯಂತಿಯನ್ನು ಬೆಳಗ್ಗೆ 10 ಗಂಟೆಗೆ ತಹಸೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಆಚರಿಸಲಾಗುವುದು ಎಂದು ಹೇಳಿದರು.
ಜಯಂತಿಗಳ ಅಂಗವಾಗಿ ಸಮುದಾಯಗಳ ಸಲಹೆಯಂತೆ ಸಾನ್ನಿಧ್ಯ ವಹಿಸಲು ಹಾಗೂ ಉಪನ್ಯಾಸ ನೀಡಲು ಸಂಪನ್ಮೂಲ ವ್ಯಕ್ತಿಗಳನ್ನು ಆಹ್ವಾನಿಸಲಾಗುವುದು. ತಾಲೂಕು ಆಡಳಿತ ಆಯೋಜಿಸಿರುವ ಈ ಕಾರ್ಯಕ್ರಮಗಳಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಬೇಕು ಎಂದು ಸೂಚಿಸಿದರು.
ಇದಲ್ಲದೆ, ತಾಲೂಕಿನ ಎಲ್ಲಾ ಶಾಲೆಗಳು, ಕಾಲೇಜುಗಳು ಹಾಗೂ ಸರ್ಕಾರಿ ಕಚೇರಿಗಳಲ್ಲಿಯೂ ಸಹ ಜಯಂತಿಯನ್ನು ಕಡ್ಡಾಯವಾಗಿ ಆಚರಿಸಬೇಕು. ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕು ಎಂದು ತಹಸೀಲ್ದಾರ್ ನಿರ್ದೇಶಿಸಿದರು.
ಸಭೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ಆರ್.ವಿ. ನಾಯಕ, ಉಪ ನೋಂದಣಾಧಿಕಾರಿ ಗುರುರಾಜ್ ಸಜ್ಜನ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!