ರಾಷ್ಟೀಯ ಪಲ್ಸ್ ಪೋಲಿಯೊ ಗುರಿ ತಲುಪಲು ಕ್ರಮವಹಿಸಿ;ಎಚ್.ಎ.ಸರಕಾವಸ್
ಸುರಪುರ ಟೈಮ್ಸ್ ವಾರ್ತೆ
ಸುರಪುರ : ಕ್ಷೇತ್ರದಲ್ಲಿ ರಾಷ್ಟೀಯ ಪಲ್ಸ್ ಪೋಲಿಯೊ ಕಾರ್ಯಕ್ರಮವನ್ನು ಡಿ.21 ರಿಂದ 24 ರವರೆಗೆ ಹಮ್ಮಿಕೊಂಡಿದ್ದು ಪೋಲಿಯೋ ಗುರಿ ತಲುಪಲು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಕ್ರಮವಹಿಸಬೇಕು ಎಂದು ತಹಸೀಲ್ದಾರ್ ಎಚ್.ಎ.ಸರಕಾವಸ್ ಸೂಚನೆ ನೀಡಿದರು.
ಇಲ್ಲಿಯ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪಲ್ಸ್ ಪೋಲಿಯೊ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆರೋಗ್ಯ ಇಲಾಖೆ ವತಿಯಿಂದ 5 ವರ್ಷದೊಳಗಿನ ಗ್ರಾಮೀಣ ಮತ್ತು ನಗರ ಪ್ರದೇಶದ ಎಲ್ಲ ಮಕ್ಕಳಿಗೆ ಪೋಲಿಯೋ ಲಸಿಕಾ ಕಾರ್ಯಕ್ರಮ ಏರ್ಪಡಿಸಲಾಗಿದ್ದು ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸೂಕ್ತವಾದ ವ್ಯವಸ್ಥೆ ಮಾಡಿಕೊಂಡು ಸಹಕರಿಸಬೇಕು ಎಂದು ಹೇಳಿದರು.
ಪಲ್ಸ್ ಪೋಲಿಯೊ ಲಸಿಕಾ ಕಾರ್ಯಕ್ರಮದ ಕುರಿತು ಅರಿವು ಮೂಡಿಸಲು ಎಲ್ಲಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಡಂಗೂರ ಹಾಕಿಸಬೇಕು. ನಗರ ಪ್ರದೇಶದಲ್ಲಿ ನಗರಸಭೆಯವರು ಆಟೋ ರಿಕ್ಷಾದಲ್ಲಿ ಮೈಕಿಂಗ್ ಮಾಡಿಸಬೇಕು. ಶಿಕ್ಷಣ ಇಲಾಖೆಯವರು ಎಲ್ಲ ಶಾಲೆಗಳಲ್ಲಿ ಮಕ್ಕಳಿಂದ ಪ್ರಭಾತ್ ಪೇರಿ ಮಾಡಿಸಲು ಶಿಕ್ಷಕರಿಗೆ ಹೇಳಬೇಕು. ಜೆಸ್ಕಾಂನವರು 4 ದಿನಗಳವರೆಗೆ ತಡೆ ರಹಿತ ದಿನದ 24 ಗಂಟೆಗೆ ಕಾಲ ವಿದ್ಯುತ್ ಸರಬರಾಜು ಮಾಡಬೇಕು.
ಅಂಗನವಾಡಿ ಕೇಂದ್ರಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರು ಲಸಿಕಾ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ ಅಂದಿನ ದಿನ ಮನೆ ಮನೆಗೆ ತೆರಳಿ ೦-5 ವರ್ಷದೊಳಗಿನ ಮಕ್ಕಳನ್ನು ಪ್ರೋತ್ಸಾಹಿಸಿ ಬೂತಿಗೆ ಕರೆತಂದು ಪೋಲಿಯೊ ಲಸಿಕೆ ಹಾಕಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.
ತಾಲೂಕು ಆರೊಗ್ಯಾಧಿಕಾರಿ ಡಾ.ಆರ್.ವಿ.ನಾಯಕ ಮಾತನಾಡಿ, ಕ್ಷೇತ್ರದಲ್ಲಿ ೦-5 ವರ್ಷದ ಮಕ್ಕಳ ನಗರ ಪ್ರದೇಶದಲ್ಲಿ 7035, ಗ್ರಾಮೀಣ ಪ್ರದೇಶದಲ್ಲಿ 50,766ಸೇರಿ 57, 801 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಇದಕ್ಕಾಗಿ 248 ತಂಡಗಳು ಕಾರ್ಯ ನಿರ್ವಸಲಿವೆ. 496ಜನರು ವ್ಯಾಕ್ಸಿನೆಟರ್, 47 ಜನರು ಮೇಲ್ವಿಚಾರಕರಿರುತ್ತಾರೆ. 11 ಟ್ರಾಂಜಿಟ್ ಪಾಯಿಂಟ್ ಇರುತ್ತದೆ. ಲಸಿಕಾಕರಣದ ಯಶಸ್ವಿಗೆ ಎಲ್ಲರು ಸಹಕರಿಸಬೇಕು ಎಂದು ಹೇಳಿದರು.
ತಾಲೂಕು ಪಂಚಾಯತ್ ಇಒ ಬಸವರಾಜ ಸಜ್ಜನ್, ಜೆಸ್ಕಾಂ ಎಇಇ ಮೊಹ್ಮದ್ ರಫೀಕ್, ಶಿಕ್ಷಣ ಇಲಾಖೆಯ ಇಸಿಒ ಶರಣಬಸವ ಗಚ್ಚಿನಮನಿ, ನಗರಸಭೆಯ ಆರೋಗ್ಯ ನಿರೀಕ್ಷಕ ಗುರುಸ್ವಾಮಿ, ಸಿಡಿಪಿಒ ಇಲಾಖೆಯ ಪವನಕುಮಾರ, ಕೆಕೆಆರ್‌ಟಿಸಿಯ ಜಾಕೀರ್ ಹುಸೇನ್ ಸೇರಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಇದ್ದರು.
ಲಸಿಕೆಯಿಂದ ಹೊರಗುಳಿಬಾರದು
ಕ್ಷೇತ್ರದಲ್ಲಿ ಯಾವುದೇ ಮಗು ಲಸಿಕೆಯಿಂದ ಹೊರಗುಳಿಬಾರದು. ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಹೊಲಗಳಲ್ಲಿ ವಾಸಿಸುತ್ತಿರುವ ಮಕ್ಕಳು, ಕೂಲಿ ಕೆಲಸಕ್ಕೆ ತೆರಳುವ ಕಾರ್ಮಿಕರ ಮಕ್ಕಳಿಗೂ ಗಮನಹರಿಸಿ ಪೋಲಿಯೋ ಲಸಿಕೆ ನೀಡಬೇಕು ಎಂದು ತಹಸೀಲ್ದಾರ್
ಎಚ್.ಎ.ಸರಕಾವಸ್ ಹೇಳಿದರು.
ಪೋಲಿಯೊ ಹನಿ ಹಾಕಿಸಿ
ಪೋಲಿಯೊದಿಂದ ವಿಕಲಾಂಗತೆ ಸೇರಿ ಇತರೆ ಗಂಭೀರ ಕಾಯಿಲೆಗಳನ್ನು ತಡೆಗಟ್ಟಬಹುದು. ಹೀಗಾಗಿ ಐದು ವರ್ಷ ತುಂಬಿರುವ ಪ್ರತಿಯೊಂದು ಮಗುವಿಗೂ ಕಡ್ಡಾಯವಾಗಿ ಪೋಲಿಯೊ ಹನಿ ಹಾಕಿಸುವ ಮೂಲಕ ಪೋಲಿಯೊ ತಡೆಗೆ ಪೋಷಕರು ಸಹಕರಿಸಬೇಕು. ವಿಶ್ವ ಆರೋಗ್ಯ ಸಂಸ್ಥೆಯು ಭಾರತವನ್ನು ಪೋಲಿಯೊ ರಹಿತ ದೇಶವೆಂದು ಹಲವು ವರ್ಷಗಳಿಂದೆಯೇ ಘೋಷಿಸಿದೆ. ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಇದೊಂದು ಬೃಹತ್ ಮೈಲುಗಲ್ಲು. ಅಕ್ಕಪಕ್ಕದ ದೇಶಗಳಲ್ಲಿ ಪೋಲಿಯೊ ಪ್ರಕರಣಗಳು ಇರುವ ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ನಮ್ಮ ದೇಶದಲ್ಲಿಯೂ ಲಸಿಕಾರಣ ಮುಂದುವರೆಸಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಆರ್.ವಿ.ನಾಯಕ ವಿವರಿಸಿದರು.




