ನಮ್ಮ ಮಾತೃಭಾಷೆ ಕನ್ನಡ ಕೇವಲ ಭಾಷೆಯಲ್ಲ, ಅದು ನಮ್ಮ ಅಸ್ತಿತ್ವ, ಸಂಸ್ಕೃತಿ ಮತ್ತು ಆತ್ಮಸಾಕ್ಷಿಯ ಪ್ರತೀಕ:ಅಕ್ಕುಬಾಯಿ
ಸುರಪುರ ಟೈಮ್ಸ್ ವಾರ್ತೆ
ಸುರಪುರ: ನಮ್ಮ ಮಾತೃಭಾಷೆ ಕನ್ನಡ ಕೇವಲ ಭಾಷೆಯಲ್ಲ, ಅದು ನಮ್ಮ ಅಸ್ತಿತ್ವ, ಸಂಸ್ಕೃತಿ ಮತ್ತು ಆತ್ಮಸಾಕ್ಷಿಯ ಪ್ರತೀಕ:ಅಕ್ಕುಬಾಯಿ
ಕನ್ನಡ ರಾಜ್ಯೋತ್ಸವ ನಮ್ಮ ಹೆಮ್ಮೆಯ ಹಬ್ಬ. ನಮ್ಮ ಮಾತೃಭಾಷೆ ಕನ್ನಡ ಕೇವಲ ಭಾಷೆಯಲ್ಲ, ಅದು ನಮ್ಮ ಅಸ್ತಿತ್ವ, ಸಂಸ್ಕೃತಿ ಮತ್ತು ಆತ್ಮಸಾಕ್ಷಿಯ ಪ್ರತೀಕ. ಕನ್ನಡ ನಾಡಿನಲ್ಲಿ ಹುಟ್ಟಿರುವ ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ ಕನ್ನಡದ ಗೌರವವನ್ನು ಉಳಿಸಿ, ಮುಂದಿನ ಪೀಳಿಗೆಗೆ ಪಸರಿಸುವುದು, ಕನ್ನಡ ಭಾಷೆಯ ಇತಿಹಾಸ, ಸಾಹಿತ್ಯ, ಸಂಸ್ಕೃತಿ, ಸರಳತೆ ಮತ್ತು ಸೌಂದರ್ಯವನ್ನು ಅರಿತು, ಅದರ ಶ್ರೇಷ್ಠತೆಯನ್ನು ಕಾಪಾಡೋಣ ಎಂದು ಶಾಲೆಯ ಪ್ರದಾನ ಗುರುಗಳಾದ ಅಕ್ಕುಬಾಯಿ ಹೇಳಿದರು.
ಅವರು ತಾಲೂಕಿನ ತಿಂಥಣಿಯ ಕಸ್ತೂರಿ ಬಾ ಬಾಲಕಾ ವಸತಿ ಶಾಲೆಯಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು ಕನ್ನಡ ಭಾಷೆ ಇಡೀ ದೇಶ ಮತ್ತು ಜಗತ್ತಿನ ಉದ್ದಗಲಕ್ಕೂ ಕೀರ್ತಿಯನ್ನು ತಂದಿದೆ. ಮಹಾನ್ ಕವಿಗಳು, ಲೇಖಕರು, ಮತ್ತು ಚಿಂತಕರು ನಮ್ಮ ನಾಡಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಅವರ ಕಾವ್ಯ ಮತ್ತು ಕೃತಿಗಳು ನಮ್ಮ ನಾಡಿನ ಅಸ್ತಿತ್ವವನ್ನು ಪ್ರತಿಬಿಂಬಿಸುತ್ತವೆ. ಇಂದಿನ ದಿನಗಳಲ್ಲಿ ಅಮೆರಿಕಾದಂತಹ ದೇಶಗಳಲ್ಲಿಯೂ ಕನ್ನಡ ದಿನಾಚರಣೆಯನ್ನು ಆಚರಿಸುತ್ತಿದ್ದಾರೆ. ಅಂತಹ ಭಾಷೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದರು.
ಕನ್ನಡ ನಾಡು, ಗುಡ್ಡ, ಬೆಟ್ಟ, ನದಿ, ಅರಣ್ಯ ಸೇರಿದಂತೆ ಅಪಾರ ಸಂಪತ್ತುಗಳಿಂದ ಕೂಡಿದೆ. ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ಎಲ್ಲರೂ ಸೇರಿ ಬದುಕೋಣ, ಕನ್ನಡ ನಾಡಿನ ಹಿರಿಮೆ ಹೆಚ್ಚಿಸೋಣ. ಆರ್ಥಿಕವಾಗಿ ಬಲವಾಗುವತ್ತ ನಾವು ಹೆಜ್ಜೆ ಇಡಬೇಕು. ಎಲ್ಲರನ್ನೂ ಸಮಾನವಾಗಿ ಕಾಣುವುದು ನಿಜವಾದ ಕನ್ನಡಿಗನ ಗುಣ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕಿಯರಾದ ಅಕ್ಕನಾಗಮ್ಮ, ಶಿಲ್ಪಾ, ಸುಮಿತ್ರಾ, ಸವಿತಾ, ಮೋನಿಕಾ, ಭಾಗ್ಯ, ನೇತ್ರಾ ಸೇರಿದಂತೆ ಶಾಲೆಯ ಸಿಬಂದಿ ಉಪಸ್ಥಿತರಿದ್ದರು.
ಮಕ್ಕಳು ಕನ್ನಡ ನಾಡಗೀತೆ, ಜನಪದ ನೃತ್ಯ ಹಾಗೂ ಕವಿ ಭಾವಗೀತೆಗಳ ಮೂಲಕ ಕನ್ನಡದ ಸೌಂದರ್ಯವನ್ನು ಮೆರೆದರು.


