ಸುರಪುರ ತಾಲ್ಲೂಕಿನ ಬೆಳೆ ಹಾನಿ ಪರಿಶೀಲಿಸಿದ ಜಿಲ್ಲಾಧಿಕಾರಿ,ಸಮೀಕ್ಷೆಯಲ್ಲಿ ಅರ್ಹ ರೈತರು ಕೈ ಬಿಟ್ಟುಹೋಗದಂತೆ ನಿಗಾ ವಹಿಸಿ: ಜಿಲ್ಲಾಧಿಕಾರಿ ಹರ್ಷಲ್ ಭೋಯರ್

ಸುರಪುರ ಟೈಮ್ಸ್ ವಾರ್ತೆ


ಸುರಪುರ:ಅತಿವೃಷ್ಟಿಯಿಂದ ಬೆಳೆ ಹಾನಿ ಸಂಭವಿಸಿದೆ. ಹತ್ತಿ, ತೊಗರಿ, ಟೊಮೆಟೋ, ಸಜ್ಜೆ ಬೆಳೆದ ರೈತರು ಸಂಕಷ್ಟದಲ್ಲಿದ್ದಾರೆ. ಕಂದಾಯ ಮತ್ತು ಕೃಷಿ ಇಲಾಖೆಯವರು ಶೀಘ್ರದಲ್ಲಿ ಹಾನಿ ಸಮೀಕ್ಷೆ ಕಾರ್ಯ ಮುಗಿಸಬೇಕು ಬೆಳೆ ಹಾನಿ ಸಮೀಕ್ಷೆಯಲ್ಲಿ ಅರ್ಹ ರೈತರು ಕೈ ಬಿಟ್ಟುಹೋಗದಂತೆ ನಿಗಾ ವಹಿಸಲು ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಸೂಚಿಸಿದರು.
ಶನಿವಾರ ತಾಲ್ಲೂಕಿನ ದೇವಪುರ, ದೇವತಕಲ್, ಕೋನ್ಹಾಳ, ಹೆಬ್ಬಾಳ ಗ್ರಾಮಗಳ ನಾಲ್ಕಾರು ಹೊಲಗಳಿಗೆ ಭೇಟಿ ನೀಡಿ ಬೆಳೆ ಹಾನಿ ಪರಿಶೀಲಿಸಿದರು.
‘ಅಧಿಕಾರಿಗಳು ರೈತರ ಕಷ್ಟಕ್ಕೆ ಸ್ಪಂದಿಸಬೇಕು. ಸರ್ಕಾರದಿಂದ ಸಿಗುವ ಬೆಳೆ ಪರಿಹಾರ ಮತ್ತು ಇತರ ಸೌಲಭ್ಯಗಳನ್ನು ಕೊಡಿಸಲು ಶ್ರಮಿಸಬೇಕು. ಸಮೀಕ್ಷೆಯನ್ನು ಸಮರ್ಪಕವಾಗಿ ಮಾಡಬೇಕು’ ಎಂದು ತಿಳಿಸಿದರು.
ಹಲವು ರೈತರು ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ತಮ್ಮ ಸಂಕಷ್ಟವನ್ನು ನಿವೇದಿಸಿಕೊಂಡರು. ‘ಬೆಳೆ ಹಾನಿಯಾಗಿ ನಮ್ಮ ಕುಟುಂಬ ಬೀದಿಗೆ ಬೀಳುವಂತಾಗಿದೆ. ಶೀಘ್ರದಲ್ಲಿ ನಮಗೆ ಹೆಚ್ಚಿನ ಪರಿಹಾರ ನೀಡಬೇಕು. ಸಾಲ ಮನ್ನಾ ಮಾಡಬೇಕು’ ಎಂದು ಮನವಿ ಮಾಡಿದರು.ತಹಶೀಲ್ದಾರ್ ಎಚ್.ಎ. ಸರಕಾವಸ್, ಸಹಾಯಕ ಕೃಷಿ ನಿರ್ದೇಶಕ ರಾಮನಗೌಡ ಪಾಟೀಲ, ಕೃಷಿ ಅಧಿಕಾರಿ ಶ್ರೀಧರ ಕಂದಾಯ ನಿರೀಕ್ಷಕ ಬಸವರಾಜ ಬಿರಾದಾರ ಮಲ್ಲಕಜಪ್ಪ ಗ್ರಾಮ ಲೆಕ್ಕಿಗ ಪ್ರತಾಪ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಸುರಪುರ ತಾಲ್ಲೂಕಿನ ದೇವತಕಲ್ ಗ್ರಾಮದಲ್ಲಿ ಶನಿವಾರ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಬೆಳೆ ಹಾನಿ ಪರಿಶೀಲಿಸಿದರು

Leave a Reply

Your email address will not be published. Required fields are marked *

error: Content is protected !!