ಡಿ.23ಕ್ಕೆ ಕಲಬುರಗಿಯಲ್ಲಿ ವಿಶ್ವ ರೈತ ದಿನಾಚರಣೆ ಪ್ರಯುಕ್ತ- ರಾಜ್ಯ ಮಟ್ಟದ ರೈತ ಸಮಾವೇಶ ,ರೈತ ಹಬ್ಬ

ಸುರಪುರ ಟೈಮ್ಸ್ ವಾರ್ತೆ
ಸುರಪುರ : ಕಲಬುರಗಿಯ ಡಾ.ಎಸ್.ಎಂ.ಪಂಡಿತ್ ರಂಗ ಮಂದಿರದಲ್ಲಿ ಡಿ.23 ರಂದು ಬೆಳಗ್ಗೆ 11 ಗಂಟೆಗೆ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ರೈತ ಸಂಘ-ಹಸಿರು ಸೇನೆ ರಾಜ್ಯ ಕಬ್ಬು ಬೆಳೆಗಾರರ ಸಂಘವು ವಿಶ್ವ ರೈತ ದಿನಾಚರಣೆ-ರೈತರ ಹಬ್ಬ ಆಚರಣೆ ನಿಮಿತ್ತ ರಾಜ್ಯಮಟ್ಟದ ರೈತ ಸಮಾವೇಶ ಹಮ್ಮಿಕೊಂಡಿರುತ್ತದೆ ಎಂದು ಒಕ್ಕೂಟದ ಮುಖಂಡರು ಹೇಳಿದರು.
ಇಲ್ಲಿಯ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖಂಡರು, ರಾಜ್ಯಮಟ್ಟದ ರೈತ ಸಮಾವೇಶದಲ್ಲಿ ಎಲ್ಲಾ ಜಿಲ್ಲೆಗಳಿಂದ ರೈತರು ಆಗಮಿಸುತ್ತಿದ್ದಾರೆ. ಜತೆಗೆ ಪಂಜಾಬ್, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಿಂದಲೂ ರೈತ ಮುಖಂಡರು ಭಾಗವಹಿಸುತ್ತಾರೆ. ಸಮಾವೇಶದಲ್ಲಿ ರೈತರ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗುವುದು. ಹಕ್ಕೋತ್ತಾಯಗಳ ಪರಿಹಾರಕ್ಕಾಗಿ ಸರಕಾರಗಳನ್ನು ಒತ್ತಾಯಿಸಲಾಗುವುದು ಎಂದರು.
ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್ ಅಧ್ಯಕ್ಷತೆಯಲ್ಲಿ ಆಯೋಜಿಸಿರುವ ವಿಶ್ವ ರೈತರ ದಿನಾಚರಣೆಯನ್ನು ರೈತರ ಹಬ್ಬ ಎಂದು ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ. ಮಾಜಿ ಮುಖ್ಯಮಂತ್ರಿ ಮತ್ತು ಹಾಲಿ ಸಂಸದ ಬಸವರಾಜ್ ಬೊಮ್ಮಯಿ, ಶಾಸಕ ಬಿ.ಆರ್.ಪಾಟೀಲ್ ಸೇರಿ ಅನೇಕ ಪ್ರಮುಖರು ಭಾಗವಹಿಸುತ್ತಿದ್ದಾರೆ. ಯಾದಗಿರಿ ಜಿಲ್ಲೆಯ ಎಲ್ಲಾ ತಾಲೂಕುಗಳ ರೈತ ಬಾಂಧವರು ಈ ಸಮಾವೇಶದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಕೋರಿದರು.
ಒಕ್ಕೂಟದ ರಾಜ್ಯ ಸಂಚಾಲಕ ಕೊಟ್ರೇಶ್ ಚೌದ್ರಿ, ಜಿಲ್ಲಾ ಸಂಚಾಲಕ ಶಿವಶರಣಪ್ಪ ಸಾಹುಕಾರ ಹೈಯಾಳ ಮಾತನಾಡಿದರು. ತಾಲೂಕು ಅಧ್ಯಕ್ಷ ಮರಿಲಿಂಗಪ್ಪ ಅಡ್ಡೋಡಗಿ, ಮುಖಂಡರಾದ ಯಲ್ಲಪ್ಪ ನಾಯಕ ಮಲ್ಲಿಬಾವಿ, ಸಿದ್ದಪ್ಪ ದಿವಳಗುಡ್ಡ, ರಾಮಚಂದ್ರಪ್ಪ ತಳವಾರಗೇರಾ, ದೇವಿಂದ್ರಪ್ಪಗೌಡ, ಭೀಮನಗೌಡ, ರಮೇಶ್, ಹಣಮಂತ, ಮೌನೇಶ, ಲಕ್ಷ್ಮಣ, ವೆಂಕಟೇಶ, ನಿಂಗಪ್ಪ, ಭೀಮಶಾ, ಹಣಮಂತ ಪೂಜಾರಿ, ಚಾಂದ್ ಹುಸೇನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸರಕಾರ ಆಚರಿಸಬೇಕು
ನಮ್ಮ ಒಕ್ಕೂಟದಿಂದ ಪ್ರತಿ ವರ್ಷ ವಿಶ್ವ ರೈತ ದಿನಾಚರಣೆ ಆಚರಿಸಲಾಗುತ್ತದೆ. ಕಳೆದ ವರ್ಷ ಮೈಸೂರಿನಲ್ಲಿ  ಏರ್ಪಡಿಸಲಾಗಿತ್ತು. ಈ ವರ್ಷ ಕಲಬುರಗಿಯಲ್ಲಿದೆ. ರೈತರಲ್ಲಿ ಜಾಗೃತಿ ಮೂಡಿಸುವುದು ಅವರ ಸಮಸ್ಯೆಗಳನ್ನು ಆಲಿಸಿ ಸರಕಾರದ ಗಮನಕ್ಕೆ ತರುವುದು ಇದರ ಮುಖ್ಯ ಉದ್ದೇಶವಾಗಿದೆ. ವಿಶ್ವ ರೈತ ದಿನಾಚರಣೆಯನ್ನು ಸರಕಾರದ ವತಿಯಿಂದ ಆಚರಿಸುವಂತಾಗಬೇಕು. ಕಕ ಭಾಗದ ರೈತರಿಗೆ ಸರಕಾರದ ಸೌಲಭ್ಯಗಳು ಸಮರ್ಪಕವಾಗಿ ಮುಟ್ಟುತ್ತಿಲ್ಲ ಮತ್ತು ಜಾಗೃತಿ ಸಹ ಆಗುತ್ತಿಲ್ಲ ಎಂದು ರೈತ ಮುಖಂಡರು ಕಳವಳ ವ್ಯಕ್ತಪಡಿಸಿದರು.

ಸಮಾವೇಶದ ಹಕ್ಕೋತ್ತಾಯಗಳು

ಕಕ ಭಾಗಕ್ಕೆ ಅತಿವೃಷ್ಟಿ ಪರಿಹಾರ ಬಿಡುಗಡೆ ಮಾಡಬೇಕು. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ, ನಕಲಿ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ಮಾರಾಟ ಮಾಡುವವರ ವಿರುದ್ಧ ಕಠಿಣ ಶಿಕ್ಷೆ ವಿಧಿಸುವ ಕಾನೂನು ಜಾರಿಯಾಗಬೇಕು. ರೈತರ ಕೃಷಿ ಸಾಲ ಸಂಪೂರ್ಣ ಮನ್ನಾ ಆಗಬೇಕು. ಕೃಷಿ ಸಾಲ ನೀತಿ ಬದಲಾವಣೆಯಾಗಲಿ. ಕಬ್ಬಿನ ಎಫ್‌ಆರ್‌ಪಿ ದರ ರೈತರ ಹೊಲದಲ್ಲಿನ ದರ ಎಂದು ನಿಗದಿ ಮಾಡುವ ಮಾನದಂಡ ಜಾರಿಯಾಗಬೇಕು. ಫಸಲ್ ಬೀಮಾ ಬೆಲೆ ವಿಮಾ ಪದ್ದತಿ ನೀತಿ ಬದಲಾಗಬೇಕು. ಎಪಿಎಂಸಿಗಳಲ್ಲಿ ಶೇ.10 ರಷ್ಟು ಕಮಿಷನ್ ವಸೂಲಿ ನಿಲ್ಲಿಸಲು ಕಠಿಣ ಕಾನೂನು ಕ್ರಮಕೈಗೊಳ್ಳಬೇಕು. ರಾಜ್ಯದಲ್ಲಿ ಬಗರ್ ಹುಕುಂ ಸಾಗುವಳಿ ಮಾಡುವ ರೈತರಿಗೆ ಸಾಗುವಳಿ ಪತ್ರ ನೀಡಬೇಕು. ತೆಲಂಗಾಣ ಮಾದರಿಯಲ್ಲಿ 60 ವರ್ಷ ತುಂಬಿದ ರೈತರಿಗೆ ಪಿಂಚಣಿ ನೀಡುವ ಯೋಜನೆ ಜಾರಿಗೆ ತರಲಿ. ಕೃಷಿ ಸಾಲ ವಸೂಲಾತಿಗಾಗಿ ರೈತರ ಜಮೀನು ವಶಪಡಿಸಿಕೊಳ್ಳುವ ಕಾಯ್ದೆ ರದ್ದುಗೊಳಿಸಬೇಕು. ರಾಜ್ಯದಲ್ಲಿ ಭೂ ಸುಧಾರಣಾ ಮತ್ತು ಎಪಿಎಂಸಿ ತಿದ್ದುಪಡಿ ಕಾಯ್ದೆ ರದ್ದುಗೊಳಿಸಬೇಕು ಸೇರಿ ಇನ್ನಿತರ ಹಕ್ಕೋತ್ತಾಯಗಳನ್ನು ರಾಜ್ಯಮಟ್ಟದ ರೈತ ಸಮಾವೇಶದಲ್ಲಿ ಒತ್ತಾಯಿಸಲಾಗುವುದು ಎಂದು ರೈತ ಮುಖಂಡರು ವಿವರಿಸಿದರು.

ಫೋಟೊ : ಸುರಪುರ ಪತ್ರಿಕಾ ಭವನದಲ್ಲಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಮುಖಂಡರು ವಿಶ್ವ ರೈತ ದಿನಾಚರಣೆ-ರೈತರ ಹಬ್ಬದ ಮತ್ತು ರಾಜ್ಯಮಟ್ಟದ ರೈತ ಸಮಾವೇಶದ ಭಿತ್ತಿಪತ್ರ ಪ್ರದರ್ಶಿಸಿದರು.

Leave a Reply

Your email address will not be published. Required fields are marked *

error: Content is protected !!