ತಾಲೂಕಾಡಳಿತದಿಂದ ಅ.23ರಂದು ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಆಚರಣೆ
ಸುರಪುರ ಟೈಮ್ಸ್ ವಾರ್ತೆ
ಸುರಪುರ:ವೀರ ರಾಣಿ ಕಿತ್ತೂರು ರಾಣಿ ಚನ್ನಮ್ಮ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಅವರ ಆದರ್ಶಗಳನ್ನು ಸಮಾಜಕ್ಕೆ ತಿಳಿಸುವ ಕೆಲಸಕ್ಕೆ ಎಲ್ಲರೂ ಮುಂದಾಗೋಣ ಎಂದು ಗ್ರೇಡ್-2 ತಹಸೀಲ್ದಾರ್ ಮಲ್ಲಯ್ಯ ದಂಡು ಹೇಳಿದರು.
ನಗರದ ತಹಸೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಶನಿವಾರ ನಡೆದ ಕಿತ್ತೂರು ರಾಣಿ ಚನ್ನಮ್ಮ ಜಯಂತಿಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅ.23 ರಂದು ಬೆಳಗ್ಗೆ 9 ಕ್ಕೆ ಎಲ್ಲಾ ಸರಕಾರಿ ಕಚೇರಿ, ಶಾಲಾ-ಕಾಲೇಜು, ಅಂಗನವಾಡಿ, ಗ್ರಾಮ ಪಂಚಾಯತಿ ಕಚೇರಿ, ಆರೋಗ್ಯ ಕೇಂದ್ರಗಳಲ್ಲಿ ಕಡ್ಡಾಯವಾಗಿ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಆಚರಿಸಬೇಕು ಎಂದರು. ತಾಲೂಕು ಆಡಳಿತದಿಂದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಅಂದು ಬೆಳಗ್ಗೆ 11ಕ್ಕೆ ಜಯಂತಿ ಆಚರಿಸಲಾಗುವುದು. ನಂತರ ಕಿತ್ತೂರು ರಾಣಿ ಚನ್ನಮ್ಮ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಗುವುದು. ಉಪನ್ಯಾಸಕರೊಬ್ಬರಿಂದ ಚನ್ನಮಾಜಿ ಕುರಿತು ವಿಶೇಷ ಉಪನ್ಯಾಸ ಇರುತ್ತದೆ. ಎಲ್ಲಾ ಇಲಾಖೆಯ ಅನುಷ್ಟಾನಾಧಿ ಕಾರಿಗಳು ತಪ್ಪದೇ ಜಯಂತಿಯಲ್ಲಿ ಭಾಗವಹಿಸಬೇಕು ಎಂದು ತಾಕೀತು ಮಾಡಿದರು.
ಸಮಾಜದ ಮುಖಂಡರಾದ ಚನ್ನಬಸವ ಸಾಹುಕಾರ ವಾಲಿ, ಪ್ರಕಾಶ ಅಂಗಡಿ ಕನ್ನಳ್ಳಿ, ಶಿವರಾಜ ಕಲಕೇರಿ, ಶರಣು ಸಾಹು ಮುಧೋಳ, ಮಹೇಶ ಸಾಹುಕಾರ ವಾಲಿ ಸಭೆಯಲ್ಲಿ ಹಲವು ಸಲಹೆ ಸೂಚನೆ ನೀಡಿದರು. ಪಶು ಇಲಾಖೆಯ ಎಡಿ ಡಾ.ಸುರೇಶ ಹಚ್ಚಡ ಎಸ್‌ಟಿಒ ಎಸ್.ಎಚ್.ಕೊಂಡಿಕಾರ, ಸಂಗೋಪನಾ , ನಗರಸಭೆಯ ಹಣಮಂತ ಯಾದವ, ಬಿಇಒದ ಲಕ್ಷ್ಮೀಕಾಂತರೆಡ್ಡಿ, ಸಿಡಿಪಿಒದ ಮೊಹ್ಮದ್, ತಾಪಂಯ ನಾಗರಾಜ, ಮುಖಂಡರಾದ ಶಿವನಗೌಡ ಬಿರಾದಾರ ಸೂಗೂರು, ಅಮೃತಗೌಡ ಎಸ್ .ಪಾಟೀಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.






