ಬೆಳೆ ಹಾನಿ ವರದಿ ಸರಕಾರಕ್ಕೆ ಸಲ್ಲಿಕೆಯಾದರೂ ಹಣ ಬಿಡುಗಡೆಗೆ ಮೀನಮೇಷ | ಸಿಟ್ಟು ಹೊರಹಾಕಿದ ರೈತರು ಒಂದೂವರೆ ತಿಂಗಳಾದರೂ ಕೈ ಸೇರದ ಪರಿಹಾರ
ಸುರಪುರ ಟೈಮ್ಸ್ ವಾರ್ತೆ
ಸುರಪುರ:ಮಹಾ ಮಳೆಯಿಂದಾಗಿ ಹಾನಿಗೀಡಾದ ಬೆಳೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೈಮಾನಿಕ ಸಮೀಕ್ಷೆ ನಡೆಸಿ ಹೋಗಿ ಒಂದೂವರೆ ತಿಂಗಳು ಕಳೆದರೂ ಬೆಳೆ ಪರಿಹಾರ ಮೊತ್ತ ಇನ್ನೂ ರೈತರ ಖಾತೆಗೆ ಜಮೆಯಾಗಿಲ್ಲ, ಎನ್‌ಡಿಆರ್‌ಎಫ್ ಪರಿಹಾರದ ಜತೆಗೆ ರಾಜ್ಯ ಸರಕಾರದಿಂದಲೂ ಹೆಚ್ಚುವರಿಯಾಗಿ ಹೆಕ್ಟೇರ್‌ಗೆ 8,500 ರೂ. ಪರಿಹಾರ ನೀಡುವುದಾಗಿ ಘೋಷಿಸಿದ್ದ ಸಿಎಂ ಭರವಸೆ ಹುಸಿಯಾಗಿದೆ. ಪರಿಹಾರಕ್ಕಾಗಿ ಸುರಪುರ ಮತ್ತು ಹುಣಸಗಿ ತಾಲೂಕಿನ ರೈತರು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
ಹೌದು, ತಾಲೂಕಿನಲ್ಲಿ 2025-26 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿಯಿಂದ (ವಿಪರೀತ ಮಳೆ) ಬೆಳೆ ಹಾನಿಯಾಗಿ ಆರ್ಥಿಕ ಸಂಕಷ್ಟ ಅನುಭವಿಸಿರುವ ರೈತರು ಬೆಳೆ ಪರಿಹಾರಕ್ಕಾಗಿ ಎದುರು ನೋಡುತ್ತಿದ್ದಾರೆ.
ಈ ಬಾರಿ ಮುಂಗಾರು ಹಂಗಾಮಿನಲ್ಲಿ ಹವಾಮಾನದ ವೈಪರೀತ್ಯದಿಂದಾಗಿ ಮಳೆ ಹಾಗೂ ಪ್ರವಾಹದಿಂದ ಹತ್ತಿ, ತೊಗರಿ, ಉಳ್ಳಾಗಡ್ಡಿ, ಮೆಕ್ಕೆಜೋಳ ತೋಟಗಾರಿಕೆ ಬೆಳೆಗಳು ಸೇರಿದಂತೆ ನಾನಾ ಬೆಳೆಗಳು ಹಾನಿಗೀಡಾಗಿವೆ. ತಾಲೂಕಿನಲ್ಲಿ ಅಧಿಕ ಪ್ರಮಾಣದ ಹೆಕ್ಟೇರ್ ನಲ್ಲಿ ಬೆಳೆ ಹಾನಿಯಾಗಿದೆ ಎಂದು ಅಧಿಕಾರಿಗಳ ಜಂಟಿ ಸಮೀಕ್ಷೆ ವರದಿಯಲ್ಲಿ ದಾಖಲಾಗಿದೆ. ಒಂದಿಷ್ಟು ತೋಟಗಾರಿಕೆ ಬೆಳೆಗಳು ಕೂಡ ಹಾನಿಗೊಳಗಾಗಿವೆ
ಕೃಷಿಕರ ಬದುಕು ಹಳಿ ಹಾನಿಯ ವರದಿಯೂ ಜಿಲ್ಲಾಡಳಿತದಿಂದ ರಾಜ್ಯ ಬಲು ದುಸ್ತರ ಕರಕಾರಕ್ಕೆ ಸಲ್ಲಿಕೆಯಾಗಿದ್ದರೂ ಪರಿಹಾರ ಮಾತ್ರ
ಇನ್ನೂ ರೈತರ ಕೈಗೆ ಸೇರಿಲ್ಲ. ಕೂಲಿ ಕಾರ್ಮಿಕರ ಸಮಸ್ಯೆ, ದುಬಾರಿ ಕೂಲಿ ಹಾಗೂ ಬೀಜ ಗೊಬ್ಬರದ ಬೆಲೆಗಳ ಏರಿಕೆ ಸೇರಿ ಹಲವು ಸಂಕಷ್ಟಗಳ ನಡುವೆ ಕೃಷಿ ಮಾಡುತ್ತಿರುವ ರೈತರಿಗೆ ಆಳುವ ಸರಕಾರಗಳಿಂದ ಸೂಕ್ತ ಪರಿಹಾರ ದೊರೆಯುತ್ತಿಲ್ಲ. ಪರಿಣಾಮವಾಗಿ ರೈತರ ಬದುಕು ದುಸ್ತರವಾಗಿದೆ. ಏತನ್ಮಧ್ಯೆ, ಬೆಳೆ ಹಾನಿ ಪರಿಹಾರ ಬಿಡುಗಡೆಗೆ ಆಗ್ರಹಿಸಿ ರೈತ ಸಂಘಟನೆಗಳು ಸಾಕಷ್ಟು ಹೋರಾಟ ನಡೆಸಿ, ಮನವಿ ಕೂಡ ಸಲ್ಲಿಸಿವೆ. ಆದರೂ ಸರಕಾರ ಮಾತ್ರ ಪರಿಹಾರದ ಹಣ ಬಿಡುಗಡೆ ಮೀನಮೇಷ ಎನಿಸುತ್ತಿದೆ.
ಪ್ರಗತಿ ಪರ ರೈತ ನಂದರಡ್ಡಿ ಬೋನ್ಹಾಳ ಮಾತನಾಡಿ ಈ ವರ್ಷ ಒಂದು ಬೆಳೆಯೂ ಕೈಹಿಡಿದಿಲ್ಲ. ಹೀಗಾಗಿ ರೈತರು ಸಂಕಷ್ಟದಲ್ಲಿದ್ದಾರೆ. ರಾಜ್ಯ ಸರಕಾರ ಘೋಷಣೆ ಮಾಡಿದಂತೆ ಎಲ್ಲ ರೈತರಿಗೂ ತ್ವರಿತವಾಗಿ ಪರಿಹಾರ ಹಣ ಬಿಡುಗಡೆ ಮಾಡಬೇಕು. ಸಕಾಲದಲ್ಲಿ ಪರಿಹಾರ ದೊರೆಯದಿದ್ದರೆ ಪ್ರಯೋಜನವೇನು? ಎಂದು ದೂರಿದ್ದರು






