ಕಲಬುರಗಿ ವಿಭಾಗದ ಕ್ರೀಡಾಕೂಟ ಯಶಸ್ವಿ, ಸಾರ್ವಜನಿಕರಿಂದ ಪ್ರಶಂಸೆ, ರಾಜ್ಯಮಟ್ಟ ಪ್ರವೇಶಿಸಿದ ಗಿರಿ ಜಿಲ್ಲೆಯ ಮೂರು ಶಾಲೆಗಳ ತಂಡ
ಸುರಪುರ ಟೈಮ್ಸ್ ವಾರ್ತೆ
ಸುರಪುರ:ಕಲಬುರಗಿ ವಿಭಾಗ ಮಟ್ಟದ 14/17 ವಯೋಮಿತಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಬಾಲಕ-ಬಾಲಕಿಯರ ಖೋಖೋ ಕ್ರೀಡಾಕೂಟ ಯಶಸ್ವಿಗೆ ಹರ್ಷ ವ್ಯಕ್ತವಾಗಿದೆ. ವಿಭಾಗ ಮಟ್ಟದಂತಹ ದೊಡ್ಡ ಮಟ್ಟದ ಕ್ರೀಡಾಕೂಟ ಸುರಪುರ ನಗರದಲ್ಲಿ ಆಯೋಜಿಸಿ ರಾಷ್ಟೀಯ ಕ್ರೀಡೆಯಾದ ಖೋ ಖೋ ಪಂದ್ಯಗಳನ್ನು ನೋಡುವ ಅವಕಾಶ ದೊರೆಯಿತು. ಏಳು ಜಿಲ್ಲೆಗಳ ಮಕ್ಕಳು ಉತ್ತಮ ಪ್ರದರ್ಶನ ನೀಡಿದರು. ಉದ್ಘಾಟನೆಯಲ್ಲಿ ಸಚಿವರು, ಶಾಸಕರು, ಅಧಿಕಾರಿಗಳು ಭಾಗಿಯಾಗಿದ್ದರು. ಕ್ರೀಡಾಕೂಟದ ವ್ಯವಸ್ಥೆ ಅಚ್ಚುಕಟ್ಟಾಗಿತ್ತು. ಡಿಡಿಪಿಐ ಚನ್ನಬಸಪ್ಪ ಮುಧೋಳ, ಬಿಇಒ ಯಲ್ಲಪ್ಪ ಕಾಡ್ಲೂರು, ದೈಹಿಕ ಶಿಕ್ಷಣಾಧಿಕಾರಿ ಮಲ್ಲಣ್ಣ ದೊಡ್ಡಮನಿ, ದೈಹಿಕ ಶಿಕ್ಷಕರು ಸೇರಿ ಇನ್ನಿತರರು ಕ್ರೀಡಾಕೂಟದ ಯಶಸ್ವಿಗೆ ಹಗಲಿರುಳು ಶ್ರಮಿಸಿದ್ದಾರೆ ಎಂದು ಕ್ರೀಡಾಪ್ರೇಮಿಗಳು, ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಗರದತಾಲೂಕು ಕ್ರೀಡಾಂಗಣದಲ್ಲಿ ಜರುಗಿದ ಕಲಬುರಗಿ ವಿಭಾಗದ ಮಟ್ಟದ 14 ಮತ್ತು 17 ವಯೋಮಿತಿಯ ಬಾಲಕ-ಬಾಲಕಿಯರ ಖೋ ಖೋ ಪಂದ್ಯಾವಳಿಯಲ್ಲಿ ಯಾದಗಿರಿ ಜಿಲ್ಲೆಯ ಮೂರು ಶಾಲೆಗಳ ತಂಡಗಳು ಫೈನಲ್ ಪಂದ್ಯಗಳಲ್ಲಿ ಜಯಭೇರಿ ಬಾರಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ಅತ್ಯುತ್ತಮ ಸಾಧನೆ ಮಾಡಿ ಜಿಲ್ಲೆಯ ಕೀರ್ತಿ ಪತಾಕೆ ಹಾರಿಸಿದ್ದಾರೆ.
17 ವಯೋಮಿತಿಯ ಬಾಲಕರ ಫೈನಲ್ ಪಂದ್ಯದಲ್ಲಿ ತಾಲೂಕಿನ ದೇವರಗೋನಾಲ ಗ್ರಾಮದ ಸರಕಾರಿ ಪ್ರೌಢಶಾಲೆಯ ಬಾಲಕರು, ೧೪ ವಯೋಮಿತಿಯ ಬಾಲಕರ ಫೈನಲ್ ಪಂದ್ಯದಲ್ಲಿ ತಾಲೂಕಿನ ದೇವರಗೋನಾಲ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಜಯಗಳಿಸಿದ್ದಾರೆ. 17 ಮತ್ತು 14 ವಯೋಮಿತಿಯ ಬಾಲಕರ ಫೈನಲ್ ಪಂದ್ಯಗಳಲ್ಲಿ ಕೊಪ್ಪಳ ಜಿಲ್ಲೆ ದ್ವಿತೀಯ ಸ್ಥಾನ ಗಳಿಸಿದೆ.
17 ವರ್ಷ ವಯೋಮಿತಿಯ ಬಾಲಕಿಯರ ಫೈನಲ್ ಪಂದ್ಯದಲ್ಲಿ ಯಾದಗಿರಿ ಜಿಲ್ಲೆ ಪ್ರಥಮ ಸ್ಥಾನ ಪಡೆದರೆ, ದ್ವಿತೀಯ ಸ್ಥಾನವನ್ನು ವಿಜಯನಗರ ಜಿಲ್ಲೆಯ ಬಾಲಕಿಯರು ಪಡೆದುಕೊಂಡಿರುತ್ತಾರೆ. 14 ವರ್ಷ ವಯೋಮಿತಿಯ ಬಾಲಕಿಯರ ಫೈನಲ್ ಪಂದ್ಯದಲ್ಲಿ ರಾಯಚೂರು ಜಿಲ್ಲೆ ಪ್ರಥಮ, ಬಳ್ಳಾರಿ ಜಿಲ್ಲೆಯ ದ್ವಿತೀಯ ಸ್ಥಾನ ಗಿಟ್ಟಿಸಿದೆ.
ನಂತರ ಸಂಜೆ ಟ್ರೋಫಿ ವಿತರಣೆ ಸಮಾರಂಭ ಜರುಗಿತು. ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಚನ್ನಬಸಪ್ಪ ಮುಧೋಳ, ಕ್ಷೇತ್ರ ಶಿಕ್ಷಣಾಧಿಕಾರಿ ಯಲ್ಲಪ್ಪ ಕಾಡ್ಲೂರು, ದೈಹಿಕ ಶಿಕ್ಷಣಾಧಿಕಾರಿ ಮಲ್ಲಣ್ಣ ದೊಡ್ಡಮನಿ, ಸರಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ ಬಲಭೀಮರಾಯ ದೇಸಾಯಿ, ರಂಗಂಪೇಟೆ ಕೆಪಿಎಸ್ ಶಾಲೆಯ ಪ್ರಾಚಾರ್ಯ ಭೀಮಣ್ಣ ಭೋಸಗಿ, ಕ್ಷೇತ್ರ ಸಮನ್ವಯಾಧಿಕಾರಿ ಪಂಡಿತ್ ನಿಂಬೂರ್, ಇಸಿಒ ಶರಣಬಸವ ಗಚ್ಚಿನಮನಿ, ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ರಾಮಕೃಷ್ಣ ಕಲಬುರಗಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗೋವಿಂದಪ್ಪ ಟಣಕೇದಾರ್ ಸೇರಿ ದೈಹಿಕ ಶಿಕ್ಷಕರು, ಶಿಕ್ಷಕರು, ಕ್ರೀಡಾಪಟುಗಳು ಇದ್ದರು.
392 ಆಟಗಾರರು ಭಾಗಿ
2025-26ನೇ ಸಾಲಿನ ಕಲಬುರಗಿ ವಿಭಾಗ ಮಟ್ಟದ 14/17ವಯೋಮಿತಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಬಾಲಕ-ಬಾಲಕಿಯರ ಖೋಖೋ ಕ್ರೀಡಾಕೂಟದಲ್ಲಿ ಬೀದರ್, ಕಲಬುರಗಿ, ಯಾದಗಿರಿ, ಕೊಪ್ಪಳ, ಬಳ್ಳಾರಿ, ವಿಜಯನಗರ ಜಿಲ್ಲೆಗಳಿಂದ ಒಟ್ಟು 28 ತಂಡಗಳಿಂದ 392 ಆಟಗಾರರು ಭಾಗವಹಿಸಿದ್ದರು. ಪ್ರತಿಯೊಂದು ಪಂದ್ಯಗಳು ತುರುಸಿನಿಂದ ಕೂಡಿದ್ದವು. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದೇವರಗೋನಾಲ ಗ್ರಾಮದ ಎರಡು ಶಾಲೆಗಳ ತಂಡಗಳು ಮತ್ತು ಯಾದಗಿರಿ ಒಂದು ಶಾಲೆಯ ಆಟಗಾರರ ತಂಡ ಅದ್ಭುತ ಪ್ರದರ್ಶನ ನೀಡಿ ಪ್ರಥಮ ಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ ಪ್ರವೇಶಿಸುವುದರ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಅ.25 ರಂದು ಚಿಕ್ಕೋಡಿ ಜಿಲ್ಲೆಯ ಮೂಡಲಗಿ ತಾಲೂಕಿನ ನಾಗನೂರನಲ್ಲಿ ರಾಜ್ಯಮಟ್ಟದ ಖೋ ಖೋ ಪಂದ್ಯಾವಳಿಗಳು ಜರುಗಲಿವೆ.



