ನಿಷ್ಠಿ ಅವರ ವಕೀಲ ವೃತ್ತಿ ಅದು ನಿರಂತರ ತಪಸ್ಸು;ಡಾ,ವಿಷ್ಣುಕಾಂತ

ಸುರಪುರ ಟೈಮ್ಸ್ ವಾರ್ತೆ
ಸುರಪುರ : ಹಿರಿಯ ನ್ಯಾಯವಾದಿ ಶರಣಬಸಪ್ಪ ವ್ಹಿ.ನಿಷ್ಠಿ ಅವರು ವಕೀಲ ವೃತ್ತಿಯಲ್ಲಿ 50 ವರ್ಷಗಳನ್ನು ಪೂರೈಸಿ ಸುವರ್ಣ ಸಂಭ್ರಮದಲ್ಲಿದ್ದಾರೆ. ಈ ಸುದೀರ್ಘ ಪ್ರಯಣ ಕೇವಲ ವೃತ್ತಿಯಲ್ಲ ಅದು ನ್ಯಾಯಕ್ಕಾಗಿ ನಡೆಸಿದ ನಿರಂತರ ತಪಸ್ಸು ಎಂದು ಗದಗದ ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ವಿಶ್ವ ವಿದ್ಯಾಲಯದ ಮಾಜಿ ಕುಲಪತಿ ಡಾ.ವಿಷ್ಣುಕಾಂತ್ ಎಸ್.ಚಟ್ಟಲ್ಲಿ ತಿಳಿಸಿದರು.
ಮಹಾ ವಿದ್ಯಾಲಯದ ಸಂಸ್ಥಾಪಕ ಮತ್ತು ಹಿರಿಯ ವಕೀಲ ಶರಣಬಸಪ್ಪ ನಿಷ್ಠಿ ಅವರು ವಕೀಲ ವೃತ್ತಿಯಲ್ಲಿ ೫೦ ವರ್ಷಗಳನ್ನು ಯಶಸ್ವಿಯಾಗಿ ಮುಗಿಸಿರುವ ಹಿನ್ನೆಲೆಯಲ್ಲಿ ಇಲ್ಲಿಯ ವೀರಪ್ಪ ನಿಷ್ಠಿ ಎಂಜನಿಯರಿಂಗ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಭೆಯಲ್ಲಿ ಮಾತನಾಡಿದ ಅವರು, ನಿಷ್ಠಿ ಅವರು ಕಳೆದ ಐದು ದಶಕಗಳಲ್ಲಿ ಕಾನೂನಿನ ಏಳು-ಬೀಳುಗಳನ್ನು ಹತ್ತಿರದಿಂದ ಕಂಡಿದ್ದಾರೆ. 1970 ರಲ್ಲಿ ವೃತ್ತಿ ಆರಂಭಿಸಿದ್ದ ಅವರು ಅಂದಿನಿಂದ ಇಂದಿನವರೆಗೂ ತಮ್ಮ ವೃತ್ತಿಯಲ್ಲಿ ನೈತಿಕತೆ, ನ್ಯಾಯಾಲಯದ ಗೌರವವನ್ನು ಎತ್ತಿ ಹಿಡಿದಿದ್ದಾರೆ. ಅನೇಕರಿಗೆ ನ್ಯಾಯ ಕೊಡಿಸುವ ಮೂಲಕ ಸಮಾಜದಲ್ಲಿ ವಕೀಲ ವೃತ್ತಿಯ ಘನತೆ ಹೆಚ್ಚಿಸಿದ್ದಾರೆ ಎಂದು ಹೇಳಿದರು.
ಕೆವೈಡಿಸಿಸಿ ಬ್ಯಾಂಕ್ ನಿರ್ದೇಶಕ ಸುರೇಶ್ ಸಜ್ಜನ್ ಮಾತನಾಡಿ, ಅಪಾರ ಜ್ಞಾನವುಳ್ಳವರಾಗಿರುವ ನ್ಯಾಯವಾದಿ ಶರಣಬಸಪ್ಪ ನಿಷ್ಠಿ ಅವರದು ಸರಳ, ಸ್ವಭಾವದ ವ್ಯಕ್ತಿತ್ವ. ಬಡವ ಬಲ್ಲಿದರೆನ್ನದೆ ಎಲ್ಲರನ್ನೂ ತಮ್ಮವರೆಂದೂ ಪರಿಗಣಿಸುವ ಗುಣ. ಭೂ ಸ್ವಾಧೀನ ನ್ಯಾಯದಲ್ಲಿ ಅವರು ಪರಿಣಿತರು. ಅವರ ಮಾರ್ಗದರ್ಶನ ಸಮಾಜ ಮತ್ತು ನ್ಯಾಯಾಂಗಕ್ಕೆ ಹೀಗೆಯೇ ಮುಂದುವರೆಯಲಿ ಎಂದು ಹೇಳಿದರು.
ಹಿರಿಯ ನ್ಯಾಯವಾದಿ ಪ್ರಭುದೇವ ಪಾಟೀಲ್ ಮಾತನಾಡಿ, ಶರಣಬಸಪ್ಪ ನಿಷ್ಠಿ ಅವರು ಭೂ ಸ್ವಾಧೀನದಲ್ಲಿ ಬಹಳ ಪರಿಣಿತರು. ಅಭಿವೃದ್ಧಿ ಹೆಸರಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ನ್ಯಾಯಯುತ ಪರಿಹಾರ ಕೊಡಿಸುವಲ್ಲಿ ಅವರ ಪಾತ್ರ ದೊಡ್ಡದು. ಭೂಮಿಯ ಮಾರುಕಟ್ಟೆ ಮೌಲ್ಯ ನಿರ್ಧಾರ ಮತ್ತು ಪುನರ್ವಸತಿ ಹಕ್ಕುಗಳ ಬಗ್ಗೆ ಅವರಲ್ಲಿರುವ ಜ್ಞಾನ ಅಪಾರವಾಗಿದೆ. ಅವರು ನೂರಾರು ಯುವ ವಕೀಲರಿಗೆ ದಾರಿ ದೀಪವಾಗಿದ್ದಾರೆ. ಅವರ ಕಚೇರಿಯ ಒಂದು ರೀತಿಯಲ್ಲಿ ಕಾನೂನು ಪಾಠ ಶಾಲೆ ಇದ್ದಂತ್ತಿದೆ. ಅವರು ಹಾಕಿಕೊಟ್ಟ ಹಾದಿಯಲ್ಲಿ ಯುವ ವಕೀಲರು ನಡೆಯಬೇಕು ಎಂದು ತಿಳಿಸಿದರು.
ಹಿರಿಯ ವಕೀಲೆ ಜಯಲಲಿತಾ ಪಾಟೀಲ್ ಮಾತನಾಡಿ, ನಿಷ್ಠಿ ಅವರು ನಮ್ಮಂತಹ ಅನೇಕ ವಕೀಲರಿಗೆ ಮಾರ್ಗದರ್ಶಕ ಮತ್ತು ಗುರುವಿನಂತಿದ್ದಾರೆ. ಅವರ ಚೇಂಬರ್ ನಿಂದ ಹೊರಬಂದ ಎಷ್ಟೋ ವಕೀಲರು ಇಂದು ವಿವಿಧ ನ್ಯಾಯಾಲಯಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತಿದ್ದಾರೆ. ಕಾನೂನು ಎಂಬುದು ಕೇವಲ ವೃತ್ತಿಯಲ್ಲಿ ಅದು ಸಮಾಜ ಸೇವೆಯ ಒಂದು ಭಾಗ ಎಂದು ಅವರ ಸದಾ ಹೇಳುತ್ತಿದ್ದರು. 50 ವರ್ಷಗಳ ವಕೀಲ ವೃತ್ತಿಯಲ್ಲಿ ಅವರು ಕೇವಲ ಕೇಸ್‌ಗಳನ್ನು ಗೆದ್ದಿಲ್ಲ ಬದಲಾಗಿ ಸಾವಿರಾರು ಜನರ ವಿಶ್ವಾಸವನ್ನು ಗೆದ್ದಿರುತ್ತಾರೆ. ನ್ಯಾಯಾಲಯದ ಘನತೆಯನ್ನು ಎತ್ತಿಹಿಡಿಯುವಲ್ಲಿ ಅವರು ಎಂದಿಗೂ ರಾಜೀ ಮಾಡಿಕೊಂಡವರಲ್ಲ. ವಾದ ಮಂಡಿಸುವಾಗ ಅವರು ತೋರುವ ತರ್ಕಬದ್ಧತೆ ಮತ್ತು ಕಾನೂನು ಮೇಲಿರುವ ಅವರ ಹಿಡಿತ ನಿಜಕ್ಕೂ ಅದ್ಬುತವಾಗಿರುತ್ತದೆ ಎಂದರು.
ನಿಷ್ಠಿ ಕಡ್ಲಪ್ಪನವರ ವಿರಕ್ತ ಮಠದ ಪ್ರಭುಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಸಂದೇಶ ನೀಡಿದರು. ಮಹಾ ವಿದ್ಯಾಲಯದ ಸಂಸ್ಥಾಪಕರು ಮತ್ತು ಹಿರಿಯ ನ್ಯಾಯವಾದಿ ಶರಣಬಸಪ್ಪ ನಿಷ್ಠಿ, ಕಾಲೇಜಿನ ಕಾರ್ಯದರ್ಶಿ ಡಾ. ಶಾಂತಲಾ ಎಸ್.ನಿಷ್ಟಿ, ಜಂಟಿ ಕಾರ್ಯದರ್ಶಿ ದೊಡ್ಡಪ್ಪ ಎಸ್.ನಿಷ್ಠಿ ವೇದಿಕೆಯಲ್ಲಿದ್ದರು. ಕಾಲೇಜು ವತಿಯಿಂದ ಶರಣಬಸಪ್ಪ ನಿಷ್ಠಿ ಅವರಿಗೆ ಹೃದಯಸ್ಪರ್ಶಿಯಾಗಿ ಸನ್ಮಾನಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಡಾ.ಶರಣಬಸಪ್ಪ ಸಾಲಿ, ಸ್ಥಳೀಯ ಮುಖಂಡರು, ಕಾಲೇಜಿನ ವಿವಿಧ ಭಾಗದ ಮುಖ್ಯಸ್ಥರು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಇದ್ದರು. ಪ್ರೊ.ಗಂಗಾಧರ ಹೂಗಾರ ನಿರೂಪಿಸಿ ವಂದಿಸಿದರು. ಕಾರ್ಯಕ್ರಮದ ಪೂರ್ವದಲ್ಲಿ ಲಿಂ.ವೀರಭದ್ರಪ್ಪ ನಿಷ್ಠಿ ಜಹಾಗೀರದಾರ್ ಅವರ ೧೭ ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಮಹಾಪೂಜೆ ಮತ್ತು ಅನ್ನ ಸಂತರ್ಪಣೆ ನಡೆಯಿತು.

Leave a Reply

Your email address will not be published. Required fields are marked *

error: Content is protected !!