ವಾಲ್ಮೀಕಿ ಜಯಂತಿ ಅದ್ಧೂರಿಯಾಗಿ ಚಾಲನೆ
ಸುರಪುರ ಟೈಮ್ಸ್ ವಾರ್ತೆ
ಸುರಪುರ :ನಗರದಲ್ಲಿ ಮಂಗಳವಾರ ಮಹರ್ಷಿ ವಾಲ್ಮೀಕಿ ಜಯಂತಿಯ ಅಂಗವಾಗಿ ನಡೆದ ಭಾವ ಚಿತ್ರ ಮೆರವಣಿಗೆ ಸಮಾಜದ ಬಾಂಧವರು ವಿವಿಧ ಕಲಾ ತಂಡಗಳ ಸಮ್ಮುಖದಲ್ಲಿ ಸಡಗರ – ಸಂಭ್ರಮದಿಂದ ನಡೆಯಿತು.
ನಗರದ ಡೋಣಿಗೇರಿಯ ತಾಲೂಕ ಆಡಳಿತ ವತಿಯಿಂದ ಶ್ರೀ ಮಹಾ ಋಷಿ ವಾಲ್ಮೀಕಿ ಜಯಂತಿಯನ್ನು ವಾಲ್ಮೀಕಿ ದೇವಸ್ಥಾನ ಮುಂಭಾಗದಲ್ಲಿ ದ್ವಜ ಏರಿಸುವುದ ಮೂಲಕ ಆರಂಭವಾದ ಮೆರವಣಿಗೆಗೆ ಶಾಸಕ ರಾಜಾ ವೇಣುಗೋಪಾಲನಾಯಕ ಡೊಳ್ಳು ಬಾರಿಸುವುದರ ಮೂಲಕ ಅದ್ಧೂರಿ ಚಾಲನೆ ನೀಡಿದರು.
ಮೆರವಣಿಗೆಯಲ್ಲಿ ಡೊಳ್ಳು, ಝಾಂಜ್ ಮೇಳ, ತಮಟೆ ಸದ್ದಿಗೆ ತಾಲೂಕಿನ ವಿವಿಧ ಹಳ್ಳಿಗಳಿಂದ ಆಗಮಿಸಿದ ಸಂಘದ ಪದಾಧಿಕಾರಿಗಳು ಹಾಗೂ ಸಮಾಜ ಬಾಂಧವರು ಹೆಜ್ಜೆ ಹಾಕಿದರು. ಅಲ್ಲದೇ, ಮೆರವಣಿಗೆಯಲ್ಲಿ ಪ್ರತಿಯೊಂದು ಹಳ್ಳಿಯಿಂದ ಆಗಮಿಸಿದ ವಾಲ್ಮೀಕಿ ಸಂಘದ ಪದಾಧಿಕಾರಿಗಳು ದೊಡ್ಡ ಪ್ರಮಾಣದಲ್ಲಿ ವಾಲ್ಮೀಕಿ ಭಾವ ಚಿತ್ರವಿರುವ ಧ್ವಜಗಳನ್ನು ಹಿಡಿದುಕೊಂಡು ತಂಡೋಪ ತಂಡವಾಗಿ ಹೆಜ್ಜೆ ಹಾಕುವುದರ ಮೂಲಕ ಮೆರವಣಿಗೆಯ ಮೆರಗು ಹೆಚ್ಚಿಸಿದರು. ಈ ಸಂದರ್ಭದಲ್ಲಿ ವಾಲ್ಮೀಕಿ ಸಂಘದ ಪದಾಧಿಕಾರಿಗಳು, ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಸದಸ್ಯರು ಒಳಗೊಂಡು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು.





