ಕನ್ನಡ ಭಾಷೆ ನಮ್ಮ ಜೀವನಾಡಿಯಾಗಿದೆ:ಶಾಸಕ ಆರ್‌ವಿಎನ್
ಸುರಪುರ ಟೈಮ್ಸ್ ವಾರ್ತೆ
ಸುರಪುರ : ಕನ್ನಡ ರಾಜ್ಯೋತ್ಸವ ಸಮಸ್ತ ಕನ್ನಡಿಗರ ಹೆಮ್ಮೆಯ ಹಬ್ಬ ಹಾಗೂ ಭಾಷೆ ನಮ್ಮ ಜೀವನಾಡಿಯಾಗಿದೆ.ಇದು ನಮ್ಮ ನಾಡು, ನುಡಿ, ಹಿರಿಮೆ, ಗರಿಮೆಗಳನ್ನು ಮೆಲುಕು ಹಾಕುವ ಸಾಂಸ್ಕೃತಿಕ ಉತ್ಸವ. ನಾಡಿನ ನೆಲ, ಜಲ, ಸಂಸ್ಕೃತಿ ರಕ್ಷಣೆ ಪ್ರತಿಯೊಬ್ಬ ಕನ್ನಡಿಗರ ಜವಾಬ್ದಾರಿಯಾಗಿದೆ ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ಹೇಳಿದರು.
ಇಲ್ಲಿಯ ಮಹಾತ್ಮ ಗಾಂಧೀಜಿ ವೃತ್ತದಲ್ಲಿ 70ನೇ ಕನ್ನಡ ರಾಜ್ಯೋತ್ಸವ ನಿಮಿತ್ತ ಶನಿವಾರ ನಗರಸಭೆ ವತಿಯಿಂದ ಹಮ್ಮಿಕೊಂಡಿದ್ದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಕನ್ನಡ ಹಬ್ಬ 70ನೇ ಕನ್ನಡ ರಾಜ್ಯೋತ್ಸವವನ್ನು ನಾವೆಲ್ಲರೂ ಅತ್ಯಂತ ಸಡಗರ ಸಂಭ್ರಮದಿಂದ ಧ್ವಜಾರೋಹಣ ಮೂಲಕ ಆಚರಿಸುತ್ತಿದ್ದೇವೆ. ಇದು ನಮ್ಮೆಲ್ಲರಿಗೂ ಪ್ರಮುಖ ಮತ್ತು ಹೆಮ್ಮೆಯ ಹಬ್ಬವಾಗಿದೆ. ಕನ್ನಡ ನಾಡು, ನುಡಿ ಸೇವೆಗೈದ ಮಹನೀಯರನ್ನು ಪ್ರತಿಯೊಬ್ಬರು ಸ್ಮರಿಸಬೇಕು. ಪ್ರತಿಯೊಬ್ಬ ಕನ್ನಡಿಗರಿಗೆ ಮಾತೃಭಾಷೆಯ ಬಗ್ಗೆ ಕಾಳಜಿ ಅಗತ್ಯವಾಗಿದೆ. ಕನ್ನಡ ನಾಡು, ನುಡಿ ಸೇವೆಗೆ ಎಲ್ಲರೂ ಸದಾ ಬದ್ಧವಾಗಿರಬೇಕು ಎಂದರು.
ಕನ್ನಡ ಭಾಷೆ ಅಗಾಧವಾದ ಜ್ಞಾನಸಂಪತ್ತನ್ನು ಹೊಂದಿದೆ. ಎಂಟು ಜ್ಞಾನಪೀಠ ಪ್ರಶಸ್ತಿಗಳು ಕರ್ನಾಟಕಕ್ಕೆ ಸಿಕ್ಕಿರುವ ಹೆಗ್ಗಳಿಕೆ ಇದೆ. ಕನ್ನಡ ನಾಡಿನ ಇತಿಹಾಸ, ಭಾಷೆ, ಸಾಹಿತ್ಯ, ಸಂಸ್ಕೃತಿ ಕಲೆಯ ಬಗ್ಗೆ ಅರಿವು ಮೂಡಿಸುವುದು ಕನ್ನಡಿಗರ ಆದ್ಯ ಕರ್ತವ್ಯವಾಗಿದೆ. ಅಖಂಡ ಕರ್ನಾಟಕ ಪ್ರಜೆಗಳಾದ ನಾವು ಕನ್ನಡ ಭಾಷೆ, ನೆಲ-ಜಲದ ಬಗ್ಗೆ ಅಭಿಮಾನವಿರಿಸಿಕೊಂಡು, ಕನ್ನಡ ಭಾಷೆ, ಸಂಸ್ಕೃತಿ ಹಾಗೂ ಪರಂಪರೆ ಉಳಿಸಿ ಬೆಳೆಸಬೇಕು ಎಂದು ಸಲಹೆ ನೀಡಿದರು.
ನಗರಸಭೆ ಅಧ್ಯಕ್ಷೆ ಹೀನಾ ಕೌಸರ್ ಶಕೀಲ್ ಅಹ್ಮದ್, ಉಪಾಧ್ಯಕ್ಷ ರಾಜಾ ಪಿಡ್ಡ ನಾಯಕ (ತಾತಾ), ಪೌರಾಯುಕ್ತ ಬಸವರಾಜ ಟಣಕೇದಾರ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಪ್ರಕಾಶ ಗುತ್ತೇದಾರ್, ನಗರಸಭೆ ಸದಸ್ಯರು, ಕಾಂಗ್ರೆಸ್ ಪಕ್ಷದ ಮುಖಂಡರು, ಪ್ರಮುಖರು, ನಗರಸಭೆ ಅಧಿಕಾರಿಗಳು, ಸಿಬ್ಬಂದಿಗಳು ಇದ್ದರು.








