ಹಿಮೋಗ್ಲೋಬಿನ್ ಕೊರತೆಯಿಂದ ಅನೇಕ ಗಂಭೀರ ಸಮಸ್ಯೆ; ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ನಿಂಗಮ್ಮ


ಸುರಪುರ ಟೈಮ್ಸ್ ವಾರ್ತೆ
ಸುರಪುರ:ಹಿಮೋಗ್ಲೋಬಿನ್ ಎಂಬ ಪ್ರೋಟಿನ್ ಕೆಂಪು ರಕ್ತ ಕಣದಲ್ಲಿ ಪತ್ತೆಯಾಗುತ್ತದೆ. ಇದರ ಪ್ರಮಾಣ ಕಡಿಮೆಯಾದರೆ, ರಕ್ತ ಹೀನತೆ ಉಂಟಾಗುತ್ತದೆ. ರಕ್ತದ ಹಿಮೋಗ್ಲೋಬಿನ್ ಗಣನೀಯವಾಗಿ ಕಡಿಮೆಯಾದರೆ, ಇದು ದೈಹಿಕ ಮತ್ತು ಮಾನಸಿಕ ಸಾಮರ್ಥ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ನಿಂಗಮ್ಮ ಹೇಳಿದರುನಗರದ ಕ್ರೇಸ್ತ ದಿ. ಕಿಂಗ್ ಶಾಲೆಯಲ್ಲಿ ವಿಶ್ವಗಂಗಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ರಾಜಚಂದ್ರ ಆಸ್ಪತ್ರೆ ಗುಜರಾತ್, ಆರೋಗ್ಯ ಇಲಾಖೆ, ಗ್ರಾಮೀಣ ಅಭಿವೃದ್ಧಿ ಸಂಸ್ಥೆ ವಿಜಯಪುರ, ಸ್ಪಂದನಾ ಸಂಸ್ಥೆ ವಿಜಯಪುರ ಇವರ ಸಹಯೋಗದಲ್ಲಿ ಶನಿವಾರ ಏರ್ಪಡಿಸಿದ್ದ ರಕ್ತ ಹೀನತೆ ಕುರಿತು ಆರೋಗ್ಯ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.
‘ಕೆಂಪುರಕ್ತ ಕಣಗಳಲ್ಲಿ ಆಮ್ಲಜನಕವನ್ನು ಸಾಗಿಸುವ ಹಿಮೋಗ್ಲೋಬಿನ್ ಪ್ರಮಾಣ ಕಡಿಮೆಯಾಗುತ್ತದೆ. ಇದರಿಂದ ದೇಹದ ಅಂಗಗಳಿಗೆ ಆಮ್ಲಜನಕದ ಪೂರೈಕೆ ಕಡಿಮೆಯಾಗಿ ಆಯಾಸ, ದೌರ್ಬಲ್ಯ, ಉಸಿರಾಟದ ತೊಂದರೆ ಲಕ್ಷಣಗಳು ಕಾಣಿಸುತ್ತವೆ’ ಎಂದು ತಿಳಿಸಿದರು.
‘ಈ ಲಕ್ಷಣಗಳು ಕಂಡುಬಂದಲ್ಲಿ ಸಮೀಪದ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು. ಉಚಿತ ಚಿಕಿತ್ಸೆ ಲಭ್ಯವಿದ್ದು ಸರಿಯಾದ ಔಷಧೋಪಚಾರ ಪಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.
‘ರಕ್ತಹೀನತೆ ಮುಕ್ತ ರಾಷ್ಟದ ಕಲ್ಪನೆ ಸರ್ಕಾರ ಹೊಂದಿದೆ. ಈ ನಿಟ್ಟಿನಲ್ಲಿ ಸರ್ಕಾರೇತರ ಸಂಸ್ಥೆಗಳ ಸಹಯೋಗದೊಂದಿಗೆ ಶಾಲಾ, ಕಾಲೇಜುಗಳಿಗೆ ತೆರಳಿ ರಕ್ತಹೀನತೆಯ ಬಗ್ಗೆ ಜಾಗೃತಿ ಮೂಡಿಸಿ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ನೀಡಲಾಗುತ್ತಿದೆ’ ಎಂದರು.
ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ರಾಜಶೇಖರ, ವಿಶ್ವಗಂಗಾ ಸಂಸ್ಥೆಯ ಅಧ್ಯಕ್ಷ ಚಂದಪ್ಪ ಯಾದವ ಮಾತನಾಡಿದರು. ಶಾಲೆಯ ಮುಖ್ಯಸ್ಥ ಪರಮಣ್ಣ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ಸಂಸ್ಥೆಯ ಮೇಲ್ವಿಚಾರಕರಾದ ಅಯ್ಯಣ್ಣ ಯಾದವ, ಶ್ವೇತಾ, ಮಲ್ಲಿಕಾರ್ಜುನ, ಶ್ರೀನಿವಾಸ, ವಿಜಯಲಕ್ಷ್ಮೀಶಾಲೆಯ ಸಿಬ್ಬಂದಿ, ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು.೫೦೦ ಕ್ಕೂ ಹೆಚ್ಚು ಮಕ್ಕಳ ಆರೋಗ್ಯ ತಪಾಸಣೆ ಮತ್ತು ಉಚಿತವಾಗಿ ಔಷಧಿ ವಿತರಿಸಲಾಯಿತು.

Leave a Reply

Your email address will not be published. Required fields are marked *

error: Content is protected !!