ಸಂವಿಧಾನ ಶಿಲ್ಪಿ ಜಯಂತಿಗೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗೈರು
ಸುರಪುರ ಟೈಮ್ಸ್ ವಾರ್ತೆ
ಸುರಪುರ: ತಾಲೂಕಿನ ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿಗಳ ಕಚೇರಿಯಲ್ಲಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅನಿಲ್ ಕಾಂಬಳೆ ಗೈರಾಗುವ ಮೂಲಕ ಅಸಡ್ದೆ ತೋರಿದ್ದಾರೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಜಯಂತಿ ಅಂಗವಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ತಾಲೂಕು ದಂಡಾಧಿಕಾರಿಗಳು ಡಾ. ಬಿಆರ್ ಅಂಬೇಡ್ಕರ್ ಅವರ 134 ನೇ ಜಯಂತಿಯನ್ನು ಅತ್ಯಂತ ವಿಜ್ರಂಬಣೆಯಿಂದ ಆಚರಿಸಬೇಕು ಮತ್ತು ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರುವಂತೆ ಸೂಚಿಸಿದ್ದಾರೆ. ಆದರೂ ಸಹ ಜಿಲ್ಲಾಧಿಕಾರಿಗಳು ಮತ್ತು ತಾಲೂಕ ದಂಡಾಧಿಕಾರಿಗಳ ಆದೇಶಕ್ಕೂ ಕ್ಯಾರೆಯನ್ನದೆ ದುರ್ವರ್ತನೆ ತೋರುತ್ತಿದ್ದಾರೆ.
ಇನ್ನೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ನಡೆದ ಜಯಂತಿ ಕಾರ್ಯಕ್ರಮದಲ್ಲಿ ಕೆಳಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ ಜಯಂತಿ ಆಚರಿಸಲಾಗಿದೆ. ತಮ್ಮ ಕಚೇರಿಯಲ್ಲಿ ನಡೆದ ಕಾರ್ಯಕ್ರಮಕ್ಕೂ ತಾಲೂಕ ಆಡಳಿತ ವತಿಯಿಂದ ನಡೆದ ಕಾರ್ಯಕ್ರಮಕ್ಕೂ ಗೈರಾಗಿದ್ದಾರೆ.
ಹಲವು ಮಹನೀಯರ ಜಯಂತೋತ್ಸವ ಕಾರ್ಯಕ್ರಮಕ್ಕೆ ಎಲ್ಲಾ ಇಲಾಖೆಯ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರಲು ಸರಕಾರ ಆದೇಶಿಸಿದ್ದರೂ, ಕೆಳಮಟ್ಟದ ಸಿಬ್ಬಂದಿಗೆ ಭಾವಚಿತ್ರಕ್ಕೆ ಪೂಜೆ ಮಾಡಲು ಹೇಳಿ ರಜಾ ದಿನ ಮಜಾ ಮಾಡುತ್ತಾರೆ’ ಎಂದು ಪ್ರಗತಿಪರರು ಹರಿಹಾಯ್ದರು.
ಸರ್ಕಾರದ ಆದೇಶವನ್ನು ಪಾಲಿಸಬೇಕಾದ ಅಧಿಕಾರಿಗಳೇ ಕಾಟಚಾರಕ್ಕೆ ಜಯಂತಿಗಳನ್ನು ಆಚರಿಸಿದರೆ ಹೇಗೆ, ಜವಾಬ್ದಾರಿಯುತ ಸ್ಥಾನದಲ್ಲಿರುವವರೇ ಹೀಗೆ ನಡೆದುಕೊಂಡರೆ ಹೇಗೆ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಕಳೆದ ಕೆಲ ದಿನಗಳಿಂದ ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿ ಕಚೇರಿಗೆ ಗೈರಾಗಿದ್ದಾರೆಂದು ತಿಳಿದು ಬಂದಿದೆ.

