ಐದು ವರ್ಷದೊಳಗಿನ ಪ್ರತಿಯೊಬ್ಬ ಮಗುವಿಗೂ ಪೋಲಿಯೋ ಹನಿ ನೀಡುವುದು ಅತ್ಯಂತ ಅಗತ್ಯ; ಹೆಚ್.ಎ.ಸರಕಾವಸ್

ಸುರಪುರ ಟೈಮ್ಸ್ ವಾರ್ತೆ
ಸುರಪುರ : ಭಾರತ ಪೋಲಿಯೊ ಮುಕ್ತ ರಾಷ್ಟ್ರವಾಗಿದ್ದರೂ ನೆರೆಯ ರಾಷ್ಟ್ರಗಳಲ್ಲಿ ಪೋಲಿಯೊ ಪ್ರಕರಣಗಳು ವರದಿಯಾಗುತ್ತಿವೆ. ಹೀಗಾಗಿ ಮುಂಜಾಗ್ರತೆ ಕ್ರಮವಾಗಿ 5 ವರ್ಷದೊಳಗಿನ ಪ್ರತಿಯೋಬ್ಬ ಮಗುವಿಗೂ ಪೋಲಿಯೊ  ಹನಿ ನೀಡುವುದು ಅತ್ಯಂತ ಅಗತ್ಯವಾಗಿದೆ.ಪೋಷಕರು ತಪ್ಪದೇ ಪೋಲಿಯೋ ಹನಿ ಹಾಕಿಸಬೇಕು ಎಂದು ತಹಸೀಲ್ದಾರ್ ಹೆಚ್.ಎ.ಸರಕಾವಸ್ ಹೇಳಿದರು.
ಇಲ್ಲಿಯ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪಲ್ಸ್ ಪೋಲಿಯೊ ಅಭಿಯಾನದಲ್ಲಿ ಮಾತನಾಡಿದ ಅವರು, ಪೋಲಿಯೊ ಮುಕ್ತ ದೇಶ ನಿರ್ಮಿಸುವಲ್ಲಿ ಸರಕಾರಗಳ ಕಾರ್ಯ ಯಶಸ್ವಿಯಾಗಿದೆ. ಇದು ಪ್ರತಿಯೊಬ್ಬ ಭಾರತೀಯ ಹೆಮ್ಮೆ ಪಡುವಂಥದ್ದು, ಜೊತೆಗೆ ಮುಂಜಾಗ್ರತೆ ಕ್ರಮವಾಗಿ ಲಸಿಕೆ ಹಾಕುವಲ್ಲಿ ಪಾಲಕರು ಹಿಂದೇಟು ಹಾಕಬಾರದು. ನಿಮ್ಮ ಮಗುವಿಗೆ ಪ್ರತಿ ಬಾರಿಯೂ 2 ಹನಿ ಪೋಲಿಯೊ ಲಸಿಕೆ ಹಾಕಿಸಿ, ಸಂಪೂರ್ಣ ರಕ್ಷಣೆಯನ್ನು ಖಚಿತ ಪಡಿಸಿಕೊಳ್ಳಿ. ಪೋಲಿಯೊ ವಿರುದ್ಧ ಭಾರತ ಸಾಧಿಸಿರುವ ಗೆಲವನ್ನು ಮುಂದುವರಿಸಲು ಸರಕಾರ ಮತ್ತು ಆರೋಗ್ಯ ಇಲಾಖೆ ಜತೆ ಕೈ ಜೋಡಿಸಬೇಕು ಎಂದರು.
ಪ್ರತಿ ವರ್ಷವೂ ಆರೋಗ್ಯ ಇಲಾಖೆಯ ಜೊತೆಗೆ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಪ್ರತಿಯೊಂದು ಮನೆ ಮನೆಗೂ ತೆರಳಿ ಮಕ್ಕಳಿಗೆ ಪಲ್ಸ್ ಪೋಲಿಯೊ ಲಸಿಕೆ ಹಾಕಲು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಹಾಗೆಯೇ ಮಕ್ಕಳ ಪೋಷಕರೂ ಮಕ್ಕಳ ಬಗ್ಗೆ ಕಾಳಜಿ ವಹಿಸಿರುವುದು ಶ್ಲಾಘನೀಯ ಎಂದು ಹೇಳಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಆರ್.ವಿ.ನಾಯಕ ಪ್ರಾಸ್ತಾವಿಕ ಮಾತನಾಡಿದರು. ಪಿಹೆಚ್‌ಐ ರಾಜ್ಯ ನೋಡಲ್ ಅಧಿಕಾರಿ ಡಾ.ರಮೇಶ್, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಪ್ರಕಾಶ್ ಗುತ್ತೇದಾರ್, ಅಂಗನವಾಡಿ ಮೇಲ್ವಿಚಾರಕಿಯರಾದ ಪದ್ಮಾ ನಾಯಕ, ಚಂದ್ರಲೀಲಾ ನಿಂಬೂರ, ಡಾ.ಹರ್ಷವರ್ಧನ್ ರಫಗಾರ್, ಇತರೆ ವೈದ್ಯರು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಪೋಷಕರು, ಸಾರ್ವಜನಿಕರು ಇದ್ದರು.
ಬಾಕ್ಸ್
ಬೂತ್ ಡೇ ಗುರಿ ಸಾಧನೆ ಪ್ರಯತ್ನ
ಕ್ಷೇತ್ರದಲ್ಲಿ ಎಲ್ಲಾ ಇಲಾಖೆಗಳ ಸಹಯೋಗದಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ 50766 ನಗರ ಪ್ರದೇಶದಲ್ಲಿ 7035 ಒಟ್ಟು 57801ಮಕ್ಕಳಿಗೆ (0-5ವರ್ಷದೊಳಗಿನ) ಪೋಲಿಯೊ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಇಂದು ಬೂತ್ ಡೇ ಯಲ್ಲಿ ಶೇ.ನೂರರಷ್ಟು ಗುರಿ ಸಾಧನೆಗೆ ಪ್ರಯತ್ನಿಸಲಾಗುತ್ತಿದೆ. ಲಸಿಕೆಯಿಂದ ಬಿಟ್ಟು ಹೋದ ಮಕ್ಕಳಿಗೆ ಬುಧವಾರದವರೆಗೂ ಮನೆ ಮನೆಗೆ ತೆರಳಿ ಲಸಿಕೆ ಹಾಕಲಾಗುವುದು. 2014 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ನಮ್ಮ ದೇಶವನ್ನು ಪೋಲಿಯೊ ಮುಕ್ತ ರಾಷ್ಟ್ರ ಎಂದು ಘೋಷಿಸಿರುತ್ತದೆ. ಪಕ್ಕದ ಪಾಕಿಸ್ತಾನ್ ಮತ್ತು ಅಪಫಾನಿಸ್ತಾನ್ ದೇಶಗಳಲ್ಲಿ ಇನ್ನೂ ಕೂಡ ಅಲ್ಲಿ ಪೋಲಿಯೊ ಕೇಸ್‌ಗಳು ಕಂಡುಬರುತ್ತಿವೆ. ಆ ಕಾರಣದಿಂದ ಇಲ್ಲಿಯೂ ಲಸಿಕೆ ಮುಂದುವರೆಸಲಾಗಿದೆ ಎಂದ ಅವರು, ಮಕ್ಕಳಿಗೆ 9 ಮಾರಕ ರೋಗಗಳಿಂದ ಮುಕ್ತ ಗೊಳಿಸಬೇಕು. ಇದಕ್ಕಾಗಿ ಎಲ್ಲಾ ಲಸಿಕೆಗಳನ್ನು ಸಮಯದ ಪ್ರಕಾರ ಕೊಡಿಸಬೇಕು. ಅಂಗನವಾಡಿ, ಆಶಾ ಕಾಯಕರ್ತೆಯರು, ಆರೋಗ್ಯ ಇಲಾಖೆಯವರು ಪ್ರತಿ ಮಂಗಳವಾರ-ಗುರುವಾರ ಹಳ್ಳಿ ಹಳ್ಳಿಗೆ ಹೋಗಿ ವ್ಯಾಕ್ಸಿನೇಷನ್ ಮಾಡುತ್ತಾರೆ. ದಯವಿಟ್ಟು ತಾಯಂದಿರು ತಮ್ಮ ಮಕ್ಕಳಿಗೆ ವ್ಯಾಕ್ಸಿನೇಷನ್ ಮಾಡಿಸಬೇಕು ಎಂದು ಸಲಹೆ ನೀಡಿದರು.

ಫೋಟೊ : ಸುರಪುರ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೊ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

Leave a Reply

Your email address will not be published. Required fields are marked *

error: Content is protected !!