ತಿಂಥಣಿ ಶ್ರೀ ಮೌನೇಶ್ವರ ಸನ್ನಿಧಿಯಲ್ಲಿ ಗೋ ಪೂಜೆ,ಗೋವಿನಲ್ಲಿ ಕೋಟ್ಯಂತರ ದೇವತೆಗಳಿದ್ದಾರೆ: ಮೌನೇಶ್ವರ ಸ್ವಾಮೀಜಿ
ಸುರಪುರ ಟೈಮ್ಸ್ ವಾರ್ತೆ
ಸುರಪುರ:‘ಗೋಮಾತೆ ನಮ್ಮೆಲ್ಲರ ಆರಾಧ್ಯ ದೇವತೆ. ಗೋವಿನ ಪ್ರತಿಯೊಂದು ಅಂಗದಲ್ಲಿ ದೇವತೆಗಳಿದ್ದಾರೆ. ಪುರಾಣದ ಪ್ರಕಾರ ಕೋಟ್ಯಂತರ ದೇವತೆಗಳು ಗೋವಿನಲ್ಲಿ ಅಂತರ್ಗತರಾಗಿದ್ದಾರೆ’ ಎಂದು ಮೌನೇಶ್ವರ ದೇವಸ್ಥಾನದ ಅರ್ಚಕ ಮೌನೇಶ್ವರ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ತಿಂಥಣಿ ಗ್ರಾಮದ ಮೌನೇಶ್ವರ ದೇವಸ್ಥಾನದಲ್ಲಿ ಧಾರ್ಮಿಕ ಮತ್ತು ದತ್ತಿ ಇಲಾಖೆಯ ಆದೇಶದ ಪ್ರಕಾರ ಗೋಪೂಜೆ ಸಲ್ಲಿಸಿ ಅವರು ಮಾತನಾಡಿದರು. ‘ಗೋವನ್ನು ಪೂಜಿಸುವುದರಿಂದ ಕೋಟ್ಯಂತರ ದೇವತೆಗಳ ಅನುಗ್ರಹ ನಮಗಾಗುತ್ತದೆ. ಭೂಲೋಕದ ಅಮೃತ ಎಂದು ಖ್ಯಾತಿ ಪಡೆದಿರುವ ಹಾಲನ್ನು ಗೋಮಾತೆ ನಮಗೆ ನೀಡುತ್ತಾಳೆ. ಕಾರಣ ಗೋಮಾತೆಯನ್ನು ಎಲ್ಲರೂ ಪೂಜಿಸಬೇಕು’ ಎಂದು ತಿಳಿಸಿದರು.
ಗೋಮಾತೆಯನ್ನು ಸಿಂಗರಿಸಿ, ಪಂಚ ಭಕ್ಷ್ಯಗಳನ್ನು ತಿನ್ನಿಸಲಾಯಿತು. ಉತ್ಸವ ಮೂರ್ತಿಯನ್ನು ನವರಂಗದಲ್ಲಿ ಪ್ರತಿಷ್ಠಾಪಿಸಿ ಗೋಮಾತೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು.ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ವೆಂಕಟೇಶ ಯರಡೋಣಿ, ಚಿನ್ನಪ್ಪ ಗುಡಗುಂಟಿ, ದೇವಸ್ಥಾನದ ವ್ಯವಸ್ಥಾಪಕ ಶಿವಾನಂದಸ್ವಾಮಿ ಹಿರೇಮಠ, ಸುಭಾಸ ಇತರರು ಉಪಸ್ಥಿತರಿದ್ದರು.

