ಕನ್ನಡ ಪರ ಸಂಘಟನೆಗಳ ಒಕ್ಕೂಟ ಒತ್ತಾಯ, ಬೇರೆ ಭಾಷೆಯ ನಾಮಫಲಕಗಳ ತೆರವಿಗೆ ಒಂದು ವಾರ ಗಡುವು


ಸುರಪುರ ಟೈಮ್ಸ್ ವಾರ್ತೆ
ಸುರಪುರ : ನಗರಸಭೆ ವ್ಯಾಪ್ತಿಯ ಸರಕಾರಿ, ಖಾಸಗಿ ಕಚೇರಿ ಹಾಗೂ ವಾಣಿಜ್ಯ ಮಳಿಗೆ, ಅಂಗಡಿ-ಮುಗಟ್ಟುಗಳ ಮೇಲೆ ಇರುವ ಬೇರೆ ಭಾಷೆಯ ನಾಮಫಲಕಗಳನ್ನು ತೆರವುಗೊಳಿಸಬೇಕು ಎಂದು ಸಾಮೂಹಿಕ ಕನ್ನಡ ಪರ ಸಂಘಟನೆಗಳ ಒಕ್ಕೂಟದವರು ಒತ್ತಾಯಿಸಿದರು.
ನಗರಸಭೆ ಮುಂದೆ ಸೋಮವಾರ ಪ್ರತಿಭಟಿಸಿ ನಂತರ ಪೌರಾಯುಕ್ತರಿಗೆ ಈ ಕುರಿತು ಮನವಿ ಸಲ್ಲಿಸಿ ಮಾತನಾಡಿದ ಅವರು, ನಗರಸಭೆ ವ್ಯಾಪ್ತಿಯಲ್ಲಿ ಬರುವ ಸರಕಾರಿ, ಖಾಸಗಿ ಕಚೇರಿ ಹಾಗೂ ವಾಣಿಜ್ಯ ಮಳಿಗೆಗಳ ಅಂಗಡಿಗಳ ಮೇಲೆ ಕರ್ನಾಟಕ ಸರಕಾರ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ) ಅಧಿ ನಿಯಮ 2024 ರ ಪ್ರಕಾರ ಎಲ್ಲಾ ಸರಕಾರಿ, ಖಾಸಗಿ ಹಾಗೂ ಸ್ವಾಯತ್ತ ಸಂಸ್ಥೆಗಳ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಭಾಷೆ ನಾಮಫಲಕ ಅಳವಡಿಸುವುದು ಕಡ್ಡಾಯವೆಂದು ಆದೇಶಿಸಿದೆ ಎಂದರು.
ಈ ನಿಯಮವನ್ನು ಫೆ.26. 2024ರಂದು ಗೆಜೆಟಿನಲ್ಲಿ ಪ್ರಕಟಿಸಲಾಗಿದ್ದು, ಫೆ.29, 2024 ರಂದು ಜಾರಿಗೆ ಬಂದಿದೆ. ಆದರೂ ಕೂಡ ಇದುವರೆಗೂ ಸಂಬಂಧಿಸಿದ ಸಂಸ್ಥೆಗಳಾದ ಸರಕಾರಿ ಇಲಾಖೆಗಳು, ಸ್ವಾಯತ್ತ ಸಂಸ್ಥೆಗಳು, ಸಹಕಾರ ಮತ್ತು ಸಾರ್ವಜನಿಕ ಉದ್ಯಮಗಳು, ಶೈಕ್ಷಣಿಕ ಸಂಸ್ಥೆಗಳು, ಬ್ಯಾಂಕ್‌ಗಳು, ಹಣಕಾಸು ಸಂಸ್ಥೆಗಳು, ಖಾಸಗಿ ಕೈಗಾರಿಕೆಗಳು, ಹೊಟೇಲ್‌ಗಳು, ಮನರಂಜನಾ, ಧಾರ್ಮಿಕ ಕೇಂದ್ರಗಳು ಸೇರಿ ಇತರೆ ವ್ಯಾಪಾರ ಸಂಸ್ಥೆಗಳಿಗೆ ಹಲವಾರು ಬಾರಿ ಮೌಖಿಕವಾಗಿ ಹಾಗೂ ಲಿಖಿತವಾಗಿ ನಗರಸಭೆ ವತಿಯಿಂದ ನೋಟಿಸ್ ನೀಡುತ್ತಾ ಬಂದಿದ್ದರು ಸಹ ಇದುವರೆಗೂ ಶೇ.60 ರಷ್ಟು ನಾಮಫಲಕ ಕಡ್ಡಾಯವಾಗಿ ಅಳವಡಿಸಿರುವುದನ್ನು ನಾವು ಖಂಡಿಸುತ್ತೇವೆ ಎಂದು ತಿಳಿಸಿದರು.
ಇಂದು ನಾವು ನೀಡಿರುವ ಮನವಿಗೆ ಸ್ಪಂದಿಸಿ ಒಂದು ವಾರದೊಳಗೆ ಬೇರೆ ಭಾಷೆಯ ನಾಮಫಲಕ ತೆರವುಗೊಳಿಸಿ ಕೂಡಲೇ ಶೇ.60 ರಷ್ಟು ಕನ್ನಡ ನಾಮಫಲಕ ಅಳವಡಿಸದಿದ್ದರೆ ನಾವೇ ಖುದ್ದಾಗಿ ಬೀದಿಗಿಳಿದು ಸಾರ್ವಜನಿಕರು, ವಿವಿಧ ಸಂಘಟನೆಗಳೊಂದಿಗೆ ತೆರವುಗೊಳಿಸುವ ಕಾರ್ಯ ಮಾಡಬೇಕಾಗುತ್ತದೆ. ಏನಾದರೂ ಅನಾಹುತಗಳಾದರೆ ಅದಕ್ಕೆ ತಮ್ಮ ಇಲಾಖೆಯೆ ನೇರ ಹೊಣೆಯಾಗುತ್ತದೆ ಎಂದು ಎಚ್ಚರಿಸಿದ ಅವರು, ಇದಕ್ಕೆ ಆಸ್ಪದ ನೀಡದೆ ಕೂಡಲೇ ತೆರವುಗೊಳಿಸುವ ಕಾರ್ಯ ಆರಂಭಿಸಬೇಕು ಎಂದು ಹೇಳಿದರು. ನಗರಸಭೆ ಪೌರಯುಕ್ತ ಬಸವರಾಜ ಟಣಕೇದಾರ್ ಮನವಿ ಸ್ವೀಕರಿಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದವರುವಿವಿಧ ಕನ್ನಡ ಪರ ಸಂಘಟನೆಗಳ ಮುಖಂಡರಾದ ವೆಂಕಟೇಶ ನಾಯಕ ಬೈರಿಮಡ್ಡಿ, ಶಿವಮೋನಯ್ಯ ಎಲ್‌ಡಿ ನಾಯಕ, ಭೀಮು ನಾಯಕ ಮಲ್ಲಿಬಾವಿ, ಭೀಮನಗೌಡ ಲಕ್ಷ್ಮೀಹೆಮನೂರ, ನಿಂಗಪ್ಪ ನಾಯಕ ಬಿಜಾಸಪೂರ, ಗೋಪಾಲ ದೊರೆ ಸತ್ಯಂಪೇಟೆ, ಯಲ್ಲಪ್ಪ ನಾಯಕ ಕಬಾಡಗೇರಿ, ಮಲ್ಲು ವಿಷ್ಣು ಸೇನೆ, ಮಲ್ಲು ಕವಡಿಮಟ್ಟಿ, ಶಿವರಾಜ ವಗ್ಗರ, ರಂಗಪ್ಪ ನಾಯಕ ವನದುರ್ಗ, ನಾಗರಾಜ ನಾಯಕ ಪ್ಯಾಪ್ಲಿ, ತಿಮ್ಮಯ್ಯ ತಳವಾರ, ನಾಗೇಂದ್ರ ದೊರೆ, ಮಲ್ಲು ಬೇವಿನಾಳ, ವಿನೋದ ನಾಯಕ, ವಿಜಯ ಕುಮಾರ, ಶ್ರೀಶೈಲ ಕಚಾಪುರ, ಕೃಷ್ಣ ಹಾವಿನ, ಕುಮಾರ, ಹಣಮಂತ ಭಂಡಾರಿ, ರವಿ ಟರ್ಕಿ, ಲಕ್ಷಣ ಯಾದವ, ಭೀಮಾಶಂಕರ ದೇವಿಕೇರಿ, ಈಶ್ವರಪ್ಪ ದಿವಳಗುಡ್ಡ, ನಾಗರಾಜ ನಂಬಾ, ಯಲ್ಲಪ್ಪ ರತ್ತಾಳ, ಅನಿಲ ಬಿರಾದಾರ, ಬಸವರಾಜ ಶಹಾಪೂರ, ರಘುವೀರ ದೇಸಾಯಿ, ಹೆಚ್.ಎಸ್.ಮಾಲಿಗೌಡ ಸೇರಿ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಫೋಟೊ : ಸುರಪುರ ಸಾಮೂಹಿಕ ಕನ್ನಡ ಪರ ಸಂಘಟನೆಗಳ ಒಕ್ಕೂಟದವರು ನಗರಸಭೆ ಪೌರಾಯುಕ್ತರಿಗೆ ಮನವಿ ಪತ್ರ ಸಲ್ಲಿಸಿದರು.

Leave a Reply

Your email address will not be published. Required fields are marked *

error: Content is protected !!