ತೋಟಗಾರಿಕೆ ಬೆಳೆ ಹಾನಿ :ಕಾಟಾಚಾರದ ಬೆಳೆ ಹಾನಿ ಸಮೀಕ್ಷೆ

ಸುರಪುರ ಟೈಮ್ಸ್ ವಾರ್ತೆ

ಸುರಪುರ: ಕಳೆದ ತಿಂಗಳು ಸುರಿದ ನಿರಂತರ ಮಳೆಗೆ ತಾಲೂಕಿನಾದ್ಯಂತ ಸಾವಿರಾರು ಹೆಕ್ಟೇರ್‌ ಭೂಮಿಯಲ್ಲಿ ಬೆಳೆದು ನಿಂತಿದ್ದ ಬೆಳೆ ಹಾಳಾಗಿದ್ದು ಕಂದಾಯ ಸಚಿವ, ಮುಖ್ಯಮಂತ್ರಿ ಸೂಚನೆಯಂತೆ ಹಾನಿ ಸಮೀಕ್ಷೆಗೆ ಅಧಿಕಾರಿಗಳ ತಂಡ ಹೊಲಕ್ಕೆ ಬರುತ್ತದೆ ಎಂದು ರೈತರು ಕಾಯುತ್ತಿದ್ದಾರೆ. ಆದರೆ, ಇಲ್ಲಿಯವರೆಗೂ ತೋಟಗಾರಿಕೆ ಬೆಳೆಗಳು ಸೇರಿದಂತೆ ಇನ್ನಿತರ ಬೆಳೆಗಳು ಸಂಪೂರ್ಣ ಹಾಳಾಗಿದ್ದು. ಕಾಟಾಚಾರದ ಬೆಳೆ ಹಾನಿ ಒಂದು ಕಡೆ ಮಾಡಿದರೆ ಇನ್ನೂಂದು ಕಡೆ ಯಾವುದೇ ತೋಟಗಾರಿಕೆ ಅಧಿಕಾರಿ ತೋಟಗಾರಿಕೆ ಭೂಮಿಯತ್ತ ತಲೆ ಹಾಕದಿರುವುದು ರೈತರ ಪರಿಹಾರ ನಿರೀಕ್ಷೆಯನ್ನು ಮಂಕಾಗಿಸಿದೆ.

ಸುರಪುರ ವಿಧಾನಸಭಾ ಕ್ಷೇತ್ರದಲ್ಲಿ 3000 ಹೇಕ್ಟರನಲ್ಲಿ ತೋಟಗಾರಿಕ ಬೆಳೆಗಳಾದ ಪಪ್ಪಾಯ, ದಾಳಂಬೆ, ಟೊಮೇಟೊ, ಮೆಣಸಿನಕಾಯಿ ಸೇರದಂತೆ ಇನ್ನಿತರ ಬೆಳೆಗಳನ್ನು ಬೆಳಯಲಾಗಿದೆ. ಕಳೆದ ಕೆಲ ದಿನಗಳ ಹಿಂದೆ ನಿರಂತರವಾಗಿ ಸುರಿದ ಮಳೆಯಿಂದಾಗಿ ಸುಮಾರು 2300 ಹೇಕ್ಟರ್ ಬೆಳೆ ಹಾಳಾಗಿದ್ದು. ಸೂಕ್ತ ಸರ್ವೆ ನಡೆಸಿ ರೈತರಿಗೆ ನೆರವಾಗಬೇಕಾಗಿದ್ದ ಅಧಿಕಾರಿಗಳೇ ಇದಕ್ಕು ತಮಗೂ ಸಂಭಂಧವಿಲ್ಲದಂತೆ ವರ್ತಿಸುತ್ತಿದ್ದಾರೆಂದು ರೈತರು ತಮ್ಮ ಅಳಲನ್ನು ತೋಡಿಕೊಂಡರು.

ಇನ್ನೂ ಜಿಲ್ಲೆಯಲ್ಲಿ ಬೆಳೆ ಹಾನಿ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ಜಿಲ್ಲಾ ಉಸ್ತುವಾರಿ ಸಚಿವರು ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಕಂದಾಯ,ಕೃಷಿ,ತೋಟಗಾರಿಕಾ ಅಧಿಕಾರಿಗಳು ಜಂಟಿ ಸರ್ವೆ ನಡೆಸಿ ರೈತರಿಗೆ ಅನ್ಯಾಯವಾಗದಂತೆ ವರದಿ ಸಲ್ಲಿಸಲು ಸೂಚಿಸಿದರು ಕೂಡ ಸಹ ಅಧಿಕಾರಿ ವರ್ಗ ಮತ್ತು ಸಿಬ್ಬಂದಿಗಳ ಬೇಜವಾಬ್ದಾರಿತನದಿಂದ ರೈತರು ಸಾಲದ ಸುಳಿಯಲ್ಲಿ ಸಿಲುಕುವಂತಾಗಿದೆ.

ಇನ್ನೂ ತಾಲೂಕಿನ ದೇವತ್ಕಲ್ ಗ್ರಾಮದಲ್ಲಿ ಅತಿ ಹೆಚ್ಚು ತೋಟಗಾರಿಕಾ ಬೆಳೆ ಮೇಲೆ ರೈತರು ಅವಲಂಬಿತಾರಾಗಿದ್ದಾರೆ. ಇಲಾಖೆಯ ಅಧಿಕೃತ ಮಾಹಿತಿ ಪ್ರಕಾರ ಸುಮಾರು 90 ಏಕೆರೆ ಜಮೀನಿನಲ್ಲಿ ಪಪ್ಪಾಯ, ದಾಳಿಂಬೆ, ಟೊಮೇಟೊ ಬೆಳೆಯಲಾಗಿದೆ, ವಿಪರೀತ ಮಳೆಯಿಂದ ಬೆಳೆ ಹಾನಿಯಾಗಿದೆ. ಹಾನಿ ಸಮೀಕ್ಷೆ ಮಾಡಬೇಕಾದ ಅಧಿಕಾರಿಗಳು ದೇವತ್ಕಲ ಸೀಮಾಂತರದ, ಸ. ನಂ 109ರ 39. ಗುಂಟೆಯಲ್ಲಿ ಬೆಳೆಯಲಾದ ಹಿರೇಕಾಯಿ ಸಮೀಕ್ಷೆ ಬಿಟ್ಟರೆ ಬೇರೆ ಬೆಳೆಯ ಸಮೀಕ್ಷೆ ಮಾಡದೆ ಇರುವುದು ರೈತರ ಆಕ್ರೋಶಕ್ಕೆ ಕಾರಣವಾಗಿ. ಗ್ರಾಮದಲ್ಲಿರುವ ತೋಟಗಾರಿಕೆ ಬೆಳೆಗೆ ಇವರಿಗೆ ಕಾಣಲಿಲ್ಲವೇ ಇವರು ಹಣವನ್ನು ನೀಡಿದಾಗ ಸಮೀಕ್ಷೆ ಮಾಡುತ್ತಾರೆ ಎನ್ನುವುದು ರೈತರ ಆರೋಪವಾಗಿದೆ.

ಅಧಿಕಾರಿಗಳಿಗೆ ರೈತರು ತಾವು ಬೆಳೆದ ಬೆಳೆಯು ಹಾನಿಯಾಗಿರುವ ಕುರಿತು. ಮಾಹಿತಿ ನೀಡಿದರು ಸಹ ರೈತರ ಜಮೀನಿಗೆ ತೆರಳಿ ಸಮೀಕ್ಷೆ ಕೈಗೊಂಡಿಲ್ಲಾ ಇದರಿಂದಾಗಿ ಪ್ರತಿ ದಿನ ರೈತರು ಕಚೇರಿಗೆ ಅಲೆದಾಡುವಂತಾಗಿದೆ. ಇನ್ನೂ ಕಚೇರಿಗೆ ಬಂದ ಜನರಿಗೆ ಸ್ಪಂದಿಸುವ ಸೌಜನ್ಯ ಕಚೇರಿಯ ಸಿಬ್ಬಂದಿಗಳಿಗಾಗಲಿ ಮತ್ತು ಅಧಿಕಾರಿಗಳಿಗಿಲ್ಲಾ ಎಂದು ಜಾಲಿಬೆಂಚಿ ಗ್ರಾಮದ ರೈತ ಮಲ್ಲಣ ಬೇಸರ ವ್ಯಕ್ತಪಡಿಸಿದರು.

ತೋಟಗಾರಿಕಾ ಬೆಳೆಯನ್ನು ಬೆಳೆಯಲು ಪ್ರೋತ್ಸಾಹಿಸಲು ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಬೇಜಾಬ್ದಾರಿತನದಿಂದ ಯೋಜನೆಗಳು ಅನುಷ್ಠಾನವಾಗುವಲ್ಲಿ ಸಂಪೂರ್ಣ ವಿಫಲವಾಗಿವೆ.

ವಿವಿಧ ಯೋಜನೆಗಳ ಅನುದಾನವಿದ್ದರು ಸಹ. ಅರ್ಜಿ ಸಲ್ಲಿಸಿರುವ ರೈತರಿಗೆ ಸಿಬ್ಬಂದಿಗಳು ಅನುದಾನವಿಲ್ಲವೆಂದು ತಪ್ಪು ಮಾಹಿತಿ ನೀಡಿ ನಮ್ಮನ್ನು ವಂಚಿತರನ್ನಾಗಿಸುತ್ತಿದ್ದಾರೆ ಎಂದು ರೈತ ಶಂಕರಪ್ಪ ತನ್ನ ಬೀಸರ ತೋಡಿಕೊಂಡಿದ್ದಾನೆ.


ಸಿಬ್ಬಂದಿಗಳ ಅನುಚಿತ ವರ್ತನೆ
ತೋಟಗಾರಿಕಾ ಇಲಾಖೆಗೆ ಕೆಲಸದ ನಿಮಿತ್ಯ ಮಾಹಿತಿ ಕೇಳಲು ಬರುವ ರೈತರೊಂದಿಗೆ ಸಿಬ್ಬಂದಿಗಳು ಅನುಚೀತವಾಗಿ ವರ್ತಿಸುವುದಲ್ಲದೆ ಏನೇ ಮಾಹಿತಿ ಕೇಳಿದರು ಬರವಣಿಗೆಯಲ್ಲಿ ಕೇಳಿ ಎನ್ನುತ್ತಾರೆ. ಓದು ಬರಹ ಗೊತ್ತಿಲ್ಲದ ನಮಗ್ಯಾಕೆ ಇವೆಲ್ಲ ಎಂದು ವಾಪಸ್ ಮನೆ ಕಡೆ ತೆರಳುವ ಪರಿಸ್ಥಿತಿ ಎದುರಾಗಿದೆ ಎಂದು ನೋವು ತೋಡಿಕೊಂಡಿದ್ದಾರೆ..

ನಾಟಕವಾಡುತ್ತಿರುವ ತೋಟಗಾರಿಕೆ ಅಧಿಕಾರಿಗಳು
ತಾಲೂಕಿನ ಯಾವ ಭಾಗದಲ್ಲಿ ನಷ್ಟ ಉಂಟಾಗಿದೆ ಎಂಬ ಬಗ್ಗೆ ಅಧಿಕಾರಿಗಳಲ್ಲಿ ಮಾಹಿತಿ ಇದೆ. ಜಿಪಿಎಸ್‌ ತಂತ್ರಜ್ಞಾನದ ಮೂಲಕ ಅವರಿಗೆ ಎಲ್ಲವೂ ತಿಳಿಯುತ್ತದೆ. ನಷ್ಟದ ಅರಿವು ಇದ್ದರೂ, ಏನೂ ಗೊತ್ತಿಲ್ಲದಂತೆ ನಾಟಕವಾಡುತ್ತಿದ್ದಾರೆ. ಬೆಳೆ ನಷ್ಟ ಸಮೀಕ್ಷೆಯನ್ನು ಮಾಡದೇ ಕಾಲಹರಣ ಮಾಡುತ್ತಿದ್ದಾರೆ.


ಸೂಕ್ತ ಪರಿಹಾರ ಸಿಗಲಿ: ತೋಟಗಾರಿಕೆ ಬೆಳೆ ನಷ್ಟಕ್ಕೆ ಎನ್ ಡಿಆರ್‌ಎಫ್‌ ನಿಯಮಗಳ ಪ್ರಕಾರ ಪ್ರತಿ ಹೆಕ್ಟೇರ್( 2.5 ಎಕರೆ)ಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ತಲಾ 13,600 ರೂ.ಗಳಂತೆ 27,200 ರೂ. ಪರಿಹಾರ ನೀಡಲಾಗುತ್ತದೆ. ಆದರೆ ರೈತರು ಸಸಿ, ಬೀಜ, ಗೊಬ್ಬರ, ಕೀಟನಾಶಕ ಸಿಂಪಡಣೆ, ನಿರ್ವಹಣೆ ಕೃಷಿ ಕೂಲಿ ಸೇರಿ ಪರಿಹಾರ ಹಣಕ್ಕಿಂತ ಹೆಚ್ಚು ಖರ್ಚು ಮಾಡುತ್ತಾರೆ. ಅಲ್ಲದೇ ಬೆಳೆ ನಾಶವಾದ ಬಳಿಕ ಇಡೀ ವರ್ಷ ರೈತರು ಬೆರೆ ಆದಾಯವಿಲ್ಲದೇ ಜೀವನ ನಡೆಸುವ ಕಷ್ಟದ ಸ್ಥಿತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಬೆಳೆ ನಷ್ಟದ ಪರಿಹಾರ ಹೆಚ್ಚಿಸಬೇಕೆನ್ನುವುದು ರೈತರ ಆಗ್ರಹ.

ಅಲ್ಲಿಗೆ ಹೋಗು…ಇಲ್ಲಿಗೆ ಹೋಗು..

ರೈತರು ಮಾಹಿತಿ ಪಡೆಯಲು ತೋಟಗಾರಿಕೆ ಕಚೇರಿಗೆ ಬಂದಾಗ, ಅಲ್ಲಿರುವ ಸಿಬ್ಬಂದಿ ಸಮರ್ಪಕ ಮಾಹಿತಿ ನೀಡದೇ ಅಲ್ಲಿಗೆ ಹೋಗಿ. ಇದು ನನ್ನಗೆ ಮಾಹಿತಿ ಬರುವುದಿಲ್ಲ ಹೋಗಿ ಎಂತಲೂ ಡಿಸಿ ಕಚೇರಿಯಿಂದ ತಹಸಿಲ್‌ ಕಚೇರಿಗೆ, ತಹಸಿಲ್‌ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿಗೆ ಅಲೆದಾಡಿಸುತ್ತಾರೆ. ರೈತರು ಅಲೆದಾಡಿ, ಅಲೆದಾಡಿ ಸೋತು ಸುಣ್ಣಾಗಿ, ಬರಿಗೈಯಲ್ಲಿ ಮನೆಗೆ ವಾಪಸ್‌ ತೆರಳುವಂತಾಗಿದೆ. ತೋಟಗಾರಿಕೆ ಕಚೇರಿಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಟೇಬಲ್‌ ಕೆಳಗಡೆ ಬಿಸಿ ಮಾಡದಿದ್ದರೇ ಕೆಲಸ ಆಗಲ್ಲ ಎಂಬ ದೂರುಗಳಿವೆ. ಈ ಕುರಿತು ಜಿಲ್ಲಾಧಿಕಾರಿಗಳು ಮತ್ತು ತೋಟಗಾರಿಕೆ ನಿರ್ದೇಶಕರು ಗಮನ ಸೆಳೆದು ಅಧಿಕಾರಿಗಳ ಮೇಲೆ ಸೂಕ್ತ ಕ್ರಮವನ್ನು ಕೈಗೊಳ್ಳಬೇಕೆಂದುಎಂದು ಸಾರ್ವಜನಿಕರು ದೂರಿದ್ದಾರೆ.

Leave a Reply

Your email address will not be published. Required fields are marked *

error: Content is protected !!