ಸುರಪುರ ಬಸ್ ನಿಲ್ದಾಣದಲ್ಲಿ ಟಿಕೆಟ್ ಬುಕ್ಕಿಂಗ್ ಕೌಂಟರ್ ತೆರೆಯಲು ಕರವೇ ಒತ್ತಾಯ
ಸುರಪುರ ಟೈಮ್ಸ್ ವಾರ್ತೆ
ಸುರಪುರ : ಇಲ್ಲಿಯ ಬಸ್ ನಿಲ್ದಾಣದಲ್ಲಿ ಮುಂಗಡ ಟಿಕೆಟ್ ಬುಕ್ಕಿಂಗ್ ಕೌಂಟರ್ ತೆರೆಯುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಮುಖಂಡರು ಸುರಪುರ ಬಸ್ ಘಟಕ ವ್ಯವಸ್ಥಾಪಕರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ನಂತರ ಕರವೇ ತಾಲೂಕು ಘಟಕದ ಅಧ್ಯಕ್ಷ ವೆಂಕಟೇಶ ನಾಯಕ ಬೈರಿಮಡ್ಡಿ ಮಾತನಾಡಿ, ಯಾದಗಿರಿ ಜಿಲ್ಲೆಯಲ್ಲಿ ಸುರಪುರ ಅತ್ಯಂತ ದೊಡ್ಡ ತಾಲೂಕು ಕೇಂದ್ರವಾಗಿದೆ. ದೂರದ ಊರುಗಳಿಗೆ ನಿತ್ಯವು ನೂರಾರು ಸಂಖ್ಯೆಯಲ್ಲಿ ಜನರು ಪ್ರಯಾಣಿಸುತ್ತಾರೆ. ಆದರೆ ಸುರಪುರ ಬಸ್ ನಿಲ್ದಾಣದಲ್ಲಿ ಮುಂಗಡ ಟಿಕೆಟ್ ಬುಕ್ಕಿಂಗ್ ಕೌಂಟರ್ ಇಲ್ಲದ ಕಾರಣ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.
ದೂರದ ಊರುಗಳಿಗೆ ಹೋಗುವ ಪ್ರಯಾಣಿಕರು ಶಹಾಪುರಕ್ಕೆ ಹೋಗಿ ಮುಂಗಡ ಟಿಕೆಟ್ ಬುಕಿಂಗ್ ಮಾಡುತ್ತಿದ್ದಾರೆ. ಇದು ಪ್ರಯಾಣಿಕರ ಮೇಲೆ ಹೆಚ್ಚಿನ ಹೊರೆಯಾಗುತ್ತಿದೆ. ಆದ್ದರಿಂದ ಕೂಡಲೆ ಸುರಪುರ ಬಸ್ ನಿಲ್ದಾಣದಲ್ಲಿ ಮುಂಗಡ ಟಿಕೆಟ್ ಬುಕಿಂಗ್ ಕೌಂಟರ್ ಪ್ರಾರಂಭಿಸಬೇಕು ಎಂದು ಹೇಳಿದರು. ಇದು ಅತೀ ಜರೂರು ಎಂದು ಪರಿಗಣಿಸಿ ಕೌಂಟರ್ ಶುರು ಮಾಡಬೇಕು. ನಿರ್ಲಕ್ಷ್ಯ ವಹಿಸಿದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕಲ್ಯಾಣ ಕರ್ನಾಟಕ ಸಾರಿಗೆ ಇಲಾಖೆಯ ವಿಭಾಗೀಯ ನಿಯಂತ್ರಣಾಧಿಕಾರಿ ಅವರಿಗೆ ಬರೆದ ಮನವಿ ಪತ್ರವನ್ನು ಸುರಪುರ ಬಸ್ ಘಟಕ ವ್ಯವಸ್ಥಾಪಕರ ಮೂಲಕ ಸಲ್ಲಿಸಿದರು. ವೇದಿಕೆ ಮುಖಂಡರಾದ ನಾಗೇಂದ್ರ ದೊರೆ, ಮಲ್ಲು ವಿಷ್ಣು ಸೇನಾ, ಹಣಮಗೌಡ ಶಖಾಪುರ, ನಿಂಗಣ್ಣ ಮಾಲಗತ್ತಿ, ಪ್ರಭು ಮಂಗ್ಯಾಳ, ಶ್ರೀರಾಮಲು ಬೇವಿನಳ್ಳಿ, ವೆಂಕಟೇಶ ಕುರಿ, ಮೌನೇಶ ಬಡಿಗೇರ, ಹಣಮಂತ ಹಾಲಗೇರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.


