ಪೌರ ಕಾರ್ಮಿಕರು ಕಾಯಕ ನಿಷ್ಠರು, ಅವರ ಸೇವೆ ಅಪ್ರತಿಮ ; ವೇಣುಮಾಧವ ನಾಯಕ
ಸುರಪುರ ಟೈಮ್ಸ್ ವಾರ್ತೆ
ಸುರಪುರ : ತಮ್ಮ ಆರೋಗ್ಯವನ್ನು ಲೆಕ್ಕಿಸದೆ ನಗರದ ಸ್ವಚ್ಛತೆಗಾಗಿ ಹಗಲಿರುಳು ಶ್ರಮಿಸಿ ಜನರ ಆರೋಗ್ಯವನ್ನು ಕಾಪಾಡುವಂತಹ ಕಾರ್ಯ ಮಾಡುವ ಪೌರ ಕಾರ್ಮಿಕರು ಕಾಯಕ ನಿಷ್ಠರು ಅವರ ಸೇವೆ ಅತ್ಯಂತ ಅಪ್ರತಿಮವಾಗಿದೆ ಎಂದು ನಗರಸಭೆ ಪ್ರತಿ ಪಕ್ಷದ ನಾಯಕ ವೇಣುಮಾಧವ ನಾಯಕ ಹೇಳಿದರು.
ಇಲ್ಲಿಯ ನಗರಸಭೆ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪೌರಕಾರ್ಮಿಕರ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ನಗರದ ಅಭಿವೃದ್ಧಿ ಮತ್ತು ಸೌಂದರೀಕರಣದಲ್ಲಿ ನಗರಸಭೆ ಪೌರಕಾರ್ಮಿಕರ ಶ್ರಮ ಅಪಾರವಾಗಿದೆ. ಪೌರ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ನಿರಂತರವಾಗಿ ನಡೆಯಬೇಕು. ಅವರಿಗೆ ಸಂಕಷ್ಟ ಭತ್ಯೆ, ಬೆಳಗಿನ ಉಪಹಾರ, ಆಶ್ರಯ ಮನೆ ಸೇರಿ ಹೆಚ್ಚಿನ ಮಟ್ಟದಲ್ಲಿ ಸೌಲಭ್ಯಗಳನ್ನು ಒದಗಿಸಬೇಕು. ಪೌರ ಕಾರ್ಮಿಕರು ಕೂಡ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ಸಲಹೆ ನೀಡಿದರು.
ನಗರಸಭೆ ವ್ಯವಸ್ಥಾಪಕ ಯಲ್ಲಪ್ಪ ನಾಯಕ ಡೊಣ್ಣಿಗೇರಿ ಮತ್ತು ಎಇಇ ಶಾಂತಪ್ಪ ಹೂಸೂರು ಮಾತನಾಡಿ, ನಾಗರಿಕ ಸಮಾಜದ ಶುಚಿತ್ವಕ್ಕಾಗಿ ದುಡಿಯುತ್ತ ಸಮಾಜದ ಆರೋಗ್ಯ ಕಾಯುವ ಇವರು ಕೇವಲ ಪೌರ ಕಾರ್ಮಿಕರಲ್ಲ, ಪೌರ ರಕ್ಷಕರು. ಅವರು ಸಾರ್ವಜನಿಕರಿಗೆ ಒಳ್ಳೆಯ ಸೇವೆ ಸಲ್ಲಿಸುತ್ತಾರೆ. ಪೌರ ಕಾರ್ಮಿಕರು ಸಹ ತಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕು. ಸರಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಮಕ್ಕಳನ್ನು ವಿದ್ಯಾವಂತರನ್ನಾಗಿಸಬೇಕು ಎಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ನಗರಸಭೆ ಪೌರಯುಕ್ತ ಬಸವರಾಜ ಟಣಕೆದಾರ ಮಾತನಾಡಿ, ದೇಶದ ರಕ್ಷಣೆಗೆ ಗಡಿಯನ್ನು ಕಾಯುವವರು ಸೈನಿಕರಾದರೆ, ನಗರದ ನೈರ್ಮಲ್ಯವನ್ನು ನಿರಂತರವಾಗಿ ಕಾಪಾಡಲು ಶ್ರಮಿಸುವ ಪೌರ ಕಾರ್ಮಿಕರು ಕೂಡಾ ಸೈನಿಕರೇ. ನಗರದ ಸ್ವಚ್ಛತೆ ಸೇರಿ ಸಾರ್ವಜನಿಕರಿಗೆ ಹಲವು ಮೂಲ ಸೌಕರ್ಯಗಳನ್ನು ಒದಗಿಸುವ ಪೌರ ಕಾರ್ಮಿಕರ ಸೇವೆಗೆ ಬೆಲೆ ಕಟ್ಟಲಾಗದು. ನಗರ ಸ್ವಚ್ಛ ಹಾಗೂ ಸುಂದರವಾಗಿಡಲು ಶ್ರಮಿಸುತ್ತಿರುವವರು ನಮ್ಮ ಪೌರ ಕಾರ್ಮಿಕರು ಎಂದು ಹೆಮ್ಮೆಯಿಂದ ಹೇಳಬೇಕು ಎಂದರು.
ನಗರಸಭೆ ಅಧ್ಯಕ್ಷೆ ಹೀನಾ ಕೌಸರ್ ಉದ್ಘಾಟಿಸಿದರು. ನಗರಸಭೆ ಸದಸ್ಯರಾದ ಮಾನಪ್ಪ ಚಳ್ಳಿಗಿಡ, ನಾಸೀರ್ ಕುಂಡಾಲೆ, ಪೌರ ಸೇವಾ ನೌಕರರ ಸಂಘದ ಅಧ್ಯಕ್ಷೆ ಶಿವಲೀಲಾ, ಉಪಾಧ್ಯಕ್ಷ ಪಂಪಣ್ಣ, ಮುಖಂಡ ಶಕೀಲ್ ಅಹ್ಮದ್ ವೇದಿಕೆಯಲ್ಲಿದ್ದರು. ಪ್ರಾರಂಭದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಮಾಜಿ ಸಚಿವ ಬಿ.ಬಸವಲಿಂಗಪ್ಪ ಅವರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಲಾಯಿತು. ಪೌರ ಕಾರ್ಮಿಕರ ಮೇಲ್ವಿಚಾರಕರಾದ ಮಲ್ಲಣ್ಣ, ಶರಣಪ್ಪ ತೇಲ್ಕರ್ ಅವರಿಗೆ ಗೌರವಿಸಲಾಯಿತು. ನಂತರ 40 ಪೌರ ಕಾರ್ಮಿಕರಿಗೆ ವಿಶೇಷ ಭತ್ಯ ವಿತರಣೆಯ ಚೆಕ್ ವಿತರಿಸಲಾಯಿತು. ಆರೋಗ್ಯ ನಿರೀಕ್ಷರಾದ ಹಣಮಂತ ಯಾದವ, ಗುರುಸ್ವಾಮಿ, ಮಹಿಬೂಬ್ ಸೇರಿ ನಗರಸಭೆ ಅಧಿಕಾರಿ ಹಾಗೂ ಸಿಬ್ಬಂದಿಗಳು, ಸುರಪುರ-ರಂಗಂಪೇಟೆಯ ಪೌರ ಕಾರ್ಮಿಕರು ಇದ್ದರು. ದುರ್ಗಪ್ಪ ನಾಯಕ ಬಿಚ್ಚಗತ್ತಗೇರಿ ನಿರೂಪಿಸಿದರು. ಸಂಗಮ್ಮ ಸ್ವಾಗತಿಸಿದರು. ಮಹೇಶ ಮಾಳಗಿ ವಂದಿಸಿದ್ದರು.








