ಕೆಟ್ಟು ಮಾತುಗಳು ಕೆಟ್ಟು ಫಲ; ಒಳ್ಳೆಯ ಮಾತುಗಳಿಂದ ಒಳ್ಳೆಯ ಫಲ ನೀಡುತ್ತವೆ ;ಶಾಸಕ ಆರ್ ವಿ ಎನ್

ಸುರಪುರ ಟೈಮ್ಸ್ ವಾರ್ತೆ

ಸುರಪುರ : ನಾವು ಆಡುವ ಪ್ರತಿಯೊಂದು ಮಾತು ಹಿತವಾಗಿ, ಮಿತವಾಗಿ ಇನ್ನೊಬ್ಬರಿಗೆ ನೋವಾಗದಂತಿರಬೇಕು. ಮಧುರವಾಗಿ, ಸತ್ಯದಿಂದ ಕೂಡಿರಬೇಕು.ಕೆಟ್ಟು ಮಾತುಗಳು ಕೆಟ್ಟು ಫಲ ಒಳ್ಳೆಯ ಮಾತುಗಳಿಂದ ಒಳ್ಳೆಯ ಫಲ ನೀಡುತ್ತವೆ ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ಹೇಳಿದರು.
ನಗರದ ನಿಷ್ಠಿ ಕಡ್ಲಪ್ಪನವರ ವಿರಕ್ತ ಮಠದಲ್ಲಿ ಹಮ್ಮಿಕೊಂಡಿದ್ದ ಧರ್ಮಸಭೆ ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯನ ಜೀವನದಲ್ಲಿ ಮಾತಿಗೆ ಬಹಳ ಮಹತ್ವವಿದೆ ಹೀಗಾಗಿ ಜೀವನದಲ್ಲಿ ಒಳ್ಳೆಯ ಮಾತುಗಳನ್ನೇ ಆಡಬೇಕು. ಮಠದ ಪೂಜ್ಯರು ತಿಳಿಸಿದರೆ ಈ ಮಠದ ಜೀಣೋದ್ಧಾರಕ್ಕೆ ಸರಕಾರದ ಅನುದಾನ ಒದಗಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.
ಕೆವೈಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಡಾ.ಸುರೇಶ್ ಸಜ್ಜನ್ ಮಾತನಾಡಿ, ಕಡ್ಲಪ್ಪ ಮಠದ ಪೂಜ್ಯರು ಪ್ರತಿ ವರ್ಷವೂ ಕಾರ್ಯಕ್ರಮದ ಮೂಲಕ ಶರಣರ ವಿಚಾರಧಾರೆಗಳನ್ನು ತಿಳಿಸುತ್ತಿರುವುದು ಸಣ್ಣ ಕೆಲಸವಲ್ಲ. ನಾವು ಶರಣರ ಚಿಂತನೆ ಮತ್ತು ವಚನಗಳನ್ನು ಎಷ್ಟೇ ತಿಳಿದರು ಸಹ ಕಡಿಮೆಯೇ ಸರಿ. ಮಠದ ಶ್ರೀಗಳು ಬಸವಾದಿ ಶಿವಶರಣರ ಅನೇಕ ವಚನ ಮತ್ತು ಸಂದೇಶಗಳನ್ನು ನಮ್ಮಗಳ ಮನದಲ್ಲಿ ಬಿತ್ತುವ ಮೂಲಕ ಜೀವನದಲ್ಲಿ ಹೊಸ ಚೈತನ್ಯ ತರುವ ಕೆಲಸ ಮಾಡುತ್ತಿದ್ದಾರೆ ಎಂದರು.
ಮೊಬೈಲ್ ಗೀಳು ಮಗುವಿನ ಮಾನಸಿಕ ಹಾಗೂ ಬೌದ್ಧಿಕ ಬೆಳವಣಿಗೆಗೆ ಅಪಾಯಕಾರಿ. ಕಾರಣ ಮೊಬೈಲ್ ಬಳಿಕೆ ಹಿತ ಮಿತವಾಗಿರಲಿ. ತಂದೆ-ತಾಯಂದಿರು ಮಕ್ಕಳಿಗೆ ಶರಣರ ವಚನಗಳ ಸಾರಾಂಶ ತಿಳಿಸಿ, ಜೀವನದಲ್ಲಿ ಸಂಸ್ಕಾರ, ಸಂಸ್ಕೃತಿ ಕಲಿಸಬೇಕು, ನಮ್ಮ ಧರ್ಮದ ಬಗ್ಗೆ ಮತ್ತು ಶರಣರ ವಿಚಾರಗಳನ್ನು ತಿಳಿಸಿ ಹೇಳಿದರೆ ಮಕ್ಕಳು ಸನ್ಮಾರ್ಗದಲ್ಲಿ ಸಾಗಿ ಒಳ್ಳೆಯ ಪ್ರಜೆಗಳಾಗುತ್ತಾರೆ ಎಂದರು.
ಬಲಶೆಟ್ಟಿಹಾಳದ ಸಿದ್ದಲಿಂಗಯ್ಯ ಶಾಸ್ತ್ರೀ ಅವರು ಪ್ರಾಸ್ತಾವಿಕ ಮಾತನಾಡಿ, ಶ್ರೀ ಮಠವು ಸುಮಾರು ವರ್ಷಗಳಿಂದ ಅನ್ನ, ಜ್ಞಾನ ದಾಸೋಹ ಹಾಗೂ ಶರಣರ ವಿಚಾರಗಳನ್ನು ಉಣ ಬಡಿಸುತ್ತಿದೆ. ಶರಣರು ನಮ್ಮ ನಿಮ್ಮ ರೀತಿಯಲ್ಲಿ ಬದುಕಿ, ತಮ್ಮ ಕಾಯಕದೊಳಗೆ ಶುದ್ಧತೆ, ಸಮಾಜಕ್ಕೆ ಒಳಿತು ಬಯಸಿ ಶರಣರಾದರು. ಕಾಯಕ ಶುದ್ಧವಾಗಿ, ಶರಣರ ವಿಚಾರಗಳನ್ನು ಆಲಿಸಿ, ಪಾಲಿಸಿ, ಪರೋಪಕಾರಿಯಾಗಿ, ಧರ್ಮದ ಮಾರ್ಗದಲ್ಲಿ ಸಾಗಿದರೆ ಮನುಷ್ಯನ ಜೀವನ ಸಾರ್ಥಕವಾಗುತ್ತದೆ. ಜೀವನದಲ್ಲಿ ಗುರು ಮಾತ್ರ ನಮ್ಮನ್ನು ಕೈಹಿಡಿದು ಎತ್ತುವವ. ತಾಯಿಯ ಪ್ರೀತಿಯನ್ನು ಸಹ ಗುರುವಿನಲ್ಲಿ ಕಾಣುತ್ತೇವೆ. ಗುರುವಿನ ಮಾರ್ಗದರ್ಶನದಿಂದ ಜೀವನ ಸಾಫಲ್ಯ ಎಂದರು.
ಗಜೇಂದ್ರಗಡ ಕಾಲಜ್ಞಾನ ಮಠದ ಡಾ.ಶರಣಬಸವೇಶ್ವರ ಸ್ವಾಮೀಜಿ ಉಪದೇಶಾಮೃತ ನೀಡಿದರು. ಮಠದ ಪೂಜ್ಯರಾದ ಪ್ರಭುಲಿಂಗ ಸಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ದೊಡ್ಡ ಬಸಯ್ಯಶಾಸ್ತ್ರೀ ಅವರು ಶರಣ ಚರಿತ್ರಾಮೃತದ ಮಹಾ ಮಂಗಲ ನುಡಿಗೈದರು. ನಿವೃತ್ತ ಪ್ರಾಂಶುಪಾಲ ಬಸವರಾಜ ನಿಷ್ಠಿ ದೇಶಮುಖ ವೇದಿಕೆಯಲ್ಲಿದ್ದರು. ಕಸಾಪ ಅಧ್ಯಕ್ಷ ಶರಣಬಸವ ಯಾಳವಾರ ಸ್ವಾಗತಿಸಿದರು. ರಾಜಶೇಖರ ದೇಸಾಯಿ ನಿರೂಪಿಸಿದರು. ಹೆಚ್.ರಾಠೋಡ್ ವಂದಿಸಿದರು.

ಕಾಲಜ್ಞಾನ ಹೇಳಿಕೆ
ಈ ಸಂವತ್ಸರದಲ್ಲಿ ಮಳೆ ಸಾಧಾರಣ, ಬೆಳೆಗಳು ಮಧ್ಯಮ, ವರ್ತಕರಿಗೆ ಸಾಧಾರಣ ಲಾಭ. ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಬರಗಾಲ ಕಾಣಿಸುತ್ತದೆ. ದವಸ, ಧಾನ್ಯಗಳು ತುಟ್ಟಿಯಾಗುತ್ತವೆ. ದೇಶದ ಮುಖಂಡರಲ್ಲಿ, ಪಕ್ಷ ಪಂಗಡಗಳಲ್ಲಿ ಹಾಗೂ ಜನರೊಳಗೆ ಪರಸ್ಪರ ಕಲಹ. ಕೇಂದ್ರದಲ್ಲಿ ಆಡಳಿತ ಸುಸ್ಥಿರ. ದೇಶದ ಆರ್ಥಿಕ ವ್ಯವಸ್ಥೆ ಉತ್ತಮವಾಗಿರುತ್ತದೆ ಎಂದು ಹೀಗೆ ದೇಶ, ರಾಜ್ಯದ ಮಳೆ, ಬೆಳೆ, ರಾಜಕೀಯ, ನೈಸರ್ಗಿಕ ವಿಕೋಪ, ಶಿಕ್ಷಣ, ಹಣಕಾಸು ಸ್ಥಿತಿಗಳ ಕುರಿತು ಮತ್ತು ಜಗತ್ತಿನ ವಿವಿದ ದೇಶಗಳ ಪರಿಸ್ಥಿತಿಗಳ ಬಗ್ಗೆ ಗಜೇಂದ್ರಗಡ ಕಾಲಜ್ಞಾನ ಮಠದ ಡಾ.ಶರಣಬಸವೇಶ್ವರ ಸ್ವಾಮೀಜಿ ತಮ್ಮ ಉಪದೇಶಾಮೃತದಲ್ಲಿ ಕಾಲಜ್ಞಾನ ಹೇಳಿಕೆ ನೀಡಿದರು.

Leave a Reply

Your email address will not be published. Required fields are marked *

error: Content is protected !!