ಭವಿಷ್ಯದ ನಾಯಕರು, ಕಲಾವಿದರು, ಚಿಂತಕರು ರೂಪುಗೊಳ್ಳುವ ವೇದಿಕೆ ಪ್ರತಿಭಾ ಕಾರಂಜಿ ವೇದಿಕೆ;ಯಲ್ಲಪ್ಪ ಕಾಡ್ಲೂರ
ಸುರಪುರ ಟೈಮ್ಸ್ ವಾರ್ತೆ
ಸುರಪುರ : ಮಕ್ಕಳಲ್ಲಿ ಸುಪ್ತವಾಗಿರುವ ಕಲಾ, ಕೌಶಲ್ಯ ಹಾಗೂ ಭವಿಷ್ಯದ ನಾಯಕರು, ಕಲಾವಿದರು, ಚಿಂತಕರು ರೂಪುಗೊಂಡು ಬೆಳಕಿಗೆ ತರಲು ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದ್ದು, ಮಗುವಿನ ವ್ಯಕ್ತಿತ್ವ ವಿಕಸನಕ್ಕೂ ಸಹಕಾರಿಯಾಗಿದೆ. ಶಿಕ್ಷಕರ ಮತ್ತು ಪೋಷಕರ ಮಾರ್ಗದರ್ಶನದಿಂದ ಮಕ್ಕಳು ತಮ್ಮ ಗುರಿ ಮುಟ್ಟಲು ಸಾಧ್ಯವಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಯಲ್ಲಪ್ಪ ಕಾಡ್ಲೂರ ಹೇಳಿದರು.
ಸಮೀಪದ ಹಸನಾಪುರದ ತಕ್ಷಶಿಲಾ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಶನಿವಾರ ಹಮ್ಮಿಕೊಂಡಿದ್ದ ಸುರಪುರ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ-2025 ರ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿಭೆ ಎಂಬುದು ಅಂತರಂಗದಲ್ಲಿ ಅಡಗಿರುತ್ತದೆ. ಶಾಲೆಗೆ ಮಗು ಮುಚ್ಚಿದ ಮನಸ್ಸಿನಿಂದ ಬಂದಿರುತ್ತದೆ. ಆ ಮನ್ಸಸ್ಸಿನಲ್ಲಿ ಅನೇಕ ರೀತಿಯ ಪ್ರತಿಭೆಗಳು ಅಂತರ್ಗತವಾಗಿರುತ್ತವೆ. ಮಕ್ಕಳಲ್ಲಿ ಯಾವ ಯಾವ ರೀತಿ ಪಾಂಡಿತ್ಯ ಇದೆಯೋ ಗೊತ್ತಿಲ್ಲ ಅಂತಹದನ್ನು ಹೊರ ತೆಗೆಯುವ ಕೆಲಸವನ್ನು ಮಾಡಬೇಕು ಎಂದು ಸಲಹೆ ನೀಡಿದರು.
ತೀರ್ಪುಗಾರರು ಯಾವುದೇ ತಾರತಮ್ಯ ಮಾಡದೇ ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸಿ ಸೂಕ್ತವಾದ ತೀರ್ಪು ನೀಡಬೇಕು.ಆ ಮೂಲಕ ಒಳ್ಳೆಯ ಪ್ರತಿಭೆಯನ್ನು ಜಿಲ್ಲಾ ಮಟ್ಟಕ್ಕೆ ಕಳುಹಿಸಬೇಕು. ಪ್ರತಿ ವರ್ಷವೂ ಯಾದಗಿರಿಯಿಂದ ರಾಜ್ಯಮಟ್ಟಕ್ಕೆ ಆಯ್ಕೆಯಾಗುವ ವಿದ್ಯಾರ್ಥಿಗಳು ಸುರಪುರ ತಾಲೂಕಿನವರೇ ಹೆಚ್ಚಾಗಿರುತ್ತಾರೆ. ಈ ಬಾರಿಯು ಸಹ ಜಿಲ್ಲಾ ಹಂತಕ್ಕೆ ಕಳಿಸಿ. ಅಲ್ಲಿ ಸಾಧನೆ ಮಾಡಿ ರಾಜ್ಯಮಟ್ಟಕ್ಕೆ ಹೋಗಿ ಅಲ್ಲಿಯೂ ಪ್ರಥಮ ಸ್ಥಾನ ಗಳಿಸಬೇಕು ಎಂದು ಸಲಹೆ ನೀಡಿದರು.
ತಕ್ಷಶಿಲಾ ಇಂಟರ್‌ನ್ಯಾಷನಲ್ ಸ್ಕೂಲ್‌ನ ಅಧ್ಯಕ್ಷೆ ಅಂಬಿಕಾ ಯನಗುಂಟಿ ಮಾತನಾಡಿ, ಮಕ್ಕಳಲ್ಲಿ ಅಡಗಿರುವ ಪ್ರತಿಭೆಯು ಕಾರಂಜಿ ರೀತಿಯಲ್ಲಿ ಚಿಮ್ಮಬೇಕು. ಕಲೆಗೆ ಬಡತನ ಇಲ್ಲ. ನಿಮ್ಮೊಳಗಿನ ಕಲೆ ಪ್ರದರ್ಶನಕ್ಕೆ ಇದು ಸುಸಮಯವಾಗಿದೆ. ಕಲಿಕೆಯ ಜತೆಗೆ ಕಲೆಯು ಸೇರಬೇಕು. ಸೋಲು-ಗೆಲುವು ಸಹಜ ಭಾಗವಹಿಸುವಿಕೆ ತುಂಬಾ ಮುಖ್ಯವಾಗಿದೆ. ಗೆದ್ದವರು ಹಿಗ್ಗದೆ, ಸೋತವರು ಕುಗ್ಗದೆ ಎರಡನ್ನು ಸಮಾನವಾಗಿ ಸ್ವೀಕರಿಸಬೇಕು ಇಬ್ಬರೂ ಜತೆಯಲ್ಲಿ ನಡೆದುಕೊಂಡು ಮುಂದೆ ಸಾಗಬೇಕು. ಹಿಂದೆ ಗುರು, ಮುಂದೆ ಗುರಿ ಮತ್ತು ಛಲ ಇದ್ದರೆ ಯಶಸ್ಸು ನಿಶ್ಚಯ. ಯಾರು ಸಹ ನಿಮ್ಮನ್ನು ತಡೆಯಲು ಸಾಧ್ಯವಿಲ್ಲ. ಇಲ್ಲಿ ಪ್ರಥಮ ಸ್ಥಾನ ಪಡೆದು ಮಕ್ಕಳು ಜಿಲ್ಲೆಯಲ್ಲಿಯೂ ಮಿಂಚಲಿ ಎಂದು ಆಶಿಸಿದ ಅವರು, ನಮ್ಮ ಶಾಲೆಯಲ್ಲಿ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಆಯೋಜಿಸಿರುವುದು ಅತೀವ ಸಂತೋಷವಾಗಿದೆ ಎಂದು ತಿಳಿಸಿದರು.
ಯಾದಗಿರಿ ಜಿಲ್ಲಾ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ರಾಜಾ ಕುಮಾರ ನಾಯಕ ಉದ್ಘಾಟಿಸಿದರು. ಪ್ರತಿಭಾ ಕಾರಂಜಿ ನೋಡಲ್ ಅಧಿಕಾರಿ ಸೋಮಶೇಖರ ಬಾಕ್ಲಿ, ಇಸಿಒ ಶರಣಬಸವ ಗಚ್ಚಿನಮನಿ, ಸರಕಾರಿ ನೌಕರರ ಸಂಘದ ಅಧ್ಯಕ್ಷ ರಾಮಕೃಷ್ಣ ಕಲಬುರಗಿ, ಪ್ರಮುಖರಾದ ಯಂಕನಗೌಡ ಅರಕೇರಿ, ಗೋವಿಂದ್ ತನಿಕೇದಾರ, ಕೊಟ್ರೇಶ್ ಕೋಳೂರು, ಚುನ್ನು ಪಟೇಲ್, ಗೋಪಾಲ ನಾಯಕ ಜಹಗೀರದಾರ್, ಸಾಬರೆಡ್ಡಿ ಇಟಗಿ, ಶರಣು ಪಾಕರೆಡ್ಡಿ, ಬಸವರಾಜ್ ಅಂಬಿಗೇರ್, ಹಾಜಿ ಮಲ್ಲಂಗ್, ಸೋಮರಡ್ಡಿ ಮಂಗ್ಯಾಳ, ಮಹಾಂತೇಶ ಗೋನಾಲ ಸೇರಿ ಇನ್ನಿತರರು ವೇದಿಕೆಯಲ್ಲಿದ್ದರು. ಸರಕಾರಿ ಪ್ರೌಢಶಾಲೆ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಖಾದರ್ ಪಟೇಲ್ ಪ್ರಾಸ್ತಾವಿಕ ಮಾತನಾಡಿದರು. ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಪ್ರಧಾನ ಕಾರ್ಯದರ್ಶಿ ಶರಣಬಸವ ಗೋನಾಲ ಸ್ವಾಗತಿಸಿದರು. ರಾಜಶೇಖರ ದೇಸಾಯಿ ನಿರೂಪಿಸಿದರು. ದೊಡ್ಡ ಮಲ್ಲಿಕಾರ್ಜುನ ಹುದ್ದಾರ ವಂದಿಸಿದರು.
ಸಗರನಾಡು ಕೀರ್ತಿ ಹೆಚ್ಚಿಸಿದ ಬಿಗ್ ಬಾಸ್ ಸ್ಪರ್ಧಿ ಮಲ್ಲಮ್ಮ
ಇತ್ತೀಚೆಗೆ ಖಾಸಗಿ ವಾಹಿನಿ ಬಿಗ್ ಬಾಸ್‌ನಲ್ಲಿ ನಮ್ಮ ತಾಲೂಕಿನವರಾದ ಮಲ್ಲಮ್ಮ ಭಾಗವಹಿಸಿ ಇಡೀ ರಾಜ್ಯದ ಗಮನಸೆಳೆದು ನಮ್ಮ ತಾಲೂಕಿನ ಹಾಗೂ ಸಗರನಾಡಿನ ಕೀರ್ತಿ ಹೆಚ್ಚಿಸಿದಳು. ಆಕೆ ಅನಕ್ಷರಸ್ಥೆ ಆದರೆ ಆಕೆಯ ವಾಕ್ಚಾತುರ್ಯ ಅದ್ಬುತ. ತನ್ನ ಮಾತುಗಾರಿಕೆ ಕಲೆಯಿಂದ ಎಲ್ಲರನ್ನೂ ರಂಜಿಸಿದಳು. ಅದೇ ರೀತಿ ಯಾವ ಮಕ್ಕಳಲ್ಲಿ ಯಾವ ರೀತಿಯ ಪಾಂಡಿತ್ಯ ಇರುತ್ತದೆಯೋ ಗೊತ್ತಿಲ್ಲ. ಅಂತಹದನ್ನು ಹೊರತೆಗೆಯುವ ಕೆಲಸವಾಗಬೇಕು. ಮಕ್ಕಳಲ್ಲಿರುವ ಪ್ರತಿಭೆ ಹೊರಹಾಕಿದರೆ ಅವರು ಸಹ ಟಿವಿಯಲ್ಲಿ ಮಿಂಚಬಹುದು. ಅದು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಸರಿಗಮಪ, ಕಾಮಿಟಿ ಕಿಲಾಡಿ ಅಥವಾ ಬಿಗ್ ಬಾಸ್ ಆಗಿರಬಹುದು. ಅಲ್ಲಿಗೆ ತಯಾರು ಮಾಡುವ ಯಂತ್ರಗಳು ಶಿಕ್ಷಕರಾಬೇಕು.ಆಗ ಸುರಪುರ-ಹುಣಸಗಿ ತಾಲೂಕುಗಳ ಕೀರ್ತಿ ಕರ್ನಾಟಕದಾದ್ಯಂತ ಪಸರಿಸುತ್ತದೆ ಇದಕ್ಕೆ ಶಿಕ್ಷಕರು ಕಂಕಣಬದ್ಧರಾಗಬೇಕು. ತಕ್ಷಶಿಲಾ ಶಾಲೆಯಲ್ಲಿ ಇಂದು ಹಬ್ಬದ ವಾತಾವರಣ ನಿರ್ಮಾಣವಾಗಿದೆ. ತಾಲೂಕು ಮಟ್ಟದ ಕಾರಂಜಿ ಆಯೋಜನೆಗೆ ಶಾಲೆಯ ಮುಖ್ಯಸ್ಥರು ಎಲ್ಲ ರೀತಿಯ ಸಹಕಾರ ನೀಡಿರುತ್ತಾರೆ. ಅವರ ಸಹಕಾರ ಮನೋಭಾವ ಪ್ರಶಂಸನೀಯ ಎಂದು ಬಿಇಒ ಯಲ್ಲಪ್ಪ ಕಾಡ್ಲೂರ ತಿಳಿಸಿದರು.

















