ಗುರುಮಠಕಲ್ ನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಕಿರಾಣಿ ಅಂಗಡಿ ಬೆಂಕಿಗಾಹುತಿ.
ಸುರಪುರ ಟೈಮ್ಸ್ ವಾರ್ತೆ
ಗುರುಮಠಕಲ್: ಪಟ್ಟಣದ ಮುಖ್ಯ ರಸ್ತೆಯಲ್ಲಿನ ಲಕ್ಷ್ಮೀ ಟ್ರೇಡಿಂಗ್ ಕಿರಾಣಿ ಅಂಗಡಿ ಬುಧವಾರ ಮಧ್ಯರಾತ್ರಿ ಸುಮಾರಿಗೆ ವಿದ್ತುತ್ ಶಾರ್ಟಗ ಸರ್ಕ್ಯೂಟ್ ನಿಂದ ಬೆಂಕಿ ಅವಘಡ ಸಂಭವಿಸಿದ ಕಾರಣ ಸಂಪೂರ್ಣ ಅಂಗಡಿ ಬೆಂಕಿಗಾಹುತಿಯಾಗಿ ಸುಮಾರು 39 ಲಕ್ಷ ರೂಗಳ ನಷ್ಟ ಜರುಗಿದ ಘಟನೆ ನಡೆದಿದೆ.
ಬುಧವಾರ ರಾತ್ರಿ ಎಂದಿನಂತೆ ಅಂಗಡಿ ಮಾಲೀಕರಾದ ಶ್ರೀನಿವಾಸ ನರ್ವಿ ಮತ್ತು ರಾಜು ನರ್ವಿ ಅವರು ರಾತ್ರಿ10 ಗಂಟೆ ಸುಮಾರಿಗೆ ತಮ್ಮ ದೈನಂದಿನ ವ್ಯವಹಾರ ಮುಗಿಸಿ ಮನೆಗೆ ತೆರಳಿದ್ದರು.ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಅಂಗಡಿಯಿಂದ ದಟ್ಟಹೊಗೆ ಬರುವುದನ್ನು ಕಂಡ ಸ್ಥಳೀಯರು ಅಂಗಡಿ ಮಾಲೀಕರಿಗೆ ಕರೆಮಾಡಿ ಕರೆಸಿದ್ದಾರೆ.
ಅಂಗಡಿ ಬಾಗಿಲು ತೆಗೆಸಿ ಖಾಸಗಿ ನೀರಿನ ಟ್ಯಾಂಕರ್ ಮೂಲಕ ಬೆಂಕಿಯನ್ನು ನಂದಿಸಲು ಹರಸಾಹಸ ಪಟ್ಟರು.
ಯಾದಗಿರಿಯ ಅಗ್ನಿಶಾಮಕ ವಾಹನ ಬಂದು ಬೆಂಕಿಯನ್ನೂ ನಂದಿಸಿದರೂ,ವಸ್ತುಗಳು ಮತ್ತು ಅಂಗಡಿ ಸಂಪೂರ್ಣ ಸುಟ್ಟು ಕರಕಲಾಗಿತ್ತು.
ಶೀಘ್ರದಲ್ಲಿ ಅಗ್ನಿಶಾಮಕ ಠಾಣೆಯನ್ನು ಸ್ಥಾಪಿಸಿ
ತಹಸೀಲ್ದಾರ ಶಾಂತಗೌಡ ಬಿರಾದಾರ,ಪಿಐ ವೀರಣ್ಣ ದೊಡ್ಡಮನಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.ಗುರುಮಠಕಲ್ ಪಟ್ಟಣ ವ್ಯಾಪ್ತಿಯಲ್ಲಿ ಅಗ್ನಿ ಅವಘಡಗಳು ಆಗಾಗ್ಗೆ ಸಂಭವಿಸುತ್ತಿದ್ದರೂ ಇಲ್ಲಿಯವರೆಗೆ ಅಗ್ನಿ ಶಾಮಕ ಠಾಣೆ ಸ್ಥಾಪನೆಯಾಗಿಲ್ಲ.ಈ ಕುರಿತು ಜಿಲ್ಲಾಡಳಿತಕ್ಕೆ ಮಾಹಿತಿ ಇದ್ದರೂ ಈ ವರೆಗೂ ಕಾರ್ಯಾರಂಭವಾಗಿಲ್ಲ. ಈ ಕೂಡಲೆ ತಾಲೂಕಾ ಕೇಂದ್ರವಾದ ಗುರುಮಠಕಲ್ ಪಟ್ಟಣದಲ್ಲಿ ಶೀಘ್ರದಲ್ಲಿ ಅಗ್ನಿಶಾಮಕ ಠಾಣೆಯನ್ನು ಸ್ಥಾಪಿಸಬೇಕು ಎಂದು ಮಾಜಿ ಎಪಿಎಮ್ ಸಿ ಸದಸ್ಯಅನಂತಪ್ಪ ಬೋಯಿನ್ ಒತ್ತಾಯಿಸಿದ್ದಾರೆ.



