ರುಕ್ಮಾಪುರ ಗ್ರಾಮದಲ್ಲಿ 11 ನೇ ವರ್ಷದ ಶ್ರೀದೇವಿ ಮಹಾ ಪುರಾಣಕ್ಕೆ ಚಾಲನೆ,ದೇವಿಯನ್ನು ಆರಾಧಿಸುವ ಹಬ್ಬ ನವರಾತ್ರಿ ;ಗುರುಶಾಂತಮೂರ್ತಿ ಶಿವಾಚಾರ್ಯ
ಸುರಪುರ ಟೈಮ್ಸ್ ವಾರ್ತೆ
ಸುರಪುರ;ನವರಾತ್ರಿ ದೇವಿಯನ್ನು ಆರಾಧಿಸುವ ನಾಡಹಬ್ಬ ವಾಗಿದೆ. ಕರ್ನಾಟದಲ್ಲಿ ದಸರಾ ಎಂದು ಕರೆದರೆ ಪಶ್ಚಿಮ ಬಂಗಾಲದಲ್ಲಿ ಈ ಹಬ್ಬವನ್ನು ದುರ್ಗಾ ಪೂಜಾ ಎಂದು ಆಚರಿಸಲಾಗುತ್ತದೆ ಎಂದು ಗುರುಶಾಂತಮೂರ್ತಿ ಶಿವಾಚಾರ್ಯ ಹೇಳಿದರು.
ತಾಲೂಕಿನ ರುಕ್ಮಾಪುರ ಗ್ರಾಮದ ಬನಶಂಕರಿ ದೇವಸ್ಥಾನದ ಆವರಣದಲ್ಲಿ ಶರನ್ನವರಾತ್ರಿ ದಸರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಹನ್ನೊಂದನೆ ವರ್ಷದ ಶ್ರೀದೇವಿ ಮಹಾ ಪುರಾಣ ಪ್ರವಚನ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟು ಸಂದೇಶ ನೀಡಿದ ಅವರು, ನವರಾತ್ರಿ ಎಂದರೆ ಒಂಬತ್ತು ರಾತ್ರಿಗಳು, ದೇವಿಯ ಒಂಬತ್ತು ವಿವಿಧ ರೂಪಗಳನ್ನು ಆರಾಧಿಸಲಾಗುತ್ತದೆ ಎಂದರು.ದೇವಿ ಸ್ವರೂಪದಲ್ಲಿರುವ ಶಕ್ತಿ ತತ್ವದ ಆರಾಧನೆಯೇ ನವರಾತ್ರಿ ಹಬ್ಬದ ಆಚರಣೆಯ ಸಂದೇಶ. ದುಷ್ಟ ಶಿಕ್ಷೆ ಶಿಷ್ಟ ಪರಿಪಾಲನೆಗೈಯುವ ಶಕ್ತಿ ಸ್ವರೂಪಳಾದ ಮಾತಾ ದುರ್ಗಾದೇವಿಯ ಆರಾಧನೆಯ ಹಬ್ಬವೇ ನವರಾತ್ರಿ. ಈ ಹಬ್ಬದಲ್ಲಿ ಶಕ್ತಿಯ ನಾನಾ ಸ್ವರೂಪಗಳಾದ ಮಹಾಲಕ್ಷ್ಮಿ, ಮಹಾಕಾಳಿ, ಮಹಾ ಸರಸ್ವತಿಯನ್ನು ಆರಾಧಿ ಸಲಾಗುತ್ತದೆ. ದೇವಿ ಮಹಿಷಾಸುರನನ್ನು ವಧೆಗೈದಿದ್ದು ತಾತ್ವಿಕವಾಗಿ ತಮೋ ಗುಣ ದೂರ ಮಾಡಿ ಸಾತ್ವಿಕತೆ ರೂಢಿಸಿಕೊಳ್ಳಬೇಕೆಂಬ ಸಂಕೇತ ನೀಡುತ್ತದೆ ಎಂದು ಹೇಳಿದರು.ಯಾಳಗಿಯ ಬಸಯ್ಯಸ್ವಾಮಿ ಸೋಮಶೇಖರ ಮಠ ಪುರಾಣ ಪ್ರವಚನ ನೀಡಿದರು. ಬಸವರಾಜ ಬಂಟನೂರ, ರಾಜಶೇಖರ ಗೆಜ್ಜಿ ಸಂಗೀತ ಸಾಥ್ ನೀಡಿದರು. ಅರ್ಚಕರಾದ ಈರಣ್ಣ ಪೂಜಾರಿ, ದೇವಾಂಗ ಸಮಾಜದ ಅಧ್ಯಕ್ಷ ಮಹಾಂತೇಶ ಕಲ್ಲೂರ ನೇತೃತ್ವ ವಹಿಸಿದ್ದರು. ಪ್ರಮುಖರಾದ ಮಲ್ಲಪ್ಪ ಚಟ್ಟಿ, ಸುರೇಶ ಚಟ್ಟಿ, ಹಣಮೇಶಗೌಡ ಪೊಲೀಸ್ ಪಾಟೀಲ್, ಬಸವರಾಜ ಲೆಕ್ಕಿಮರ್, ಬಸವರಾಜ ಹೊನ್ನಳ್ಳಿ, ರಾಜಶೇಖರ ಹಿರೇಗೌಡ, ಸೋಮಣ್ಣ ಗೋಗಿ, ಬಸವರಜ ಬಡಗ, ಆನಂದಕುಮಾರ ಗೋಗಿ, ನಾಗಣ್ಣ ಪೂಜಾರಿ ಸೇರಿ ಅನೇಕರಿದ್ದರು. ಮಹೇಶ ಗಂಜಿ ನಿರೂಪಿಸಿದರು. ಬಸವರಾಜ ಯಾಳಗಿ ವಂದಿಸಿದರು.



