ರಾಷ್ಟ್ರಭಾವ ಜಾಗೃತಗೊಳಿಸುತ್ತಿರುವ ಆರ್‌ಎಸ್‌ಎಸ್‌ಗೆ 100 ವರ್ಷ; ಸಮಾಜವನ್ನು ಆವರಿಸುತ್ತಿರುವ ಸಂಘ ಚಿಂತನೆ, ದೇಶಹಿತ ಹುಣಸಗಿಯಲ್ಲಿ ಭವ್ಯ ಪಥ ಸಂಚಲನ
ಸುರಪುರ ಟೈಮ್ಸ್ ವಾರ್ತೆ
ಹುಣಸಗಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘವು ರಾಷ್ಟ್ರಭಾವ ಜಾಗೃತಗೊಳಿಸುತ್ತಿರುವ 100 ವರ್ಷ ; ಸಮಾಜವನ್ನು ಆವರಿಸುತ್ತಿರುವ ಸಂಘ ಚಿಂತನೆ, ದೇಶಹಿತ ಕಾಪಾಡಿದ ಹಿನ್ನೆಲೆಯಲ್ಲಿ ಸ್ಥಾಪನೆಯ ಶತಮಾನೋತ್ಸವದ ಹಾಗೂ ವಿಜಯ ದಶಮಿ ನಿಮಿತ್ಯ ಹುಣಸಗಿ ಪಟ್ಟಣದಲ್ಲಿ ನಾಳೆ ಭವ್ಯ ಪಥ ಸಂಚಲನಕ್ಕೆ ರಾಷ್ಟ್ರೀಯ ಸ್ವಯಂ ಸೇವಕರು ಅಣಿಯಾಗಲಿದ್ದಾರೆ.
ಭವ್ಯ ಪಥ ಸಂಚಲನವು ಮಧ್ಯಾಹ್ನ 3.45ರಿಂದ ಪಟ್ಟಣದ ಕೆಇಬಿ ಮುಖಾಂತರ ಆರಂಭವಾಗಿ ಮುಖ್ಯ ಬೀದಿಗಳ ಮುಖಾಂತರ ಜನತಾ ಕಾಲೋನಿ, ಮಠದವರ ಓಣಿ, ಒಳಅಗಸಿ, ನೀಲಕಂಠೇಶ್ವರ ದೇವಸ್ಥಾನ, ವಾಲ್ಮೀಕಿ ನಗರ, ಗಜಾನನ ಕಟ್ಟೆ, ಹೊರಗಿನ ಅಗಸಿ, ಮುಖ್ಯರಸ್ತೆ, ಬಸವೇಶ್ವರ ವೃತ್ತ, ಯುಕೆಪಿ ಕ್ಯಾಂಪ್, ಮುಖಾಂತರ ಪೊಲೀಸ್ ಠಾಣೆ ಮೈದಾನಕ್ಕೆ ಆಗಮಿಸಲಿದೆ. ನಂತರ ಸಾಯಂಕಾಲ 5ಗಂಟೆಗೆ ಸಾರ್ವಜನಿಕ ಸಮಾರಂಭ ಜರುಗಲಿದೆ.
ಅ.10 ರಂದು ಭವ್ಯ ಪಥಸಂಚಲನ ನಡೆಯಲಿದ್ದು, ಸ್ಥಳೀಯ ಶಾಖೆಗಳ ಬಾಲಕ, ಯುವ ಹಾಗೂ ಹಿರಿಯ ಸ್ವಯಂಸೇವಕರು ಪಾಲ್ಗೊಳ್ಳಲಿದ್ದಾರೆ. ಈ ವಾರದಲ್ಲಿ ಮರ‍್ನಾಲ್ಕು ಬಾರಿ ಪಥಸಂಚಲನದ ಪೂರ್ವಭಾವಿ ಸಭೆಯನ್ನು ಸಹ ಮಾಡಲಾಗಿದೆ. ಸ್ಥಳೀಯ ಸಂಘಚಾಲಕ, ವಿವಿಧ ಶಾಖಾ ಕಾರ್ಯಕರ್ತರು ಮತ್ತು ಸಂಘ ಪರಿವಾರದ ಹಿರಿಯರು ಭಾಗವಹಿಸಿದ್ದರು.
ಪಥಸಂಚಲನಕ್ಕಾಗಿ ಸದ್ಯ ಹುಣಸಗಿಯ ವಿವಿಧ ಮೈದಾನಗಳಲ್ಲಿ ಶಾಖಾ ಅಭ್ಯಾಸಗಳು ನಡೆಯುತ್ತಿವೆ. ಪ್ರತಿದಿನ ಯುವಕರು ಖಾಕಿ ಪ್ಯಾಂಟ್, ಬಿಳಿ ಶರ್ಟ್ ಮತ್ತು ಕಪ್ಪು ಟೋಪಿ ಖರೀದಿಸುತ್ತಿದ್ದಾರೆ. ಶಿಸ್ತಿನ ವ್ಯಾಯಾಮ, ಘೋಷಣಾ ಅಭ್ಯಾಸ ಹಾಗೂ ಪೆರೇಡ್ ತರಬೇತಿ ಪಡೆಯುತ್ತಿದ್ದಾರೆ.
ಸಂಘದ ಶತಮಾನೋತ್ಸವ ಪಥಸಂಚಲನವು ಕೇವಲ ಪ್ರದರ್ಶನವಲ್ಲದೆ, ಅದು ಸಂಘದ ಶಿಸ್ತು, ಸಂಘಟನೆ ಹಾಗೂ ದೇಶಪ್ರೇಮದ ಸಂಕೇತವಾಗಿದೆ ಎಂದು ಸ್ಥಳೀಯ ಆರ್.ಎಸ್.ಎಸ್ ಪ್ರಮುಖ ನಂದಲಾಲ ಠವಾಣಿ ತಿಳಿಸಿದರು.
ಹುಣಸಗಿ ಶಾಖೆಯು ದಶಕಗಳಿಂದ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದೆ. ಈ ಶತಾಬ್ದಿ ವರ್ಷದಲ್ಲಿ ಕಾರ್ಯಕರ್ತರು ಮನೆಮನೆಗೆ ಸೇವಾ ಸಂದೇಶ ತಲುಪಿಸುವ ಅಭಿಯಾನದಲ್ಲಿದ್ದಾರೆ ಎಂದು ಇನ್ನೋರ್ವ ಪ್ರಮುಖ ಆನಂದ ಬಾರಿಗಿಡದ ತಿಳಿಸಿದ್ದಾರೆ.
ನಗರದ ಪ್ರಮುಖ ಬೀದಿಗಳಲ್ಲಿ ಪಥಸಂಚಲನ ನಡೆಯಲಿರುವ ಹಿನ್ನೆಲೆಯಲ್ಲಿ ಟ್ರಾಫಿಕ್ ವ್ಯವಸ್ಥೆ ಹಾಗೂ ಭದ್ರತೆಗಾಗಿ ಪೊಲೀಸ್ ಇಲಾಖೆ ತಯಾರಿಯಲ್ಲಿದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘವು 1925ರಲ್ಲಿ ನಾಗಪುರದಲ್ಲಿ ಡಾ. ಕೇಶವ ಬಲಿರಾಮ ಹೆಡ್ಗೇವಾರ್ ಅವರಿಂದ ಸ್ಥಾಪಿತವಾಯಿತು. ಈ ವರ್ಷ ಸಂಘವು ತನ್ನ ಶತಮಾನೋತ್ಸವ ಆಚರಿಸುತ್ತಿದ್ದು, ಹುಣಸಗಿ ಶಾಖೆಯು ಕೂಡಾ ಈ ರಾಷ್ಟ್ರೀಯ ಸಂಭ್ರಮದ ಭಾಗವಾಗಿದೆ.
ಪಥ ಸಂಚಲನದ ಸಮಯದಲ್ಲಿ ನಮ್ಮ ಮನೆಗಳ ಮುಂದಿನ ಅಂಗಳವನ್ನು ಸ್ವಚ್ಛಗೊಳಿಸಿ, ಬಣ್ಣ ಬಣ್ಣದ ರಂಗೋಲಿಗಳನ್ನು ಬಿಡಿಸಿ, ಮಕ್ಕಳಿಗೆ ದೇಶಭಕ್ತರ ಛದ್ಮವೇಷಗಳನ್ನು ಹಾಕಿಸಿ, ಪುಷ್ಪಾರ್ಪಣೆ ಮೂಲಕ ರಾಷ್ಟ್ರೀಯ ಸ್ವಯಂ ಸೇವಕರನ್ನು ಸ್ವಾಗತಿಸಲು ಮಾತೆಯರು ತಯಾರಿ ನಡೆಸಿಕೊಳ್ಳುತ್ತಿದ್ದೇವೆಎಂದು ಜ್ಯೋತಿ ಎಂ ಜಂಬಲದಿನ್ನಿ ತಿಳಿಸಿದ್ದಾರೆ


