ಸುರಪುರ ನಿಷ್ಠಿ ಕಡ್ಲಪ್ಪನವರ ಮಠದಲ್ಲಿ ಸಾಧಕರಿಗೆ ಗೌರವ ಸನ್ಮಾನ;               ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಅಗತ್ಯವಿದೆ : ಡಿಡಿಪಿಐ ಮುಧೋಳಸ

ಸುರಪುರ ಟೈಮ್ಸ್ ವಾರ್ತೆ
ಸುರಪುರ : ಮಕ್ಕಳ ಬಗ್ಗೆ ತಂದೆ-ತಾಯಿ ಹೆಚ್ಚು ಗಮನ ಕೊಡಬೇಕು. ಓದಿನ ಕಡೆ ಹೆಚ್ಚು ಗಮನ ಹರಿಸುವಂತೆ ಮಾಡಬೇಕು. ಇಂದು ನಮ್ಮ ಮಕ್ಕಳನ್ನು ಯಾಂತ್ರಿಕವಾಗಿ ಬೆಳೆಸುತ್ತಿದ್ದೇವೆ ಹೊರತು ಮೌಲ್ಯಗಳನ್ನು ಕಲಿಸುತ್ತಿಲ್ಲ. ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಅಗತ್ಯವಾಗಿದೆ ಎಂದು ಯಾದಗಿರಿ ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪ ನಿರ್ದೇಶಕ ಚನ್ನಬಸಪ್ಪ ಮುಧೋಳ ಹೇಳಿದರು.
ಇಲ್ಲಿಯ ನಿಷ್ಠಿ ಕಡ್ಲಪ್ಪನವರ ವಿರಕ್ತ ಮಠದಲ್ಲಿ ಹಮ್ಮಿಕೊಂಡಿರುವ ಶರಣ ಚರಿತಾಮೃತ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಇತ್ತೀಚಿನ ವರದಿ ಪ್ರಕಾರ ದೇಶದಲ್ಲಿ ಶೇ.೪೦ ರಷ್ಟು ಮಕ್ಕಳು ಸೋಶಿಯಲ್ ಮಿಡಿಯಾದಲ್ಲಿ ಕಳೆದು ಹೋಗುತ್ತಿದ್ದಾರೆ ಇದು ಆತಂಕಕಾರಿ ವಿಷಯ ಎಂದು ತೀವ್ರ ಕಳವಳ ವ್ಯಕ್ತಪಡಿಸಿದರು.
ಚಿಕ್ಕ ಮಕ್ಕಳ ಕೈಯಲ್ಲಿ ಮೊಬೈಲ್ ಕೊಡುವುದರಿಂದ ಅದು ಅವರ ಭವಿಷ್ಯಕ್ಕೆ ಮಾರಕವಾಗಿ ಪರಿಣಮಿಸುತ್ತದೆ. ಸಾಮಾಜಿಕ ಜಾಲತಾಣಗಳು ಇಂದು ನಮ್ಮ ಯುವ ಜನಾಂಗವನ್ನು ಹಿಡಿದಿಟ್ಟುಕೊಂಡಿವೆ. ಯುವ ಜನಾಂಗ ಮೊಬೈಲ್ ಗೀಳು ಕೈಬಿಡಬೇಕು. ಮೊಬೈಲ್‌ಗಳನ್ನು ಬದಿಗಿಟ್ಟು ಪುಸ್ತಕ ಓದುವ ಅಭ್ಯಾಸ ರೂಢಿಸಿಕೊಳ್ಳಬೇಕು, ಹಾಗೆಯೇ
ಉತ್ತಮ ಜೀವನಕ್ಕೆ ಶರಣರ ಚರಿತ್ರೆಗಳನ್ನು ಆಗಾಗ್ಗೆ ನಮ್ಮ ಸ್ಮತಿಪಟಲದಲ್ಲಿ ಹಾಕಬೇಕು. ಇದರಿಂದ ಸಾತ್ವಿಕ ಹಾದಿಯಲ್ಲಿ ನಡೆಯಲು ಸಾಧ್ಯವಾಗುತ್ತದೆ. ಇಂದಿನ ದಿನಮಾನಗಳಲ್ಲಿ ಭೌತಿಕ ಪ್ರಪಂಚಕ್ಕೆ ಶರಣರನ್ನು ಗುರುತಿಸುವ ಮತ್ತು ಸಾಧಕರನ್ನು ಸನ್ಮಾನಿಸುವುದು ಸುಲಭದ ಮಾತಲ್ಲ ಆ ಸತ್ಕಾರ್ಯವನ್ನು ಮಠದ ಶ್ರೀಗಳು ಮಾಡುತ್ತಿರುವುದು ಪ್ರಶಂಸನೀಯ ಎಂದರು.
ಸಾನ್ನಿಧ್ಯ ವಹಿಸಿದ್ದ ಕೊಡೇಕಲ್ ಶ್ರೀ ದುರದುಂಡೇಶ್ವರ ವಿರಕ್ತ ಮಠದ ಶಿವುಕುಮಾರ ಸ್ವಾಮೀಜಿ ಮಾತನಾಡಿದರು.
ದೊಡ್ಡ ಬಸಯ್ಯಶಾಸ್ತ್ರೀ ಅವರು ಕಾಯಕ ಯೋಗಿ ಸಿದ್ದರಾಮೇಶ್ವರರ ಪ್ರವಚನ ನೀಡಿದರು. ಪ್ರಭುಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸುರಪುರ ಅರ್ಬನ್ ಬ್ಯಾಂಕ್ ನಿರ್ದೇಶಕರಾದ ರಾಜಾ ಮುಕುಂದ ನಾಯಕ, ಪ್ರಕಾಶ ಸಜ್ಜನ್, ಶಿವರಾಜ ಅವಂಟಿ, ಕರ್ನಾಟಕ ರಾಜ್ಯೋತ್ಸವ ಸುವರ್ಣ ಸಂಭ್ರಮ ಪ್ರಶಸ್ತಿ ಪುರಸ್ಕೃತರಾದ ಅಮಯ್ಯಸ್ವಾಮಿ ಹಿರೇಮಠ ರಾಜನಕೋಳೂರು, ಜಿಲ್ಲಾ ರಾಜೋತ್ಸವ ಪ್ರಶಸ್ತಿ ಪುರಸ್ಕೃತೆ ಮುತ್ತಮ್ಮ ದೇವರಗೋನಾಲ, ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀಕರಭಟ್ ಜೋಶಿ, ಯೋಗ ಶಿಕ್ಷಕ ಮಲ್ಲಿಕಾರ್ಜುನ ಸಜ್ಜನ್ ಅವರಿಗೆ ಮಠದ ಗೌರವ ಸನ್ಮಾನ ನೀಡಲಾಯಿತು. ಶರಣಕುಮಾರ ಯಾಳಗಿ, ಶಿವಕುಮಾರ ಕಟ್ಟಿಸಂಗಾವಿ ಸಂಗೀತ ಸೇವೆ ನೀಡಿದರು. ರಾಜಶೇಖರ ದೇಸಾಯಿ ನಿರೂಪಿಸಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!