ಸುರಪುರ ಸಂಸ್ಥಾನದ ರಾಜಪ್ರತಿನಿಧಿಯಿಂದ ತಿರುಪತಿಯ ಬ್ರಹ್ಮೋತ್ಸವ ರಥೋತ್ಸವಕ್ಕೆ ಅಗ್ರ ಪೂಜೆ

ಸುರಪುರ ಟೈಮ್ಸ್ ವಾರ್ತೆ
ಸುರಪುರ : ತಿರುಪತಿ ತಿರುಮಲಾಧೀಶ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಬ್ರಹ್ಮೋತ್ಸವದ ನಿಮಿತ್ತ ಇಂದು  ಮುಂಜಾನೆ ಸುರಪುರ ಸಂಸ್ಥಾನದಿಂದ ಅಗ್ರ ಪೂಜೆ ನಡೆಯಿತು.
ಪ್ರತಿ ವರ್ಷ ತಿರುಪತಿಯಲ್ಲಿ ಬ್ರಹ್ಮೋತ್ಸವದ ನಿಮಿತ್ತ ಜರುಗುವ ರಥೋತ್ಸವದಲ್ಲಿ ಸುರಪುರ ಸಂಸ್ಥಾನದಿಂದ ಪ್ರಥಮ ಪೂಜೆ ಜರುಗಿದ ನಂತರವೇ ರಥೋತ್ಸವಕ್ಕೆ ಚಾಲನೆ ಸಿಗುತ್ತದೆ. ಇದು ಸುರಪುರ ಸಂಸ್ಥಾನದ ಅರಸರ ಕಾಲದಿಂದಲೂ ನಡೆದು ಬಂದ ಪರಂಪರೆಯಾಗಿದೆ.

ಈ ವರ್ಷವೂ ಇಲ್ಲಿಯ ಸಂಸ್ಥಾನದ ಅಳಿಯ ಮತ್ತು ಪುರಸಭೆ ಪ್ರತಿ ಪಕ್ಷದ ನಾಯಕ ವೇಣುಮಾಧವ ನಾಯಕ ರಥೋತ್ಸವದಲ್ಲಿ ಸಂಸ್ಥಾನದ ರಾಜಪ್ರತಿನಿಧಿಯಾಗಿ ಭಾಗವಹಿಸಿದ್ದರು.

ತಿರುಪತಿಯಲ್ಲಿ ನಡೆದ ವೈಭವದ ರಥೋತ್ಸವದಲ್ಲಿ ‘ಸುರಪುರಮ್’ ಎಂಬ ಜಯ ಘೋಷ ಕೇಳಿ ಬಂದಿತು. ನಂತರ ಆರತಿ ತಟ್ಟೆಯೊಂದಿಗೆ ಬಂದ ವೇಣುಮಾಧವ ನಾಯಕರು, ರಥಕ್ಕೆ ಮಂಗಳಾರತಿ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದ್ದರಿಂದ, ಸಂಸ್ಥಾನದಿಂದ ನಡೆದ ಅಗ್ರ ಪೂಜೆಗೆ ಲಕ್ಷೋಪಲಕ್ಷ ಜನರು ಸಾಕ್ಷಿಯಾದರು.

ಪ್ರಥಮ ಪೂಜೆ ; ತಿರುಪತಿ ದೇವಸ್ಥಾನದಲ್ಲಿ ಬೆಳಗ್ಗೆ ಜರುಗುವ ಪೂಜೆ ಸುರಪುರ ಸಂಸ್ಥಾನದ್ದಾಗಿರುತ್ತದೆ. ಒಂದು ಸಲ ಮೈಸೂರಿನ ಮಹಾರಾಜರು ಅಗ್ರ ಪೂಜೆ ತಮ್ಮದಾಗಬೇಕು ಎಂದು ಸಾಕಷ್ಟು ಪ್ರಯತ್ನಿಸಿದರೂ ಅದು ಸಾಧ್ಯವಾಗಲಿಲ್ಲವಂತೆ. ಪ್ರತಿ ದಿನಾಲು ದೇವಸ್ಥಾನದ ಗರ್ಭಗುಡಿಯ ಪ್ರವೇಶ ದ್ವಾರ ತೆಗೆಯುವಾಗ, ಸುರಪುರ ರಾಜಸೇವಕ ಬಂದಿದ್ದಾನೆ, ಪ್ರಭು ಬಾಗಿಲು ತೆಗೆ ಎನ್ನುವ ಶ್ಲೋಕದೊಂದಿಗೆ ಅರ್ಚಕರು ಬಾಗಿಲು ತೆಗೆಯುತ್ತಾರೆ ಎನ್ನುತ್ತಾರೆ ಇಲ್ಲಿಯ ಅರಸು ಮನೆತನದವರು. ಅವರು ಪರಮ ಭಕ್ತಿಯೇ ಇದಕ್ಕೆಲ್ಲ ಕಾರಣ ಎಂದು ವ್ಯಾಖ್ಯಾನಿಸಲಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!