ಕುಡಿಯುವ ನೀರಿನ ಸಮಸ್ಯೆ ತೊಂದರೆಯಾಗದಂತೆ ನಿಗಾವಹಿಸಿ ಶಾಸಕ ಆರ್ವಿನ್

ಸುರಪುರ ಟೈಮ್ಸ್ ವಾರ್ತೆ
ಸುರಪುರ: ನಗರದ ನಿರಂತರ ನೀರು ಪೂರೈಕೆ ಯೋಜನೆಯ ಕಾಮಗಾರಿ ಸಮರ್ಪಕವಾಗಿ ಮಾಡಬೇಕು. ಯಾವುದೇ ಕಾರಣಕ್ಕೂ ಕುಡಿಯುವ ನೀರಿನ ತೊಂದರೆಯಾಗದಂತೆ ನಿಗಾ ವಹಿಸಬೇಕು ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಾಲೂಕಿನ ದೇವಾಪುರ ಹಳ್ಳದ ಹತ್ತಿರ ನೀರಿನ ಪೈಪ್ ಲೈನ್ ದುರಸ್ತಿ ಕಾಮಗಾರಿಯನ್ನು ಮಂಗಳವಾರ ಪರಿಶೀಲಿಸಿ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ಇಲ್ಲಿ ನೀರಿನ ಒತ್ತಡ ಹೆಚ್ಚಾಗಿದೆ. ಕಾಮಗಾರಿ ಹೇಳಿಕೊಳ್ಳುವಷ್ಟು ಸರಿಯಾಗಿಲ್ಲದ ಕಾರಣ ಈ ಕೊಳವೆ ಮಾರ್ಗ ಒಡೆದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇಲ್ಲಿಯ ನೀರಿನ ಒತ್ತಡಕ್ಕೆ ಅನುಗುಣವಾಗಿ ನೀಲನಕ್ಷೆ ತಯಾರಿಸಿ ಕಾಮಗಾರಿ ಕೈಗೆತ್ತಿಕೊಳ್ಳಬೇಕಾಗಿತ್ತು. ಅದೇ ರೀತಿ ಮಾಡಿರುವುದಾಗಿ ನೀವು ಹೇಳುತ್ತಿದ್ದೀರಿ ಕಾರಣ ಡಿಸೈನ್ ತಂದು ನನಗೆ ತೋರಿಸಬೇಕು. ಕಾಮಗಾರಿ ಸೂಕ್ತವಾಗಿ ನಿರ್ವಹಿಸಿ ಮತ್ತೆ ಕೊಳವೆ ಮಾರ್ಗ ಒಡೆಯದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ನಿಗಮದ ಎಇ ಶಂಕರಗೌಡ ಕಾಮಗಾರಿ ಕುರಿತು ಮಾಹಿತಿ ನೀಡಿದರು. ನಗರಸಭೆ ಉಪಾಧ್ಯಕ್ಷ ರಾಜಾ ಪಿಡ್ಡ ನಾಯಕ, ಎಇಇ ಶಾಂತಪ್ಪ ಹೂಸೂರು, ಪೌರಾಯುಕ್ತ ಬಸವರಾಜ ಟಣಕೇದಾರ, ನಗರಸಭೆ ಸದಸ್ಯರು, ಸುರಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗರಾಜ್ ಬಾಚಿಮಟ್ಟಿ ಸೇರಿ ಕಾಂಗ್ರೆಸ್ ಮುಖಂಡರು ಇದ್ದರು.

ಶಾಶ್ವತ ತಡೆಗೋಡೆ ಅಳವಡಿಸಬೇಕು
ಮುಂದೆ ಮತ್ತೆ ಪ್ರವಾಹ ಪರಿಸ್ಥಿತಿ ಎದುರಾಗಿ ಹಳ್ಳ ತುಂಬಿ ಹರಿದರೆ ಮತ್ತೆ ಪೈಪ್ ಲೈನ್ ಕಳಚುವ ಸಂಭವವಿದೆ. ಹೀಗಾಗಿ ಹಳ್ಳಕ್ಕೆ ತಡೆಗೋಡೆ ಅಳವಡಿಸಿ ಶಾಶ್ವತ ಪರಿಹಾರ ಕಂಡುಕೊಳ್ಳಲು ಅಧಿಕಾರಿಗಳಿಗೆ ತಿಳಿಸಿರುವೆ ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ಹೇಳಿದರು. ಕಾಮಗಾರಿ ಪರಿಶೀಲಿಸಿ ನಂತರ ಸುದ್ದಿಗಾರರ ಜತೆಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ನಿರಂತರ ಮಳೆಯಿಂದ ದೇವಪುರದ ಹಿರೇ ಹಳ್ಳದ ನೀರಿನ ಹರಿವು ಹೆಚ್ಚಾಗಿ ಪೈಪ್‌ನ ಜೋಡಣೆ ಕಳಚಿ ನಗರಕ್ಕೆ ನೀರು ಪೂರೈಕೆ ಸ್ಥಗಿತವಾಗಿತ್ತು. ಈ ಹಿನ್ನೆಲೆಯಲ್ಲಿ ನಗರಸಭೆ ಅಧಿಕಾರಿಗಳು ಹಾಗೂ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ನಿಗಮದ ಅಧಿಕಾರಿಗಗಳಿಗೆ ಕಾಮಗಾರಿ ನಿರ್ವಹಿಸಿ ನಗರಕ್ಕೆ ನೀರು ಒದಗಿಸುವಂತೆ ತಿಳಿಸಿದ್ದೆ ಅದರಂತೆ ಕಾಮಗಾರಿ ಪರಿಶೀಲಿಸಿರುವೆ. ಈ ಹಿಂದೆ ಕಾಮಗಾರಿ ನಿರ್ವಹಿಸುವಾಗ ಗುಣಮಟ್ಟದ ಸಾಮಾಗ್ರಿ ಬಳಸದೆ ಇರುವುದರಿಂದ ಇಂತಹ ಘಟನೆಗಳು ಸಂಭವಿಸಿದೆ. ಇದರಿಂದ ನಗರಕ್ಕೆ ನೀರು ಸ್ಥಗಿತಗೊಂಡು ಜನರಿಗೆ ತೊಂದರೆಯಾಗಿತ್ತು. ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲು ಸೂಕ್ತವಾದ ಕ್ರಿಯಾ ಯೋಜನೆ ತಯಾರಿಸಬೇಕು ಎಂದು ಸಂಬಂಧಿಸಿದವರಿಗೆ ತಿಳಿಸಿರುವೆ ಎಂದು ಹೇಳಿದರು.

ಫೋಟೊ : ಸುರಪುರ ನಗರದ ನಿರಂತರ 24/7 ನೀರು ಪೂರೈಕೆಯ ಕಾಮಗಾರಿಯ ನೀಲನಕ್ಷೆಯನ್ನು ಶಾಸಕ ರಾಜಾ ವೇಣುಗೋಪಾಲ ನಾಯಕ ಪರಿಶೀಲಿಸಿದರು.

Leave a Reply

Your email address will not be published. Required fields are marked *

error: Content is protected !!