ಬಿದಿರು ನವೀಕರಿಸಬಹುದಾದ ಸಂಪನ್ಮೂಲ ; ಡಾ.ಸ್ಯಾಮ್ ವಿಶ್ವನಾಥ

ಸುರಪುರ ಟೈಮ್ಸ್ ವಾರ್ತೆ
ಸುರಪುರ : ಜಗತ್ತಿನಲ್ಲಿ ಇಂದು ಪಾಲಿಮರಿಕ್ ಸಂಯುಕ್ತಗಳಿಗೆ ಬಲವರ್ಧನೆಯಾಗಿ ಬಿದಿರಿನ ಬಳಕೆ ಆಕರ್ಷಕವಾಗಿದೆ. ಬಿದಿರು ನವೀಕರಿಸಬಹುದಾದ ಸಂಪನ್ಮೂಲವಾಗಿದೆ ಎಂದು ಕೇರಳ ಫಾರೆಸ್ಟ್ ರಿಸರ್ಚ ಇನ್ಸಟಿಟ್ಯೂನ್ ಮಾಜಿ ನಿರ್ದೇಶಕ ಡಾ.ಸ್ಯಾಮ್ ವಿಶ್ವನಾಥ ಹೇಳಿದರು.
ಇಲ್ಲಿಯ ವೀರಪ್ಪ ನಿಷ್ಠಿ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಬುಧವಾರ ನವೀಕರಿಸಬಹುದಾದ ಮತ್ತು ಸಮರ್ಥನೀಯ ರಚನಾತ್ಮಕ ಬಿದಿರು ಉತ್ಪನ್ನಗಳ ಅಭಿವೃದ್ಧಿ ಎಂಬ ವಿಷಯದ ಮೇಲೆ ಹಮ್ಮಿಕೊಂಡ ಸಂವಾದನೆ ಮತ್ತು ಚರ್ಚಾಕೂಟದಲ್ಲಿ ಉಪನ್ಯಾಸ ನೀಡಿದ ಅವರು, ಬಿದಿರು ಅಸಾಧಾರಣ ಯಾಂತ್ರಿಕ ಮತ್ತು ಭೌತಿಕ ಗುಣಲಕ್ಷಣಗಳನ್ನು ಹೊಂದಿದೆ ಎಂದು ತಿಳಿಸಿದರು.
ಹಿಂದೆ ಕಾರ್ಬನ್ ಮತ್ತು ಗ್ಲಾಸ್ ಫೈಬರ್ ಬಲವರ್ಧಿತ ಸಂಯುಕ್ತಗಳು ಹೆಚ್ಚು ಬೇಡಿಕೆಯಲ್ಲಿದ್ದವು. ಆದರೆ ಅವು ಹೆಚ್ಚು ಸಮರ್ಥನಿಯವಾಗಿರಲಿಲ್ಲ. ಪರಿಣಾಮವಾಗಿ ವಿಜ್ಞಾನಿಗಳು ಮತ್ತು ತಯಾರಕರು ನಿರಂತರವಾಗಿ ಸಂಯುಕ್ತಗಳಿಗೆ ಹೆಚ್ಚು ಸಮರ್ಥನೀಯ ಆಯ್ಕೆಗಳನ್ನು ಅನ್ವೇಷಿಸುತ್ತಿದ್ದಾರೆ. ಬಿದಿರು ಈಗ ಇತರೆ ಅನೇಕ ಲಿಗ್ನೋಸೆಲ್ಯುಲೋಸಿಕ್ ಅಥವಾ ನಾರಿನ ವಸ್ತುಗಳಂತೆ ಹೊಸ ಪ್ರಗತಿಪರ ವಸ್ತುವಾಗಿದೆ. ಇದರಿಂದ ಬಿದಿರು ಹೊಸ ಮೈಲುಗಲ್ಲನ್ನು ಸ್ಥಾಪಿಸುತ್ತಿದೆ. ಈ ಭಾಗದ ರೈತರು ಬಿದಿರು ಬೆಳೆದು ಉತ್ತಮ ಆದಾಯವನ್ನು ಗಳಿಸಬಹುದು. ಸರಕಾರದಿಂದ ಸಬ್ಸಿಡಿ ಕೂಡ ದೊರೆಯುತ್ತದೆ ಎಂದರು.
ಮಹಾ ವಿದ್ಯಾಲಯದ ಕಾರ್ಯದರ್ಶಿ ಶರಣಬಸಪ್ಪ ವ್ಹಿ.ನಿಷ್ಠಿ ಹಾಗೂ ಜಂಟಿ ಕಾರ್ಯದರ್ಶಿ ದೊಡ್ಡಪ್ಪ ಎಸ್.ನಿಷ್ಠಿ ನಿರ್ದೇಶನದಲ್ಲಿ ಕಾರ್ಯಕ್ರಮ ಜರುಗಿತು. ಕಾರ್ಯದರ್ಶಿ ಶರಣಬಸಪ್ಪ ನಿಷ್ಠಿ ಅವರು ಡಾ.ಸ್ಯಾಮ್ ವಿಶ್ವನಾಥ ಅವರಿಗೆ ಸನ್ಮಾನಿಸಿ ಗೌರವಿಸಿದರು. ಪ್ರಾಚಾರ್ಯ ಡಾ.ಶರಣಬಸಪ್ಪ ಸಾಲಿ, ಪ್ರೊ.ಶರಣಗೌಡ ಪಾಟೀಲ್, ಸಿವಿಲ್ ಸೇರಿ ಎಲ್ಲಾ ವಿಭಾಗದ ಮುಖ್ಯಸ್ಥರು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಇದ್ದರು. ಪ್ರೊ.ಗಂಗಾಧರ ಹೂಗಾರ ನಿರೂಪಿಸಿ ವಂದಿಸಿದರು.
