ಸಕಲ ಜೀವರಾಶಿಯನ್ನು ಮೋಡಿ ಮಾಡುವ ಶಕ್ತಿ ಸಂಗೀತಕ್ಕಿದೆ; ಶರಣಪ್ಪ ಗುಮ್ಮಾ


ಸುರಪುರ ಟೈಮ್ಸ್ ವಾರ್ತೆ
ಸುರಪುರ : ಸಂಗೀತ ಸರ್ವರಿಗೂ ಸಂತೋಷ ನೀಡುತ್ತದೆ. ಸಂಗೀತಕ್ಕೆ ಸಮ್ಮೋಹನ ಗೊಳಿಸುವ ಶಕ್ತಿ ಇದೆ. ಸಂಗೀತ ಕಲೆಗೆ ಸಕಲ ಜೀವರಾಶಿಯನ್ನು ಮೋಡಿ ಮಾಡುವ ಶಕ್ತಿಯಿದೆ ಎಂದು ದೇವಾಂಗ ಸಮಾಜದ ಅಧ್ಯಕ್ಷ ಶರಣಪ್ಪ ಗುಮ್ಮಾ ಹೇಳಿದರು.
ಸಮೀಪದ ರಂಗಂಪೇಟೆಯ ಈಶ್ವರಿ ಬನಶಂಕರಿ ದೇವಸ್ಥಾನದ ಆವರಣದಲ್ಲಿ ಎಳ್ಳಮಾವಾಸ್ಯೆ ನಿಮಿತ್ತವಾಗಿ ರುಕ್ಮಾಪುರದ ಸಗರನಾಡು ಕಲಾ ವೇದಿಕೆ ಹಮ್ಮಿಕೊಂಡಿದ್ದ ಸ್ವರ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಂಗೀತ ಮನುಷ್ಯನಿಗೆ ಆನಂದ ನೀಡುತ್ತದೆ. ಅಲ್ಲದೇ, ಆತನಲ್ಲಿ ಒಳ್ಳೆಯ ವಿಚಾರಗಳು ಮೂಡುವಂತೆ ಮಾಡುತ್ತದೆ. ಸಂಗೀತವನ್ನು, ಸಂಗೀತ ಪ್ರತಿಭೆಗಳನ್ನು ಪೋಷಿಸಿ ಬೆಳೆಸಬೇಕು ಎಂದರು.
ಪಿಎಸ್‌ಐ ಕೃಷ್ಣಾ ಸುಬೇದಾರ್ ಮಾತನಾಡಿ, ಮನುಷ್ಯನಿಗೆ ಸಂಗೀತ, ಕಲೆ, ಸಾಹಿತ್ಯ, ನೃತ್ಯ ಅವಶ್ಯಕವಾಗಿ ಬೇಕು. ಸಂಗೀತ, ಸಾಹಿತ್ಯ, ಕಲೆಗಳು ಮಾನವರನ್ನು ಸಂಸ್ಕಾರವಂತರನ್ನಾಗಿ ಮಾಡಲಿವೆ. ಮನಸ್ಸಿನ ನೋವನ್ನು ದೂರ ಮಾಡುವ ಶಕ್ತಿ ಸಂಗೀತ ಕ್ಷೇತ್ರಕ್ಕೆ ಇದೆ ಎಂದು ತಿಳಿಸಿದರು. ಆಕಾಶವಾಣಿ ಕಲಾವಿದ ಶಿವಶರಣಯ್ಯಸ್ವಾಮಿ ಬಳ್ಮ್ಳಂಡಗಿ ಮಠ ಅಧ್ಯಕ್ಷತೆ ವಹಿಸಿದ್ದರು. ದತ್ತುರಾವ್ ಕುಲಕರ್ಣಿ ಮುಖ್ಯ ಅತಿಥಿಗಳಾಗಿದ್ದರು.
ದೇವಸ್ಥಾನದ ಅರ್ಚಕ ನಿಂಗಯ್ಯಸ್ವಾಮಿ ಹಿರೇಮಠ, ನಿಂಗಣ್ಣ ರಾಯಚೂರಕರ್, ಪ್ರಾಣೇಶರಾವ್ ಕುಲಕರ್ಣಿ, ಚನ್ನಪ್ಪ ಗುಂಡಾನೂರ್, ಸೋಮಶೇಖರ ಶಾಬಾದಿ ಇದ್ದರು. ಸಂಗೀತ ಕಲಾವಿದರಾದ ನರಸಿಂಹ ಬಂಡಿ, ಉಮೇಶ್ ಯಾದವ, ಜ್ಞಾನೇಶ್ವರ ಪಾಣಿಭಾತೆ, ಸುರೇಶ್ ಅಂಬೂರೆ, ಮಹೇಶ್ ಗೋಗಿ, ಶಿವಶಂಕರ ಅಲ್ಲೂರು, ಮಾನಪ್ಪ ಭಜಂತ್ರಿ, ಜ್ಞಾನೇಶ್ವರ ಪಾಣಿಭಾತೆ, ಇಸಾಕ್ ಮೊಹ್ಮದ್, ಗೋಪಾಲ್ ಗುಳೇದ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಎಳ್ಳಮವಾಸ್ಯೆಯ ಸ್ವರ ಸಂಗೀತದ ನಿನಾದ ನೆರದಿದ್ದ ಸಭಕರಿಗೆ ಆನಂದವನ್ನುಂಟು ಮಾಡಿತು. ರಮೇಶ್ ಕುಲಕರ್ಣಿ ನಿರೂಪಿಸಿದರು. ಸಗರನಾಡು ಕಲಾ ವೇದಿಕೆ ಅಧ್ಯಕ್ಷ ರಾಜಶೇಖರ ಗೆಜ್ಜೆ ರುಕ್ಮಾಪುರ ವಂದಿಸಿದರು.

ಫೋಟೊ : ಸುರಪುರ ಸಮೀಪದ ರಂಗಂಪೇಟೆಯಲ್ಲಿ ಸ್ವರ ಸಂಗೀತ ಕಾರ್ಯಕ್ರಮದ ಉದ್ಘಾಟನೆ ಜರುಗಿತು.

Leave a Reply

Your email address will not be published. Required fields are marked *

error: Content is protected !!