ಇದೆಂಥ ನಿರ್ಲಕ್ಷ್ಯ; ರಾಜ್ಯೋತ್ಸವ ಪೂರ್ವಭಾವಿ ಸಭೆಗೆ ಅಧಿಕಾರಿಗಳೇ ಗೈರು !
ಸುರಪುರ ಟೈಮ್ಸ್ ವಾರ್ತೆ
ಸುರಪುರ :ತಾಲೂಕಿನ ಸುಮಾರು 30ಕ್ಕೂ ಹೆಚ್ಚು ವಿವಿಧ ಇಲಾಖೆಗಳು ಕಾರ್ಯ ನಿರ್ವಹಿಸುತ್ತಿದ್ದು, ಶುಕ್ರವಾರ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ಪೂರ್ವಭಾವಿ ಸಭೆಗೆ ತಾಲೂಕಿನ ಸುಮಾರು 30ಕ್ಕೂ ಹೆಚ್ಚು ಇಲಾಖೆಗಳ ಪೈಕಿ ಕೇವಲ 5-6 ಇಲಾಖೆಗಳ ಪ್ರತಿನಿಧಿಗಳು ಹಾಜರಾಗಿದ್ದಕ್ಕೆ ಕನ್ನಡ ಸಂಘಟನೆಗಳ ಮುಖಂಡರ ಆಕ್ರೋಶಕ್ಕೆ ಕಾರಣವಾಯಿತು.
ಅಧಿಕಾರಿಗಳು ಸಭೆಗೆ ಯಾಕೆ ಬಂದಿಲ್ಲ ಖಾರವಾಗಿ ಪ್ರಶ್ನೀಸಿದರು. ನಿಮ್ಮ ಮೇಲಧಿಕಾರಿಗಳಿಗೆ ಕರೆಸಿ ಎಂದು ಸಭೆಗೆ ಆಗಮಿಸಿದ್ದ ಕೆಲ ಸಹಾಯಕ ಸಿಬ್ಬಂದಿಗಳಿಗೆ ತಿಳಿಸಿದರು. ಮೀಟಿಂಗ್ ಇದೆ, ಅಲ್ಲಿಗೆ, ಮತ್ತೆಲ್ಲಿಗೆ ಹೋಗಿದ್ದಾರೆ ಎಂದು ಸುಳ್ಳು ಹೇಳಿ ಸಭೆ ತಪ್ಪಿಸಿಕೊಳ್ಳುವುದು ಸರಿಯಲ್ಲ ಎಂದು ಗುಡುಗಿದರು. ರಾಜ್ಯೋತ್ಸವ ಕಾರ್ಯಕ್ರಮದ ಸಭೆಗೆ ಬರುವುದಿಲ್ಲ ಎಂದರೆ ಎಷ್ಟು ಸರಿ ಎಂದು ಗರಂ ಆದರು. ಮುಂದೆ ಹೀಗಾಗದಂತೆ ನೋಡಿಕೊಳ್ಳಬೇಕು. ಅದೇ ಚಾಳಿ ಮುಂದುವರೆದರೆ ಸಹಿಸಲಾಗದು ಎಂದು ಕಡಕ್ ಆಗಿ ಹೇಳಿದರು.
ಇಲ್ಲಿಯ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಕನ್ನಡ ರಾಜ್ಯೋತ್ಸವ ಆಚರಣೆ ಪೂರ್ವಭಾವಿ ಸಭೆಯ ತಹಸೀಲ್ದಾರ್ ಎಚ್.ಎ.ಸರಕಾವಸ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಂಬಂಧಿಸಿದ ಇಲಾಖೆಗಳ ಮುಖ್ಯಸ್ಥರು ತಮಗೆ ವಹಿಸಿರುವ ಜವಾಬ್ದಾರಿಗಳಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ನಿರ್ದೇಶನ ನೀಡಿದರು.
ಕನ್ನಡ ಪರ ಸಂಘಟನೆಗಳ ವೃತ್ತಗಳಿಗೆ ಬಣ್ಣ ಹಚ್ಚಿ, ವಿದ್ಯುತ್ ದೀಪಗಳಿಂದ ಅಲಂಕರಿಸಬೇಕು. ಅಂದು ಬೆಳಗ್ಗೆ 8:30 ಗಂಟೆಗೆ ಎಲ್ಲ ಸರಕಾರಿ ಕಚೇರಿ, ಗ್ರಾಮ ಪಂಚಾಯಿತಿ, ಶಾಲಾ-ಕಾಲೇಜು, ಅಂಚೆ ಕಚೇರಿ, ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿ ಎಲ್ಲಾ ಸರಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ರಾಷ್ಟ ಧ್ವಜಾರೋಹಣ ನೆರವೇರಿಸಿ ಗೌರವ ಸೂಚಿಸಬೇಕು ಎಂದು ಹೇಳಿದರು.
ನಂತರ ತಹಸೀಲ್ದಾರ್ ಕಚೇರಿಯಲ್ಲಿ ತಾಲೂಕಾಡಳಿತ ವತಿಯಿಂದ ಅಂದು ಬೆಳಗ್ಗೆ 9.3೦ ಗಂಟೆಗೆ ರಾಜ್ಯೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿದ್ದು ಎಲ್ಲಾ ಇಲಾಖೆಗಳ ಅಧಿಕಾರಿಗಳು ತಪ್ಪದೇ ಭಾಗವಹಿಸಬೇಕು. ಉಪನ್ಯಾಸಕರಿಂದ ಉಪನ್ಯಾಸ ಇರುತ್ತದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯ ಕನ್ನಡ ವಿಷಯದಲ್ಲಿ 125 ಕ್ಕೆ 125 ಅಂಕ ಪಡೆದ ಮತ್ತು ಪಿಯುಸಿ ಪರೀಕ್ಷೆಯ ಕನ್ನಡ ಭಾಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಗುವುದು. ಒಟ್ಟಾರೆ ಸಮಾರಂಭವನ್ನು ಅಚ್ಚುಕಟ್ಟಾಗಿ ನೆರವೇರಿಸಬೇಕು ಎಂದು ಹೇಳಿದರು.
ಕನ್ನಡ ಸಂಘಟನೆಗಳ ಮುಖಂಡರು ಮಾತನಾಡಿ, ಸಂಭ್ರಮದಿಂದ ರಾಜ್ಯೋತ್ಸವ ಆಚರಣೆಗೆ ಕ್ರಮವಹಿಸಬೇಕು ಎಂದು ಹಲವು ಸಲಹೆ ಸೂಚನೆ ನೀಡಿದರು. ತಾಪಂ ಇಒ ಬಸವರಾಜ ಸಜ್ಜನ್, ಸಿಪಿಐ ಉಮೇಶ ನಾಯಕ, ದೈಹಿಕ ಶಿಕ್ಷಣಾಧಿಕಾರಿ ಮಲ್ಲಣ್ಣ ದೊಡ್ಡಮನಿ, ಹೋಮಗಾರ್ಡ್ ಕಮಾಂಡರ್ ವೆಂಕಟೇಶ.ಎಸ್. ಕೃಷಿ ಇಲಾಖೆ ಭೀಮರಾಯ ನಾಯಕ ಹವಲ್ದಾರ್ ಸೇರಿ ಬೆರಳೆಣಿಕೆಯಷ್ಟು ಇಲಾಖೆಯ ಅಧಿಕಾರಿಗಳು ಇದ್ದರು.
ಕನ್ನಡ ಸಂಘಟನೆಗಳ ಮುಖಂಡರಾದ ವೆಂಕಟೇಶ ನಾಯಕ ಬೈರಿಮಡ್ಡಿ, ಭೀಮು ನಾಯಕ ಮಲ್ಲಿಬಾವಿ, ಶಿವಮೊನ್ನಯ್ಯ ಎಲ್‌ಡಿ ನಾಯಕ ದೇವರಗೋನಾಲ, ರಮೇಶ ದೊರೆ ಆಲ್ದಾಳ, ವೆಂಕಟೇಶ ಬೇಟೆಗಾರ, ಭೀಮನಗೌಡ ಲಕ್ಷ್ಮೀ ನಾಗರಾಜ ನಾಯಕ ಪ್ಯಾಪ್ಲಿ, ಚಂದ್ರಶೇಖರ ನಾಯಕ ಬಿಚ್ಚುಗತ್ತಿಕೇರಿ, ಯಲ್ಲಪ್ಪ ಹುಲಿಕಲ್, ಉಸ್ತಾದ್ ವಜಾಹತ್ ಹುಸೇನ್, ಹಣಮಗೌಡ ಶಾಖಪೂರ, ಶಿವರಾಜ ವಗ್ಗರ ಸೇರಿ ಕನ್ನಡ ಸಂಘಟನೆಗಳ ಅನೇಕರು ಇದ್ದರು.
ನಗರಸಭೆಯ ಧೋರಣೆ ಸರಿಯಲ್ಲ
ಪೂರ್ವಭಾವಿ ಸಭೆಯಲ್ಲಿ ಕನ್ನಡ ನಾಮಫಲಕಗಳ ಚರ್ಚೆ ಜೋರಾಗಿತ್ತು. ನಗರದಲ್ಲಿ ಅನ್ಯಭಾಷೆ ನಾಮಫಲಕ ತೆರವುಗೊಳಿಸಿ ಕನ್ನಡ ನಾಮಫಲಕ ಹಾಕಲು ತಿಳಿಸಬೇಕು ಎಂದು ಅನೇಕ ಬಾರಿ ತಿಳಿಸಿದರೂ ನಗರಸಭೆಯವರು ಕ್ಯಾರೆ ಅನ್ನುತ್ತಿಲ್ಲ. ನಾಮಫಲಕ ಹಾಕಿದವರ ವಿರುದ್ಧ ಕ್ರಮಕೈಗೊಳ್ಳದೆ ನಿರ್ಲಕ್ಷ್ಯ ಧೋರಣೆ ಮುಂದುವರೆಸಿದ್ದಾರೆ. ಇದು ಸರಿಯಾದ ಕ್ರಮವಲ್ಲ ಎಂದು ಕನ್ನಡ ಹೋರಾಟಗಾರರು ಜೋರಾಗಿ ಧ್ವನಿ ಎತ್ತಿದರು. ವಾರದಲ್ಲಿ ಇದು ಸರಿ ಹೋಗದಿದ್ದಲ್ಲಿ ಹೋರಾಟ ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.


