ನಾಳೆ ಸುರಪುರದಲ್ಲಿ ಕಲಬುರಗಿ ವಿಭಾಗ ಮಟ್ಟದ ಖೋ ಖೋ ಕ್ರೀಡಾಕೂಟ; ಡಿಡಿಪಿಐ ಚನ್ನಬಸಪ್ಪ ಮೂಧೋಳ


ಸುರಪುರ ಟೈಮ್ಸ್ ವಾರ್ತೆ

ಸುರಪುರ : ಇಲ್ಲಿಯ ತಾಲೂಕು ಕ್ರೀಡಾಂಗಣದಲ್ಲಿ ನಾಳೆ  ಬೆಳಗ್ಗೆ 10 ಗಂಟೆಗೆ 2025-26ನೇ ಸಾಲಿನ ಕಲಬುರಗಿ ವಿಭಾಗ ಮಟ್ಟದ 14/17 ವಯೋಮಿತಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳ ಖೋ ಖೋ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದೆ ಎಂದು ಯಾದಗಿರಿಯ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಚನ್ನಬಸಪ್ಪ ಮುಧೋಳ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾಡಳಿತ, ಜಿಪಂ ಯಾದಗಿರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಮತ್ತು ತಾಲೂಕು ದೈಹಿಕ ಶಿಕ್ಷಣ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ಸಂಘ ಸುರಪುರ ಇವರುಗಳ ಸಂಯುಕ್ತಾಶ್ರಯದಲ್ಲಿ ಈ ಕ್ರೀಡಾಕೂಟ ಏರ್ಪಡಿಸಲಾಗಿದೆ ಎಂದು ನುಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಕ್ರೀಡಾಕೂಟ ಉದ್ಘಾಟಿಸುವರು. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಎಸ್.ಮಧು ಬಂಗಾರಪ್ಪ, ವಿಧಾನ ಪರಿಷತ್ತನ ಪ್ರತಿ ಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ನಿಜ ಶರಣ ಅಂಬಿಗರ ಚೌಡಯ್ಯ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ ಘನ ಉಪಸ್ಥಿತಿ. ಶಾಸಕ ರಾಜಾ ವೇಣುಗೋಪಾಲ ನಾಯಕ ಉದ್ಘಾಟಿಸುವರು. ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯ ಸಂಸದರು, ಶಾಸಕರು ಮುಖ್ಯ ಅತಿಥಿಗಳು. ಜಿಲ್ಲಾಧಿಕಾರಿ ಹರ್ಷಲ್ ಭೋಯರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ಜಿಪಂ ಸಿಇಒ ಲವೀಶ್ ಒರಡಿಯಾ ಗೌರವ ಆಹ್ವಾನಿತರಾಗಿರುತ್ತಾರೆ ಎಂದರು.
ಏಳು ಜಿಲ್ಲೆಗಳಿಂದ ಬಾಲಕ-ಬಾಲಕಿಯರ ಒಟ್ಟು 28 ತಂಡಗಳು ಭಾಗವಹಿಸುತ್ತಿವೆ. ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಅವರ ತಂಡದವರು ಕ್ರೀಡಾಪಟುಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದಾರೆ. ಇದಕ್ಕಾಗಿ ಆಹಾರ, ವಸತಿ, ಪ್ರಚಾರ, ಆಹ್ವಾನ, ವೇದಿಕೆ, ಅಂಕಣ ಹೀಗೆ 9 ವಿವಿಧ ಸಮಿತಿಗಳನ್ನು ರಚನೆ ಮಾಡಲಾಗಿದೆ. ಈಗಾಗಲೇ ಪೂರ್ವ ಸಿದ್ಧತಾ ಸಭೆಗಳನ್ನು ನಡೆಸಲಾಗಿದೆ. ಸಮಿತಿಯವರು ವಹಿಸಿಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತಿಳಿಸಲಾಗಿದೆ. ಇಂದು ನಾನು ಕೂಡ ನಮ್ಮ ಎಲ್ಲಾ ಸದಸ್ಯರೊಂದಿಗೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮತ್ತೊಂದು ಸುತ್ತಿನ ಸಭೆ ಮಾಡಿರುತ್ತೇವೆ. ಎಲ್ಲ ವ್ಯವಸ್ಥೆಗಳು ಸುಲಭವಾಗಬೇಕು, ಸರಳವಾಗಬೇಕು ಎಂಬ ಸದುದ್ದೇಶದಿಂದ ವ್ಯಾಟ್ಸಪ್ ಗ್ರೂಪ್ ರಚಿಸಿ ಏಳು ಜಿಲ್ಲೆಗಳ ತಂಡದ ಮುಖ್ಯಸ್ಥರ ಜತೆಯಲ್ಲಿ ಸಂಪರ್ಕ ಇಟ್ಟುಕೊಳ್ಳಲಾಗಿದೆ ಎಂದರು.
ವಿಭಾಗ ಮಟ್ಟದ ಖೋ ಖೋ ಕ್ರೀಡಾಕೂಟಕ್ಕೆ ಕ್ರೀಡಾಂಗಣ ಸಜ್ಜುಗೊಳಿಸಲಾಗಿದೆ. ಖೋ ಖೋ ಪಂದ್ಯಾವಳಿಗೆ ನಾಲ್ಕು ಅಂಕಣಗಳನ್ನು ನಿರ್ಮಿಸಲಾಗಿದೆ. ಆ ನಾಲ್ಕು ಕೋಟ್‌ನಲ್ಲಿ ಒಂದೇ ಸಲ ಎಂಟು ತಂಡದವರು ಆಟವಾಡಬಹುದು. ತೀರ್ಪುಗಾರರನ್ನು ನಿಯೋಜಿಸಲಾಗಿದೆ. ಆಟಗಾರರಿಗೆ ಬೆಳಗ್ಗೆ ಸೀರಾ, ಉಪ್ಪಿಟ್ಟು, ಮಧ್ಯಾಹ್ನ ಮತ್ತು ರಾತ್ರಿ ಪಾಯಸ, ಅನ್ನ-ಸಾಂಬರು ವ್ಯವಸ್ಥೆ ಇರುತ್ತದೆ.
ಬಿಇಒ ಯಲ್ಲಪ್ಪ ಕಾಡ್ಲೂರು. ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಮಲ್ಲಣ್ಣ ದೊಡ್ಡಮನಿ, ಶಿಕ್ಷಣ ಸಂಯೋಜಕ ಶರಣಬಸವ ಗಚ್ಚಿನಮನಿ, ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ರಾಮಕೃಷ್ಣ ಕಲಬುರಗಿ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಖಾದರ ಪಟೇಲ್, ಹುಣಸಗಿ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವೆಂಕನಗೌಡ ಅರಕೇರಿ, ಸುರಪುರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗೋವಿಂದಪ್ಪ ಟಣಕೇದಾರ, ದೈಹಿಕ ಶಿಕ್ಷಕರ ಸಂಘ ಗ್ರೇಡ್-೨ ಅಧ್ಯಕ್ಷ ಶರಣಗೌಡ ಮಾಲಗತ್ತಿ, ಜಿಪಿಟಿ ಸಂಘದ ಅಧ್ಯಕ್ಷ ಶರಣು ಪಾಕರೆಡ್ಡಿ, ಅನುದಾನಿತ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಅಮರೇಶಗೌಡ ಪಾಟೀಲ್ ಶೆಳ್ಳಗಿ, ಎನ್‌ಜಿಒ ಮಾಜಿ ಅಧ್ಯಕ್ಷ ಸಂಜೀವಪ್ಪ ದರಬಾರಿ ಸೇರಿ ಇತರರಿದ್ದರು.

Leave a Reply

Your email address will not be published. Required fields are marked *

error: Content is protected !!