2ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಉದ್ಘಾಟನೆ ಇಂದು;ವಕೀಲರ ಸಂಘ ಹರ್ಷ
ಸುರಪುರ ಟೈಮ್ಸ್ ವಾರ್ತೆ
ಸುರಪುರ:ನಗರದ ತಾಲೂಕು ನ್ಯಾಯಾಲಯದ ಸಂಕೀರ್ಣದಲ್ಲಿ ಹೊಸದಾಗಿ ಸ್ಥಾಪಿಸಲಾದ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಉದ್ಘಾಟನೆ ಇಂದು ಭಾನುವಾರ ಬೆಳಗ್ಗೆ 11 ಗಂಟೆಗೆ ನಡೆಯಲಿದೆ ಎಂದು ಇಲ್ಲಿಯ ವಕೀಲರ ಸಂಘದವರು ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಈ ಕುರಿತು ಜಂಟಿ ಸುದ್ದಿಗೋಷ್ಠಿಯಲ್ಲಿ ಸುರಪುರ ವಕೀಲರ ಸಂಘದ ಅಧ್ಯಕ್ಷ ರಮಾನಂದ ಕವಲಿ, ಹಿರಿಯ ನ್ಯಾಯವಾದಿಗಳಾದ ದೇವಿಂದ್ರಪ್ಪ ಬೇವಿನಕಟ್ಟಿ, ಅರವಿಂದ ಕುಮಾರ
ಮಾತನಾಡಿ, ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳಾದ ಹೆಚ್.ಟಿ.ನರೇಂದ್ರ್ ಪ್ರಸಾದ್, ಅಶೋಕ್ ಕಿಣಗಿ, ಮುಂಬೈನ ಸೆಕ್ಯುರಿಟೀಸ್ ಮೇಲ್ಮನವಿ ನ್ಯಾಯಮಂಡಳಿ ಅಧ್ಯಕ್ಷರು ಮತ್ತು ಕರ್ನಾಟಕ ಹೈಕೋರ್ಟ್ ನ ಮಾಜಿ ಮುಖ್ಯ ನಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ ಅವರುಗಳ ನ್ಯಾಯಲಯದ ಉಪಸ್ಥಿತಿಯಲ್ಲಿ ಕರ್ನಾಟಕ ಹೈಕೋರ್ಟ್ ಮತ್ತು ಯಾದಗಿರಿ ಜಿಲ್ಲೆಯ ಆಡಳಿತ ನ್ಯಾಯಾಧೀಶರಾದ ಕೆ.ಎಸ್.ಹೇಮಲೇಖಾ ಉದ್ಘಾಟಿಸುವರು.
ಕಾನೂನು, ನ್ಯಾಯ, ಮಾನವ ಹಕ್ಕುಗಳು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಎಚ್.ಕೆ.ಪಾಟೀಲ್ ಅಧ್ಯಕ್ಷತೆ ವಹಿಸುವರು. ಸಚಿವರಾದ ಸತೀಶ್ ಜಾರಕಿಹೊಳೆ, ಶರಣಬಸಪ್ಪಗೌಡ ದರ್ಶನಾಪೂರ ಗೌರವ ಅತಿಥಿಗಳಾಗಿರುತ್ತಾರೆ. ಶಾಸಕ ರಾಜಾ ವೇಣುಗೋಪಾಲ ನಾಯಕ, ರಿಜಿಸ್ಟ್ರಾರ್ ಜನರಲ್ ಕೆ.ಎಸ್.ಭರತ್ ಕುಮಾರ, ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ವಿಶೇಷ ಆಹ್ವಾನಿತರಾಗಿರುತ್ತಾರೆ. ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶರಾದ ಮರುಳಸಿದ್ಧಾರಾಧ್ಯ ಎಚ್.ಜಿ, ಸುರಪುರ ವಕೀಲರ ಸಂಘದ ಅಧ್ಯಕ್ಷ ರಮಾನಂದ ಕವಲಿ, ಕಾರ್ಯದರ್ಶಿಗಳಾದ ನಂದಕುಮಾರ ಕನ್ನೆಳ್ಳಿ, ಮಲ್ಲಿಕಾರ್ಜುನ ಮಂಗೀಹಾಳ, ಲೋಕೋಪಯೋಗಿ ಇಲಾಖೆಯ ಸಿಇ ಶರಣಪ್ಪ ಸೂಳಗುಂಟೆ, ಇಇ ಪರಶುರಾಮ ಉಪಸ್ಥಿತರಿರುತ್ತಾರೆ ಎಂದರು.
ವಕೀಲರಾದ ಯಂಕಾರೆಡ್ಡಿ ಹವಲ್ದಾರ್ ಬೋನ್ಹಾಳ, ವೆಂಕಟೇಶ ನಾಯಕ ಕುಂಬಾರಪೇಟೆ ಇದ್ದರು.
ಮಂಜೂರಾತಿಗೆ ಸಹಕರಿಸಿದರು
ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿದ್ದ ಪಿ.ಎಸ್.ದಿನೇಶ್ ಕುಮಾರ ಅವರು ಕೆಲ ವರ್ಷಗಳ ಹಿಂದೆ ನಮ್ಮ ನ್ಯಾಯಾಲಯಕ್ಕೆ ಆಗಮಿಸದ ಸಂದರ್ಭದಲ್ಲಿ ಇಲ್ಲಿ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಅವಶ್ಯಕತೆ ಇದೆ ಕಾರಣ ಮಂಜೂರು ಮಾಡಬೇಕು ಎಂದು ವಕೀಲರ ಸಂಘದಿಂದ ಅವರಲ್ಲಿ ಮನವಿ ಮಾಡಿಕೊಂಡಿದ್ದೇವು. ಈ ಬಗ್ಗೆ ಸುರಪುರ ಮತ್ತು ಶಹಾಪುರದವರು ಜಂಟಿಯಾಗಿ ಮನವಿ ಪತ್ರ ಕೊಡಿ ನಾನು ಮಂಜೂರಾತಿ ಮಾಡಿಸುವೆ ಎಂದು ಅವರು ಹೇಳಿದ್ದರು ಅದರಂತೆ ಅವರು ಮಂಜೂರು ಮಾಡಿಸಿದರು. ನಂತರ ಸರಕಾರ ಮಟ್ಟದಲ್ಲಿ ಹಣಕಾಸು ಮಂಜೂರಾತಿಯ ಅವಶ್ಯಕತೆಯಿತ್ತು. ಅಂದು ಶಾಸಕರಾಗಿದ್ದ ರಾಜಾ ವೆಂಕಟಪ್ಪ ನಾಯಕ ಅವರು ನಮ್ಮ ವಕೀಲರ ನಿಯೋಗಕ್ಕೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾನೂನು ಸಚಿವ ಹೆಚ್.ಕೆ.ಪಾಟೀಲ್‌ರನ್ನು ಭೇಟಿ ಮಾಡಿಸಿ ಹಣಕಾಸು ಒಪ್ಪಿಗೆ ಕೊಡಿಸಿದ್ದರು. ಬಳಿಕ ಶಾಸಕ ರಾಜಾ ವೇಣುಗೋಪಾಲ ನಾಯಕ ಹಣಕಾಸು ಮಂಜೂರಾತಿ ಒದಗಿಸಿಕೊಟ್ಟರು. ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ಅವರು ಕೂಡ ಸಹಕರಿಸಿರುತ್ತಾರೆ. ಜಿಲ್ಲಾ ನಿವೃತ್ತ ನ್ಯಾಯಾಧೀಶ ಸಾಬಣ್ಣ ಮೇಲಗಲ್ ಹಾಗೂ ಸುರಪುರ ಮತ್ತು ಶಹಾಪುರ ವಕೀಲರ ಪರಸ್ಪರ ಸಹಾಯ, ಸಹಭಾಗಿತ್ವದ ಫಲವಾಗಿ ಇಲ್ಲಿ ನ್ಯಾಯಾಲಯ ಮಂಜೂರಾಗಲು ಕಾರಣವಾಗಿದೆ ಎಂದು ವಕೀಲರ ಸಂಘದವರು ಹೇಳಿದರು .





