ಭಾರತೀಯ ಸೇನೆಗೆ ಯುವಕ ಆಯ್ಕೆ: ಗ್ರಾಮಸ್ಥರಿಂದ ಅದ್ದೂರಿ ಮೆರವಣಿಗೆ.ಮನೆಗಿದ್ದ ಒಬ್ಬ ಮಗನನ್ನು ಭಾರತಾಂಬೆ ಸೇವೆಗೆ ಕಳುಹಿಸಿದ ಹೆತ್ತ ತಾಯಿ…

ಸುರಪುರ ಟೈಮ್ಸ್ ವಾರ್ತೆ

ಹುಣಸಗಿ : ತಾಲೂಕಿನ ಮಂಜಲಾಪುರಹಳ್ಳಿ ಗ್ರಾಮದ ಯುವಕ ದೇವಪ್ಪ ಅಬ್ಲಿ ಭಾರತೀಯ ಸೇನೆಗೆ ಆಯ್ಕೆಯಾಗಿ ಯುವ ಸಮುದಾಯಕ್ಕೆ ಮಾದರಿಯಾಗಿದ್ದಾನೆ.
ಎದೆಗೆ ಬಿದ್ದ ಅಕ್ಷರ, ಭೂಮಿಗೆ ಬಿದ್ದ ಬೀಜ ಇಂದಲ್ಲ ನಾಳೆ ಫಲ ಕೊಡುತ್ತದೆ. ಸಾಧನೆಗೆ ಬಡತನ ಅಡ್ಡಿಯಾಗಲ್ಲ ಎಂಬ ನುಡಿಯಂತೆ ಬಡತನದಲ್ಲಿ ಹುಟ್ಟಿದ ದೇವಪ್ಪ ಅಬ್ಲಿ ಜೀವನದಲ್ಲಿ ಏನಾದ್ರೂ ಸಾಧಿಸಬೇಕೆಂಬ ಛಲ ತೊಟ್ಟು, ಗುರಿಯ ಕಡೆಗೆ ಸಾಗಬೇಕು ಎಂದು ಗ್ರಾಮೀಣ ಯುವಕ ತೋರಿಸಿಕೊಟ್ಟಿದ್ದಾನೆ.
ಬಡತನದಲ್ಲಿ ಜೀವನ ಸಾಗಿಸುತ್ತಿದ್ದ ಹುಣಸಗಿ ತಾಲೂಕಿನ ಮಂಜಲಾಪೂರಹಳ್ಳಿ ಗ್ರಾಮದ ಮಾಳಪ್ಪ ಅಬ್ಲಿ ಹಾಗೂ ನಿಂಗಮ್ಮ ಅಬ್ಲಿ ದಂಪತಿಗಳಿಗೆ ನಾಲ್ಕು ಜನ ಹೆಣ್ಣು ಮಕ್ಕಳು, ದೇವಪ್ಪ ಅಬ್ಲಿ ಒಬ್ಬನೆ ಗಂಡು ಮಗ. ತಮ್ಮ ಬಡತನದ ಮಧ್ಯದಲ್ಲಿಯೂ ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸಿದ್ದಾರೆ. ಸೈನಿಕ ಹುದ್ದೆ ಎಂದರೆ ಭಯಪಟ್ಟು ಎದೆಷ್ಟೋ ತಾಯಂದಿರು ಆ ಹುದ್ದೆಗೆ ಕಳುಹಿಸಲು ಹಿಂದೆಟು ಹಾಕುವವರ ಮಧ್ಯ, ಮನೆಗೆ ಒಬ್ಬನೆ ಮಗನಿದ್ದರೂ, ಮನೆಗಿಂತ ದೇಶಸೇವೆ ಮುಖ್ಯವೆಂದು ಇರುವ ಒಬ್ಬ ಮಗನನ್ನು ದೇಶಸೇವೆಗೆ ಕಳುಹಿಸಿಕೊಟ್ಟ ತಂದೆ ತಾಯಿಯರ ದೇಶಪ್ರೇಮಕ್ಕೆ ತಾಲೂಕಿನ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ದೇವಪ್ಪ ಅಬ್ಲಿ ಅವರು ಅಗ್ನಿವೀರ ತರಬೇತಿಯನ್ನು ಲಕ್ನೌವ್‌ದ ಎಎಂಸಿ ಸೆಂಟರ್ ತರಬೇತಿ ಕೇಂದ್ರದಲ್ಲಿ ಸತತ ಏಳು ತಿಂಗಳಗಳ ಕಾಲ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಜನವರಿ ೨ರಂದು ಪಶ್ಚಿಮ ಬಂಗಾರದಲ್ಲಿ ಸೇವೆಗೆ ಹಾಜರಾಗಲಿದ್ದಾರೆ.
ತರಬೇತಿ ಮುಗಿಸಿಕೊಂಡು ಶುಕ್ರವಾರದಂದು ಮರಳಿ ಸ್ವಗ್ರಾಮಕ್ಕೆ ಆಗಮಿಸಿದ ಸೈನಿಕನನ್ನು ಗ್ರಾಮಸ್ಥರು ಹಾಗೂ ಹುಣಸಗಿ ಪಟ್ಟಣದ ಮುಖಂಡರು, ಯುವಕರು ಮಹಾಂತಸ್ವಾಮಿ ವೃತ್ತದಲ್ಲಿ ಅದ್ದೂರಿಯಾಗಿ ಸ್ವಾಗತಿಸಿ, ಭಾರತಾಂಬೆಯ ಜಯ ಘೋಷಗಳನ್ನು ಹಾಕಿದರು.
ಹುಣಸಗಿ ಪಟ್ಟಣದ ಮಹಾಂತಸ್ವಾಮಿ ವೃತ್ತದಿಂದ, ಬಸವೇಶ್ವರ ವೃತ್ತದ ಮೂಲಕ ಸೈನಿಕನ ಸ್ವಗ್ರಾಮದ ವರೆಗೆ ಬೈಕ್ ರ್ಯಾಲಿ ಮೂಲಕ ತೆರೆದ ವಾಹನದಲ್ಲಿ ಮೆರವಣಿಗೆ ಮಾಡಲಾಯಿತು. ಯೋಧ ದೇವಪ್ಪ ಅಬ್ಲಿ ತನ್ನ ಹೆತ್ತವರಿಗೆ ಪರೇಡ್ ಡ್ರಿಲ್ ಮೂಲಕ ಸೆಲ್ಯೂಟ್ ಮಾಡಿ ತಾಯಿಗೆ ಟೋಪಿಯನ್ನು ಹಾಕುವುದರ ಜೊತೆಗೆ ಕೃತಜ್ಞತೆ ಸಲ್ಲಿಸಿದನು. ಸೈನಿಕನ ಗ್ರಾಮದಲ್ಲಿ ಗ್ರಾಮಸ್ಥರು, ಗೆಳೆಯರ ಬಳಗ ಪಟಾಕಿ ಸಿಡಿಸಿ ವಿಜೃಂಭಿಸಿದರು. ಒಟ್ಟಾರೆ ಸೈನಿಕನ ಗ್ರಾಮದಲ್ಲಿ ಹಬ್ಬದ ವಾತವರಣ ನಿರ್ಮಾಣವಾಗಿತ್ತು.
ಚಿಕ್ಕ ವಯಸ್ಸಿನಿಂದಲೂ ದೇಶಸೇವೆ ಮಾಡುವ ಹಂಬಲ ಹೊಂದಿದ್ದೆ, ಭಾರತಾಂಬೆಯ ಸೇವೆ ಸಲ್ಲಿಸುವ ಅವಕಾಶ ಈಗ ಕೂಡಿಬಂದಿದೆ.
ಎಂದು ದೇವಪ್ಪ ಅಬ್ಲಿ, ಹೇಳಿದರು.

Leave a Reply

Your email address will not be published. Required fields are marked *

error: Content is protected !!