ಚಳಿಚಳಿ ತಾಳೆನು ಈ ಚಳಿ..!ಅವಧಿಗೂ ಮುನ್ನ ಥಂಡಿ ವಾತಾವರಣ | ಬೆಳಗ್ಗೆ, ರಾತ್ರಿ ಕನಿಷ್ಠ ತಾಪಮಾನ | ವಾಯು,ವಿಹಾರ, ದೈನಂದಿನ ಚಟುವಟಿಕೆಗಳಿಗೆ ಅಡ್ಡಿ |

ಸುರಪುರ ಟೈಮ್ಸ್ ವಾರ್ತೆ

ಸುರಪುರ:ತಾಲೂಕಿನಲ್ಲಿ ಅವಧಿಗೂ ಮುನ್ನ ಚಳಿ ಶುರುವಾಗಿದ್ದು, ಬೆಳಗ್ಗೆ ಹಾಗೂ ರಾತ್ರಿ ಕನಿಷ್ಠ ತಾಪಮಾನ ದಾಖಲಾಗುತ್ತಿರುವ ಪರಿಣಾಮ ಜನ ಜೀವನದ ಮೇಲೆ ಪರಿಣಾಮ ಬೀರಿದೆ.

ಚಳಿಗಾಲ ನವೆಂಬರ್ ಕೊನೆ ಅಥವಾ ಡಿಸೆಂಬರ್ ಮೊದಲ ವಾರದಿಂದ ಶುರುವಾಗುವುದು ವಾಡಿಕೆ. ಆದರೆ, ಈ ಬಾರಿ ನವೆಂಬ‌ರ್ ಮೊದಲ ವಾರದಿಂದಲೇ ಶುರುವಾಗಿದ್ದು, ಬೆಳಗಿನ ವೇಳೆ ಥಂಡಿ ವಾತಾವರಣ ಹಾಗೂ ಇಬ್ಬನಿ ಶುರುವಾಗಿದೆ.
ಅಲ್ಲದೇ ರಾತ್ರಿ ಹೆಚ್ಚು ಹಗಲು ಕಡಿಮೆಯಾಗುತ್ತಿದೆ. ಇಬ್ಬನಿ ಬೀಳುತ್ತಿರುವ ಹಿನ್ನೆಲೆಯಲ್ಲಿ ಬೆಳಗ್ಗೆ ವಾಯು ವಿಹಾರ ಮಾಡುವ, ಕೆಲಸ, ಕಾರ್ಯಗಳಿಗೆ ತೆರಳುವ ಮಂದಿಗೆ ಆರೋಗ್ಯದಲ್ಲಿ ಏರು, ಪೇರಾಗುವ ಸಾಧ್ಯತೆ ಹೆಚ್ಚಿದೆ. ವಾತಾವರಣದಲ್ಲಿನ ಆದ್ರತೆ ತಗ್ಗಲಾರಂಭಿಸಿದೆ. ಅಕ್ಟೋಬರ್ ಕೊನೆಯ ವಾರದವರೆವಿಗೂ ಆದ್ರತೆ 80 ರಿಂದ 90ರವರೆಗೆ ಇರುತ್ತಿತ್ತು. ಆದೀಗ ಶೇ.50ರಿಂದ 60ಕ್ಕೆ ಇಳಿದಿದೆ. ಹೀಗಾಗಿ ವಾತಾವರಣದಲ್ಲಿ ಚಳಿ ಕಾಣಿಸಿಕೊಳ್ಳುತ್ತಿದೆ ಎನ್ನುತ್ತಾರೆ ಹವಾಮಾನ ತಜ್ಞರು.

ರಾತ್ರಿಯಾಗುತ್ತಿದ್ದಂತೆ ಶುರುವಾಗುವ ಚಳಿ ಬೆಳಗ್ಗೆ 8ರವರೆಗೂ ಮುಂದುವರಿದಿದೆ. ಇನ್ನು ಮಧ್ಯಾಹ್ನದ ವೇಳೆ ಬಿಸಿಲು ಸಹ ಜೋರಾಗಿರುತ್ತದೆ. ಆದರೆ, ಆದ್ರತೆ ಕಡಿಮೆ ಇರುವ ಕಾರಣಕ್ಕೆ ಹೆಚ್ಚಿನ ಸೆಕೆ ಕಾಣಿಸಿಕೊಳ್ಳುತ್ತಿಲ್ಲ. ಹಾಗಾಗಿ ವಾಡಿಕೆಗಿಂತ ಮುಂಚಿತವಾಗಿಯೇ ಚಳಿಗಾಲ ಪ್ರವೇಶ ಪಡೆದಿದೆ ಎಂಬುದು ಅವರ ಮಾಹಿತಿ.

ಇಂಥ ಚಳಿಯ ವಾತಾವರಣಕ್ಕೆ ಮೈವೊಡ್ಡುವುದರಿಂದ ಆರೋಗ್ಯದಲ್ಲಿ ಸಾಕಷ್ಟು ವ್ಯತ್ಯಾಸ ಕಾಣಿಸಿಕೊಳ್ಳಬಹುದು. ಶೀತ, ಕೆಮ್ಮುಶುರುವಾಗಬಹುದು. ಇನ್ನು ಹೆಚ್ಚಿನ ಬಾಯಾರಿಕೆ ಆಗದೇ ದೇಹಕ್ಕೆ ನೀರು ಸೇರದೇ ನಿರ್ಜಲೀಕರಣವಾಗಬಹುದು
ಹಾಗಾಗಿ ಚಳಿಯಲ್ಲಿ ದೇಹವನ್ನು ಬೆಚ್ಚಗಿಡಬೇಕು. ಬಾಯಾರಿಕೆ ಆಗದಿದ್ದರೂ ಕಾಲ ಕಾಲಕ್ಕೆ ನೀರು ಸೇವಿಸುತ್ತಿರಬೇಕು ಎಂಬುದು ವೈದ್ಯ ಡಾ.ಬಸವಲಿಂಗಯ್ಯ ಹಿರೇಮಠ ಜಾಲಿಬೆಂಚಿಯವರ ಸಲಹೆ ನೀಡುತ್ತಾರೆ.

ಸ್ವೆಟರ್ ಅಂಗಡಿಗಳತ್ತ ಮುಖ

ವಿಪರೀತವಾಗಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಗಡಗಡ ಚಳಿಯಿಂದ ಸುರಕ್ಷಿತವಾಗಿರಲೆಂದು ನಿತ್ಯ ಬೆಳಗಿನ ಜಾವ ಕೆಲಸಕ್ಕೆ ತೆರಳುವ ಜನ ಅಂಗಡಿಗಳಲ್ಲಿ ತಂದಿರಿಸಿದ ನೂತನ ಸ್ವೆಟರ್, ಜಾಕಿಟ್, ಹ್ಯಾಂಡ್ ಗ್ಲೌಸ್ ಹಾಗೂ ಮಂಕಿ ಕ್ಯಾಪಗಳನ್ನು ಖರೀದಿಸಲು ಅಂಗಡಿಗಳಿಗೆ ತೆರಳುತ್ತಿದ್ದು, ಅಂಗಡಿಕಾರರು ಭರ್ಜರಿ ವ್ಯಾಪಾರ ನಡೆಸುತ್ತಿದ್ದಾರೆ.

ಕಾಫಿ ಶಾಪ್‌ಗಳಿಗೆ ಭರ್ಜರಿ ವ್ಯಾಪಾರ

ಕೊರೆಯುವ ಚಳಿಯಿಂದ ಬಚಾವ್ ಆಗಲು ಬೆಳಗ್ಗೆ ವಿಹಾರಕ್ಕೆಂದು ತೆರಳಿದ ಜನರು ನಗರಲ್ಲಿರುವ ಕಾಫಿ ಶಾಪ್‌ಗಳತ್ತ ಮುಖ ಮಾಡಿ ಬೆಚ್ಚನೆಯ ಕಾಫಿ ಹಾಗೂ ಟೀ ಸೇವಿಸಿ ದೇಹ ಬೆಚ್ಚಗೆ ಮಾಡಿಕೊಳ್ಳುತ್ತಿದ್ದಾರೆ. ಹೋಟೆಲ್ ಅಂಗಡಿ ಮಾಲೀಕರಿಗೆ ಇದು ಒಂದು ರೀತಿ ಒಳ್ಳೆಯ ಸೀಜ್‌ನ ಆಗಿ ಗಲ್ಲಾ ಪೆಟ್ಟಿಗೆ ತುಂಬಿಕೊಳ್ಳಲು ಚಳಿರಾಯ ನೆರವಾಗಿದ್ದು , ನಗರದ ಇತರರಿಗೆ ಮಾತ್ರ ಚಳಿರಾಯನಿಂದ ನಿತ್ಯ ಸಂಕಟವಾಗಿ ಪರಿಣಮಿಸಿದೆ ಎಂದು ಸಾರ್ವಜನಿಕರು ನಿತ್ಯ ಹೇಳುವ ಮಾತಾಗಿದೆ.

ಹಿಂದಿನ ಬಾರಿ ಈ ರೀತಿ ಚಳಿ ಇರಲಿಲ್ಲ.

ಆದರೆ ಈಗಿರುವ ಚಳಿಯಲ್ಲಿ ಮುಂಜಾನೆ ಏಳಲು ನಮಗೆ ಸಾಧ್ಯವಾಗುತ್ತಿಲ್ಲ. ತಂಪು ನೀರು ನೋಡಿದರೆ ಸಾಕು ಮೈಯಲ್ಲಾ ಜುಮ್ ಎನ್ನುವ ರೀತಿ ಭಾಸವಾಗುತ್ತಿದೆ.ಈ ಚಳಿಯಿಂದ ಸುರಕ್ಷತವಾಗಿರಲು ನಾವು ಬೆಚ್ಚನೆಯ ಸ್ವೆಟರ್‌ಗಳ ಬಳಕೆ ಮಾಡುತ್ತಿದ್ದೇವೆ ಎಂದು ಸುರಪುರ ನಗರ ನಿವಾಸಿ ರಾಹುಲ್ ಹುಲಿಮನಿ ಹೇಳಿದ್ದಾರೆ.

ಈ ಬಾರಿ ವಿಪರಿತ ಚಳಿ ಇರುವುದರಿಂದ ಜಮೀನನಲ್ಲಿ ಬೆಳೆದ ಭತ್ತವನ್ನು ಕಟಾವ್ ಮಾಡಲು ಒಂದು ರೀತಿ ಪರಿಶ್ರಮವಾದರೆ ಇನ್ನೊಂದೆಡೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಚಳಿಯಿಂದ ಕಟಾವ್ ಮಾಡಲು ಸಾಧ್ಯವಾಗುತ್ತಿಲ್ಲ. ಮುಖ್ಯವಾಗಿ ಬೆಳಗಿನ ಜಾವದಲ್ಲಿ ಯಂತ್ರವು ಕಟ್ಟಾವ ಮಾಡಲು ಮಂಜು ಬಿದ್ದು ಕಟಾವ್ ಮಾಡಲು ತೊಂದರೆಯಾಗುತ್ತಿದೆ ಎಂದು ಬೋನ್ಹಾಳ ರೈತ ಈಶ್ವರಗೌಡ ಮಾಲಿ ಪಾಟೀಲ್ ಅಭಿಪ್ರಾಯವಾಗಿದೆ.

Leave a Reply

Your email address will not be published. Required fields are marked *

error: Content is protected !!