ಶೂರರ ನಾಡು ಸುರಪುರದಲ್ಲಿ ಝಗಮಗಿಸಿದ ಬೆಳಕಿನ ಹಬ್ಬ, ಎಲ್ಲೆಲ್ಲೂ ಲಕ್ಷ್ಮಿ ದೇವಿ ಆರಾಧನೆ

ಸುರಪುರ ಟೈಮ್ಸ್ ವಾರ್ತೆ

ಸುರಪುರ:ದೀಪಾವಳಿ ಹಬ್ಬದ ಅಂಗವಾಗಿ ನಗರದಲ್ಲಿ ಸೇರಿದಂತೆ ತಾಲೂಕಿನಾದ್ಯಂತ ಮಂಗಳವಾರ ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ ಮನೆ ಮಾಡಿ,ಅಂಗಡಿ, ಮುಂಗಟ್ಟು ಹಾಗೂ ಮನೆಗಳಲ್ಲಿ ಧನಲಕ್ಷ್ಮಿ ದೇವಿ ಆರಾಧನೆ ಅತ್ಯಂತ ಸಂಭ್ರಮದಿಂದ ನಡೆಯಿತು. ವಿವಿಧ ದೇವಸ್ಥಾನಗಳಲ್ಲಿ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪಾಜೆ ಕೈಗೊಳ್ಳಲಾಯಿತು. ಮಹಿಳೆಯರು ಮಕ್ಕಳು ಶ್ರದ್ಧಾಭಕ್ತಿಯಿಂದ ಲಕ್ಷ್ಮೀ ದೇವಿಯನ್ನು ಆರಾಧನೆ ಮಾಡಿದರು.
ಕಳೆದೊಂದು ವಾರದಿಂದ ಬೆಳಗ್ಗೆಯಿಂದ ಸಂಜೆಯವರೆಗೂ ಹಬ್ಬದ ತಯಾರಿಯನ್ನು ಮಾಡಿಕೊಳ್ಳುತ್ತಿದ್ದ ಜನರು ಮಾರುಕಟ್ಟೆಯಲ್ಲಿ ಆಕಾಶಬುಟ್ಟಿ, ಹಣತೆ, ಹಣ್ಣು ಸುಣ್ಣ-ಬಣ್ಣ ಕಬ್ಬು, ಬಾಳೆಕಂಬ ಸೇರಿದಂತೆ ಇನ್ನಿತರ ವಿವಿಧ ಅಲಂಕಾರಿಕ ಸಾಮಗ್ರಿಗಳನ್ನು ಖರೀದಿಸುವ ಭರಾಟೆಯಲ್ಲಿ ತೊಡಗಿದ್ದರು. ದೀಪಾವಳಿಯ ಅಮಾವಾಸ್ಯೆ ದಿನವಾದ ಮಂಗಳವಾರ ಬೆಳಗಿನ ಜಾವದಿಂದಲೇ ಅಂಗಡಿ ಮುಂಗಟ್ಟು ಹಾಗೂ ಮನೆ ಮುಂಭಾಗವನ್ನು ಸ್ವಚ್ಛಗೊಳಿಸುವುದು, ಬಣ್ಣಬಣ್ಣದ ರಂಗೋಲಿ ಬಡಿಸುವುದು, ತರಹೇವಾರಿ ಹೂವುಗಳ ಶೃಂಗಾರ, ಮಾವಿನ ತಳಿರುತೋರಣ, ಬಾಳೆ ಕಂಬ ತೆಂಗಿನ ಗರಿ ಹಾಗೂ ಜಗಮುಗಿಸುವ ವಿದ್ಯುತ್ ದೀಪಾಲಂಕಾರವನ್ನು ಮಾಡಿ ಲಕ್ಷ್ಮೀದೇವಿಯ ಆರಾಧನೆಯಲ್ಲಿ ತೊಡಗಿದ್ದು ಕಂಡುಬಂದಿತು.

ರಾರಾಜಿಸಿದ ಹಣತೆ ದೀಪಗಳು
ದೀಪಾವಳಿ ಅಂಧಕಾರ ಕಳೆದು ಪ್ರತಿ ಮನೆ ಮನಗಳಲ್ಲಿ ಬೆಳಕಿನ ಸ್ಪರ್ಶವಾಗಲಿ ಜ್ಞಾನದ ಜ್ಯೋತಿ
ಪ್ರಜ್ವಲಿಸಲಿ, ಹೊಸ ಆಶಯ, ಕನಸುಗಳೆಲ್ಲವೂ ಸಾಕಾರಗೊಳ್ಳಲಿ ಎಂದು ದೇವರಲ್ಲಿ ಪ್ರಾರ್ಥಿಸಿದ ಜನರು, ತದ್ದು ಮನೆ, ಅಂಗಡಿ, ಮುಂಗಟ್ಟುಗಳಲ್ಲಿ ಹಣತೆ ಹಾಗೂ ಆಕಾಶಬುಟ್ಟಿಗಳನ್ನು ಹಚ್ಚಿ ಬೆಳಕಿನ ಪ್ರಕಾಶಮಾನ ಪ್ರಜ್ವಲಿಸುವಂತೆ ಮಾಡಿದರು. ಇದರ ಜತೆಗೆ ಯುವಕರು, ಮಕ್ಕಳು ಪರಿಸರ ಸ್ನೇಹಿ ಹಸಿರು ಪಟಾಕಿಗಳನ್ನು ಸಿಡಿಸುವ ಮೂಲಕ ದೀಪಾವಳಿ ಹಬ್ಬವನ್ನು ಸಂಭ್ರಮಿಸಿದರು.

ವರ್ತಕರ ಹೊಸ ಖಾತೆ ಆರಂಭ

ದೀಪಾವಳಿ ಹಬ್ಬದ ನಿಮಿತ್ತ ನಗರದ ವರ್ತಕರು ಮತ್ತು ವಾಣಿಜ್ಯ ಸಂಸ್ಥೆಗಳು ಲಕ್ಷ್ಮೀಪೂಜೆಗೆ ವಿಶೇಷ ಮಹತ್ವ ನೀಡಿದರು.ಅನೇಕ ಅಂಗಡಿ ಮತ್ತು ಮಳಿಗೆ ಮುಂದೆ ಶಾಮಿಯಾನ ಹಾಕಲಾಗಿತ್ತು.ಬಹುತೇಕ ವರ್ತಕರು ಈ ದಿನ ಹೊಸ ಖಾತೆ ಪುಸ್ತಕ ಖರೀದಿಸಿ, ಪೂಜೆ ಮಾಡಿ ಹೊಸ ವಹಿವಾಟಿಗೆ ಚಾಲನೆ ನೀಡಿದರು. ಕೆಲವು ವರ್ತಕರು ಪಾಡ್ಯದ ದಿನ ಲಕ್ಷ್ಮೀ ಪೂಜೆ ಮಾಡಿದ್ದರಿಂದ ಸೋಮವಾರದಿಂದಲೇ ಪಟಾಕಿಗಳ ಅಬ್ಬರ ಮತ್ತು ಸಂಭ್ರಮದ ವಾತಾವರಣ ಸೃಷ್ಟಿಯಾಗಿತ್ತು.

ವಾಹನಗಳ ಪೂಜೆ
ಟ್ರಾಕ್ಟರ್, ಬೈಕ್, ಎತ್ತಿನ ಚಕ್ಕಡಿ, ಕಾರು, ಆಟೋ
ರಿಕ್ಷಾ ಸೇರಿದಂತೆ ಮತ್ತಿತರ ದಿನಂಪ್ರತಿ ಬಳಸುವ ವಾಹನ ಮತ್ತು ವಸ್ತುಗಳನ್ನು ಅಲಂಕರಿಸಿ ಪೂಜಿಸಿದರು. ಹಬ್ಬದ ಪ್ರಯುಕ್ತ ಮನೆಯಲ್ಲಿ ತಯಾರಿಸಲಾದ ವಿಶೇಷ ಖಾದ್ಯವನ್ನು ನೈವೇದ್ಯ ರೂಪದಲ್ಲಿ ದೇವರಿಗೆ ಅರ್ಪಿಸಿದರು. ನಂತರ ಪೂಜೆಗೆ ಆಹ್ವಾನಿಸಿದ್ದ ಮುತ್ತೈದೆಯರಿಗೆ ಬಾಳೆಹಣ್ಣು, ಉತ್ಪತ್ತಿ, ಕುಬಸದ ಕಣ, ಪುಟಾಣಿ, ಸಕ್ಕರೆ, ಬಳೆ, ಅರಿಶಿಣಕುಂಕುದು ನೀಡಿ ಉಡಿತುಂಬಿ ಬೀಳ್ಕೊಟ್ಟರು.

ಕಳೆಗಟ್ಟಿದ ದೀಪಾವಳಿ

ತಾಲೂಕಿನಾದ್ಯಂತ ದೀಪಾವಳಿ ಹಬ್ಬದ ಸಂಭ್ರಮ ಕಳೆಗಟ್ಟಿದ್ದು ಮಹಿಳೆಯರು, ಮಕ್ಕಳು ಹೊಸ ಬಟ್ಟೆ ತೊಟ್ಟು ಸಂಭ್ರಮಿಸಿದರು. ಬಳಿಕ ಮನೆ, ಅಂಗಡಿಗಳು,ಶೋರೂಂಗಳು, ಕಚೇರಿಗಳಲ್ಲಿ ಮಂಟಪವನ್ನು ತಯಾರಿಸಿ ಲಕ್ಷ್ಮಿ ಮೂರ್ತಿ ಹಾಗೂ ಕಳಸವನ್ನು ಪ್ರತಿಷ್ಠಾಪಿಸಿದರು. ತಟ್ಟೆಗಳಲ್ಲಿ ಬೆಳ್ಳಿನಾಣ್ಯ ಚಿನ್ನಾಭರಣ ಹಣ (ದುಡ್ಡು) ಸೇರಿದಂತೆ ಕೃಷಿಕರು ಕೂಲಿಕಾರ್ಮಿಕರು ನೌಕರರು ಸೇರಿದಂತೆ ಜನರು ಅವರವರ ವೃತ್ತಿಗನುಸಾರ ಬಳಸುತ್ತಿದ್ದ ವಸ್ತುಗಳನ್ನಿಟ್ಟು ಶ್ರದ್ಧಾಭಕ್ತಿಯಿಂದ ಧನಲಕ್ಷ್ಮೀಯನ್ನು ಪೂಜಾಸಿದರು.

ಇಂದು ಬಲಿಪಾಡ್ಯ ಆಚರಣೆ
ತಾಲೂಕಿನ ಅತ್ಯಂತ ಸೇರಿದಂತೆ ತಾಲೂಕಿನ ಹಲವು ಭಾಗಗಳಲ್ಲಿ ಜಿಲ್ಲೆಯ ಅ.22 ಬಲಿಪಾಡ್ಯ ಹಬ್ಬ ಆಚರಿಸಲಿದ್ದಾರೆ. ಬಲಿಪಾಡ್ಯ ದಿನ ಗ್ರಾಮೀಣ ಪ್ರದೇಶ ದಲ್ಲಿ ಹೆಚ್ಚಿನ ಜನರು ಹಟ್ಟಿಲಕ್ಕವಳ ಪೂಜೆ ನೆರವೇರಿಸುತ್ತಾರೆ. ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ
ಮನೆ-ಅಂಗಡಿಗಳಲ್ಲಿ ಪ್ರತಿಷ್ಠಾಪನೆ ಮಾಡಿರುವ ಲಕ್ಷ್ಮೀ ಪೂಜೆ ಮುಂದುವರಿ ಯಲಿದ್ದು, ಗ್ರಾಮೀಣ ಪ್ರದೇಶದಲ್ಲಿ ಸೆಗಣಿಯಿಂದ ತಯಾರಿಸಿದ ಪಾಂಡವರ ಮೂರ್ತಿ ಇಟ್ಟು ಮನೆಯಲ್ಲಿ ಪೂಜಿಸುವ ಸಂಪ್ರದಾಯ ಇಂದಿಗೂ ಚಾಲ್ತಿಯಲ್ಲಿದೆ.

Leave a Reply

Your email address will not be published. Required fields are marked *

error: Content is protected !!