ಅದ್ದೂರಿಯಾಗಿ ನೆರವೇರಿದ ನಗನೂರ ಶ್ರೀ ಸೂಗೂರೇಶ್ವರ ಸ್ವಾಮಿ ರಥೋತ್ಸವ
ಸುರಪುರ ಟೈಮ್ಸ್ ವಾರ್ತೆ
ಸುರಪುರ:ನಗನೂರ ಗ್ರಾಮದ ಆರಾಧ್ಯ ದೈವ ಶ್ರೀ ಸೂಗೂರೇಶ್ವರ ಜಾತ್ರಾ ಮಹೋತ್ಸವದ ನಿಮಿತ್ಯ ಮಂಗಳವಾರ ಮಹಾ ರಥೋತ್ಸವವು ಸಹಸ್ರಾರು ಭಕ್ತರ ಜಯ ಘೋಷಗಳ ಮಧ್ಯೆ ಸಂಜೆ ಉತ್ಸಾಹದಿಂದ ಅದ್ದೂರಿಯಾಗಿ ನೆರವೇರಿತು.
ಸಂಪ್ರದಾಯದಂತೆ ಮುಂಜಾನೆ ದೇವಸ್ಥಾನದಲ್ಲಿ ಮಹಾರುದ್ರಭಿಷೇಕಾ, ಮಹಾಪೂಜೆ, ಎಲೆಪೂಜೆ, ನಂದಿ ಸೇವೆ ಸೇರಿದಂತೆ ವಿವಿಧ ಪೂಜೆ-ಕೈಂಕಾರ್ಯಗಳು,ಧಾರ್ಮಿಕ ವಿಧಿವಿಧಾನಗಳು ಪ್ರಾರಂಭವಾಗಿ ಸಾಯಂಕಾಲದವರೆಗೆ ಅನೇಕ ಚಟುವಟಿಕೆಗಳು ನಡೆದವು.ಸೂಗೂರೇಶ್ವರ ಶಿವಾಚಾರ್ಯರ ಸಾನಿಧ್ಯದಲ್ಲಿ ಸಾಯಂಕಾಲ ಆರು ಘಂಟೆಗೆ ಶೃಂಗಾರಗೊಂಡಿದ್ದ ರಥದಲ್ಲಿ ಶ್ರೀ ಸೂಗೂರೇಶ್ವರ ಮೂರ್ತಿಯನ್ನಿಟ್ಟು ಮೇಲೆ ಶಿಖರ ಏರುತ್ತಿದ್ದಂತೆ ಭಕ್ತರ ಜಯಕಾರ ಮುಗಿಲು ಮುಟ್ಟಿತು.
ಮಕ್ಕಳು, ವೃದ್ಧರು, ಮಹಿಳೆಯರು ಹೊಸ ಬಟ್ಟೆಗಳನ್ನುಟ್ಟು ಶ್ರೀ ಸೂಗೂರೇಶ್ವರ ದೇವಸ್ಥಾನದ ಪ್ರಾಂಗಣದಲ್ಲಿ ಮಧ್ಯಾಹ್ನ ಮೂರು ಗಂಟೆಯಿಂದಲೆ ಜಮಾವಣೆಗೊಂಡು ನಂತರ ನಡೆದ ರಥೋತ್ಸವವನ್ನು ಕಣ್ತುಂಬಿಕೊಂಡರು. ರಥೋತ್ಸವದ ನಂತರ ಭಕ್ತರು ಸರದಿಯಲ್ಲಿ ನಿಂತು ದೇವರ ದರ್ಶನ ಪಡೆದು, ತೇರಿಗೆ ಹಿಡಿಗಾಯಿಗಳನ್ನು ಒಡೆದು ಹರಕೆ ತೀರಿಸಿದರು.
ನಗನೂರ, ಖಾನಾಪುರ ಎಸ್‌ಕೆ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಅನೇಕ ಗ್ರಾಮಗಳ ಭಕ್ತರು ತಂಡೋಪತಂಡವಾಗಿ ಆಗಮಿಸುತ್ತಿದ್ದ ದೃಶ್ಯ ಸರ್ವೇಸಾಮನ್ಯವಾಗಿತ್ತು. ಇದೇ ಸಂದರ್ಭದಲ್ಲಿ ಕಳೆದ ಹದಿನೈದು ದಿನಗಳಿಂದ . ಅಮರೇಶ್ವರ ಶಾಸ್ತ್ರೀಗಳು ಹೇಳಿದ ಶ್ರೀ ಗುಡ್ಡಾಪೂರ ದಾನಮ್ಮ ದೇವಿಯ ಮಹಾಪುರಾಣವೂ ಸಂಪನ್ನಗೊಂಡಿತು.




