ಗುಂಡಿಮಯ ರಸ್ತೆಯಲ್ಲಿ ಸಂಚಾರ ಅಯೋಮಯ…!ವಾಹನಗಳ ಸವಾರರು ಪರದಾಟ

ಸುರಪುರ ಟೈಮ್ಸ್ ವಾರ್ತೆ

ಸುರಪುರ:ರಸ್ತೆಯ ತುಂಬಾ ಗುಂಡಿಗಳು, ಮಳೆಯಾದರೆ ಕೆಸರಿನ ಗದ್ದೆಯಂತೆ ಬದಲಾವಣೆ, ನಿರ್ವಹಣೆ ಕೊರತೆ, ಕಳಪೆ ಕಾಮಗಾರಿ ಮತ್ತು ಅತಿ ಭಾರದ ಸರಕು ವಾಹನಗಳ ಓಡಾಟದಿಂದ ಕಿತ್ತು ಹೋದ ಡಾಂಬರು, ಆಮೆ ವೇಗದಲ್ಲಿ ಸಂಚರಿಸುವ ವಾಹನಗಳು ಓಡಾಡುವ ಸವಾರರು…

ಇವು ತಾಲೂಕಿಗೆ ಸೇರುವ ರಾಜ್ಯ ಹೆದ್ದಾರಿಗಳು, ತಾಲೂಕಿನ ಮುಖ್ಯರಸ್ತೆಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕಂಡುಬರುವ ಸಾಮಾನ್ಯ ದೃಶ್ಯಗಳು. ನಗರವೂ ಸೇರಿದಂತೆ ಗ್ರಾಮಾಂತರ ಪ್ರದೇಶದಲ್ಲಿನ ಬಹುತೇಕ ರಸ್ತೆಗಳಲ್ಲಿ ಗುಂಡಿ ಬಿದ್ದು ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಸತತ ಮಳೆ, ಅವೈಜ್ಞಾನಿಕ ಕಾಮಗಾರಿ, ಸಕಾಲಕ್ಕೆ ಕೈಗೊಳ್ಳದ ದುರಸ್ತಿಯಿಂದಾಗಿ ರಸ್ತೆಗಳ ಗುಂಡಿಗಳಿಗೆ ಶಾಶ್ವತ ಪರಿಹಾರ ಸಿಗುತ್ತಿಲ್ಲ.
ತಾಲೂಕಿನ ಗಡಿ ಗ್ರಾಮವಾದ ಕೃಷ್ಣಪೂರ-ಬಿಜಾಸಪುರ ಗ್ರಾಮದಿಂದ ತಿಂಥಣಿ ಬ್ರಿಜ್‌ ವರೆಗೆ ಇರುವ ರಾಷ್ಟ್ರೀಯ ಹೆದ್ದಾರಿ ರಸ್ತೆಯು ಸಂಪೂರ್ಣ ಹದಗೆಟ್ಟು ಹೋಗಿದ್ದ ಎಲ್ಲೆಂದರಲ್ಲಿ ತಗ್ಗು ಗುಂಡಿಗಳು ಬಿದ್ದಿದ್ದು ಪ್ರತಿನಿತ್ಯ ಈ ರಸ್ತೆಯಲ್ಲಿ ಓಡಾಡುವ ನೂರಾರು ವಾಹನಗಳ ಸವಾರರು ಪರದಾಡುವಂತಾಗಿದೆ.

ತಾಲೂಕಿನ ಬಿಜಾಸಪುರ,ಲಕ್ಷ್ಮೀಪುರ ಹಳ್ಳದ ಬಳಿ,ವೆಂಕಟಾಪುರ,ಕುಂಬಾರ ‘ಪೇಟ,ಕವಡಿಮಟ್ಟಿ ಕೃಷಿ ಸಂಶೋಧನಾ ಕೇಂದ್ರ,ಕವಡಿಮಟ್ಟಿ ಸೇರಿದಂತೆ ತಿಂಥಣಿ ಬ್ರಿಜ್‌ ವರೆಗೆ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟು ಹೋಗಿದ್ದು ರಸ್ತೆಯ ಮಧ್ಯೆ ಬಿದ್ದಿರುವ ತಗ್ಗು ಗುಂಡಿಗಳನ್ನು ತಪ್ಪಿಸಲು ಹೋಗಿ ಪ್ರತಿನಿತ್ಯ ವಾಹನ ಅಪಘಾತಗಳು ಸಂಭವಿಸುತ್ತಿದ್ದು ಅನೇಕರು ಗಾಯಗೊಂಡಿರುವ
ಘಟನೆಗಳು ನಡೆಯುತ್ತಲೇ ಇವೆ. ಅಲ್ಲದೆ ರಸ್ತೆಯ ಬದಿಗಳಲ್ಲಿ ದೊಡ್ಡ ದೊಡ್ಡ ಕಂದಕಗಳು ಬಿದ್ದಿದ್ದು ಪ್ರತಿನಿತ್ಯ ಸಾರಿಗೆ ಬಸ್,ಲಾರಿ.ದ್ವಿಚಕ್ರ ಮುಂತಾದ ವಾಹನಗಳು ಉರುಳಿ ಬೀಳುವ ಘಟನೆಗಳು ಜರುಗಿ ಪ್ರಯಾಣಿಕರು
ಕಾಲು ಕೈ ಮುರಿದಕೊಂಡು ಗಾಯಗೊಳ್ಳುತ್ತಿರುವ ಘಟನೆಗಳು ಸಂಭವಿಸುತ್ತಿವೆ ಎಂಬುದು ಸಾರ್ವಜನಿಕರ ದೂರಾಗಿದೆ.ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಜಿಲ್ಲಾಮುಖ್ಯ ಹಾಗೂ ಗ್ರಾಮೀಣ ರಸ್ತೆಗಳು ವಾಣಿಜ್ಯ ಚಟುವಟಿಕೆ ಮತ್ತು ಜನರ ಸಂ‍ಪರ್ಕಕ್ಕೆ ಜೀವಾಳ. ಆದರೆ, ಕೆಲವು ಕಡೆಗಳಲ್ಲಿ ಮೊಳಕಾಲುದ್ದ ಗುಂಡಿಗಳಿದ್ದರೆ, ಮತ್ತೆ ಕೆಲವೆಡೆ ಇಡೀ ರಸ್ತೆಯೇ ಕೊರಕಲು ಬಿದ್ದಿದೆ. ಮಳೆಯಾದರೆ ರಸ್ತೆಯಾವುದು, ತಗ್ಗು ಯಾವುದು ಎಂಬುದು ಗೊತ್ತಾಗದೆ ಬೈಕ್ ಸವಾರರು ಬಿದ್ದು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಸಾಕಷ್ಟು ನಿದರ್ಶನಗಳಿವೆ.

ಕೊರಕಲು ಬಿದ್ದ ರಸ್ತೆಗಳ ಅಕ್ಕಪಕ್ಕದಲ್ಲಿ ಕುರುಚಲು ಗಿಡಗಳು, ಜಾಲಿ ಗಿಡಗಳು ಬೆಳೆದಿವೆ. ಎದುರಿಗೆ ವಾಹನಗಳು ಬಂದರೆ ಬೈಕ್ ಸವಾರ, ಎತ್ತಿನ ಬಂಡಿಯ ರೈತರು ಮುಳ್ಳು ಕಂಟಿಯಲ್ಲಿ ನಿಂತುಕೊಂಡು ದಾರಿ ಮಾಡಿಕೊಡಬೇಕಿದೆ. ವರ್ಷಗಳಿಂದ ಗುಂಡಿಬಿದ್ದು ಶಾಶ್ವತ ಪರಿಹಾರ ಕಾಣದ ರಸ್ತೆಗಳಿಗೆ ಸತತ ಮಳೆಯಿಂದಾಗಿ ಹಾಗು ಗೆದ್ದ ನೀರಿನಿಂದಾಗಿ ಹಾನಿಗೊಳಿಸಿದೆ.
ಕೆಲವಡೆ ತಾತ್ಕಾಲಿಕವಾಗಿ ಮುರುಮ್ ಹಾಕಿ ಗುಂಡಿಗಳನ್ನು ಮುಚ್ಚಲಾಗುತ್ತಿದ್ದು, ಶಾಶ್ವತ ಪರಿಹಾರ ಎಂಬುದು ಮರೀಚಿಕೆಯಾಗಿದೆ. ಗುಂಡಿಗಳಿಂದಾಗಿ ವಾಹನ ಬಾಳಿಕೆ ಅವಧಿ ಕಡಿಮೆ ಆಗುತ್ತಿದೆ. ಪದೇ ಪದೇ ದುರಸ್ತಿಗೂ ಬರುತ್ತಿವೆ. ತಗ್ಗಿಗೆ ಬಿದ್ದು ಟೈರ್‌ಗಳು ಸಹ ಒಡೆಯುತ್ತಿವೆ’ ಎನ್ನುತ್ತಾರೆ ಬೈಕ್ ಸವಾರ ಸಿದ್ದನಗೌಡ ಬೆಳ್ಳಿ.

ಬೀದರ-ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿಯಲ್ಲಿಬರುವ ಹತ್ತಿಗುಡೂರ ದಿಂದ ತಿಂಥಣಿ ಬಿಜ್‌ವರೆಗೆ ಇರುವ ಈ ರಸ್ತೆಯು ಹೆದ್ದಾರಿ ಪ್ರಾಧಿಕಾರಕ್ಕೆ ಒಳಪಡುತ್ತದೆ ಎಂದು ತಿಳಿದುಬಂದಿದ್ದು ಯಾದಗಿರಿಯಲ್ಲಿ ಪ್ರಾಧಿಕಾರ ಕಚೇರಿ ಇದೆ ಪ್ರತಿನಿತ್ಯ ಹದಗೆಟ್ಟಿರುವ ಈ ರಸ್ತೆಯಲ್ಲಿ ಪ್ರತಿನಿತ್ಯ ಸಂಚಸಿರುವ ವಾಹನಗಳು ಪರದಾಡುವುದು ಪ್ರಾಧಿಕಾರದ ಕಣ್ಣಿಗೆ ಕಾಣುತ್ತಿಲ್ಲವೇ ಎಂಬ ಪ್ರಶ್ನೆ ಪ್ರಜ್ಞಾವಂತ ನಾಗರಿಕರದ್ದಾಗಿದೆ. ಈಗಲಾದರೂ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ಹದಗೆಟ್ಟಿರುವ ಈ ರಸ್ತೆಯ ಪರಿಸ್ಥಿತಿ ಬಗ್ಗೆ ಕಣ್ಣೆರೆದು ನೋಡಲಿ ರಸ್ತೆಯ ಮಧ್ಯೆ ಬಿದ್ದಿರುವ ಗುಂಡಿಗಳನ್ನು ಹಾಗೂ ರಸ್ತೆಯ ಬದಿಗಳಲ್ಲಿ ಇರುವ ಕಂದಕಗಳನ್ನು ಮುಚ್ಚಿ ಅನುಕೂಲ ಮಾಡಿಕೊಡಲಿ ಎಂಬುದು ಸಾರ್ವಜನಿಕರ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!