ಪುರಾಣ ಪ್ರವಚನ ಆಲಿಸಿದರೆ ಸುವಿಚಾರ ಪ್ರಾಪ್ತಿ :ಸಿದ್ಧರತ್ನ ಮದಗೊಂಡೇಶ್ವರ ಮಹಾರಾಜರು

ಸುರಪುರ ಟೈಮ್ಸ್ ವಾರ್ತೆ

ಸುರಪುರ:-ಪುರಾಣ ಪ್ರವಚನ ಆಲಿಸುವುದರಿಂದ ಒಳ್ಳೆಯ ವಿಚಾರಗಳು ಮೂಡುತ್ತವೆ. ಭಗವಂತನ, ಶರಣರ, ಮಹಾತ್ಮರ ಜೀವನ ಚರಿತ್ರೆಗಳನ್ನು ಕೇಳುವುದರಿಂದ ವ್ಯಕ್ತಿತ್ವ ಉನ್ನತಿಗೊಳ್ಳುತ್ತದೆ ಎಂದು ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟ ತಾಲ್ಲೂಕಿನ ಬಸವನ ಸಂಗೊಳಗಿಯ ಶ್ರೀ ಅಭಿನವ ಸಿದ್ಧರತ್ನ ಮದಗೊಂಡೇಶ್ವರ ಮಹಾರಾಜರು ಹೇಳಿದರು.
ಪಟ್ಟಣ ಸಮೀಪದ ನಗನೂರ ಗ್ರಾಮದಲ್ಲಿ ಭಾನುವಾರ ಪವಾಡ ಪುರುಷ ಲಿಂ. ಕರೆಪ್ಪ ತಾತನವರ ೧೫ನೇ ವರ್ಷದ ಪುಣ್ಯಾರಾಧನೆ ಅಂಗವಾಗಿ ಹಮ್ಮಿಕೊಂಡಿದ್ದ ಶಿವಶಿದ್ಧ ಭೀರಲಿಂಗೇಶ್ವರರ ಮಹಾಪುರಾಣ ಕಾರ್ಯಕ್ರಮದಲ್ಲಿ ಪ್ರವಚನ ನೀಡಿ, ಪುರಾಣವೆಂದರೆ ಜನರನ್ನು ಭಕ್ತಿ ಮಾರ್ಗದಲ್ಲಿ ನಡೆಸುವುದರ ಜತೆಗೆ ಆತನಲ್ಲಿಯ ದುರ್ಗಣಗಳನ್ನು ತೊಡೆದು ಹಾಕುವುದೇ ಆಗಿದೆ. ನಿತ್ಯದ ಬದುಕಿಗೆ ಉತ್ತಮ ಸಂಸ್ಕಾರ ದೊರೆಯಲು ಪುರಾಣದಂತಹ ಆದರ್ಶ ಕಥೆಗಳು ಬಹಳಷ್ಟು ಅಗತ್ಯವಾಗಿವೆ ಎಂದರು.
ಮಹಾತ್ಮರ ಜೀವನ ಶೈಲಿಯನ್ನು ನಮ್ಮಲ್ಲಿ ಅಳವಡಿಸಿಕೊಂಡು, ಅವರ ಆಚಾರ-ವಿಚಾರ ಅನುಸರಿಸಿ ಮುನ್ನಡೆದರೆ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದ ಅವರು, ಮನುಕುಲದ ಉದ್ಧಾರಕ್ಕಾಗಿ ಭಕ್ತರ ಏಳಿಗೆಗಾಗಿ ಹಗಲಿರುಳು ಶ್ರಮಿಸಿದ ಮಹತ್ಮರ ಸಾಲಿನಲ್ಲಿ ಪವಾಡ ಪುರುಷ ಲಿಂ. ಕರೆಪ್ಪ ತಾತನವರು ಒಬ್ಬರು. ಅಂಥ ಮಹಾತ್ಮರ ಪುಣ್ಯಾರಾಧನೆಯ ಕಾರ್ಯಕ್ರಮದಲ್ಲಿ ಭಕ್ತರು ಭಾಗವಹಿಸಿರುವುದು ಪುಣ್ಯದ ಕೆಲಸ ಎಂದು ಹೇಳಿದರು.
ಶಿವಶಿದ್ಧ ಶ್ರೀ ಭೀರಲೀಂಗೇಶ್ವರರ ಮಹಾಪುರಾಣದಲ್ಲಿ ಭಾನುವಾರ ಸಂಜೆ ಶಿವಶಿದ್ಧ ಶ್ರೀ ಭೀರಲಿಂಗೇಶ್ವರರ ತೊಟ್ಟಿಲೋತ್ಸವ ಸಂಭ್ರಮದಿAದ ಜರುಗಿತು. ಷ.ಬ್ರ. ಶ್ರೀ ಸೂಗೂರೇಶ್ವರ ಶಿವಾಚಾರ್ಯರು, ಶ್ರೀ ಶರಣಬಸವೇಶ್ವರ ದಾಸೋಹ ಮಠದ ಪೂಜ್ಯ ಶ್ರೀ ಶರಣಪ್ಪ ಶರಣರು ದೇವರಮನಿ, ಶ್ರೀ ವೀರಯ್ಯಸ್ವಾಮಿ ಸ್ಥಾವರಮಠ ಸಾನಿಧ್ಯ ವಹಿಸಿದ್ದರು. ಕಾರ್ಯಕ್ರಮದ ನೇತೃತ್ವವನ್ನು ಶ್ರೀ ನಗರೇಶ್ವರ ದೇವಸ್ಥಾನದ ಪಟ್ಟಾಧಿಕಾರಿಗಳಾದ ಶ್ರೀ ಖಂಡಪ್ಪ ತಾತನವರು, ಶ್ರೀ ದೊಡ್ಡಪ್ಪ ತಾತನವರು ವಹಿಸಿದ್ದರು. ಯಾಳಗಿಯ ಶ್ರೀ ಸಿದ್ದಪ್ಪ ಪೂಜಾರಿ, ಕಕ್ಕಸಗೇರಾದ ಶ್ರೀ ರೇವಣಸಿದ್ದೇಶ್ವರ ಪೂಜಾರಿ, ಕಾಡಮಗೇರಾದ ಶ್ರೀ ಕೆಂಚಪ್ಪ ಪೂಜಾರಿ, ಕೆಂಭಾವಿಯ ಶ್ರೀ ಭೀರಪ್ಪ ಪೂಜಾರಿ, ನಗನೂರದ ಶ್ರೀ ಸಿದ್ದಪ್ಪ ಪೂಜಾರಿ ಸೇರಿದಂತೆ ನಗನೂರ, ಖಾನಪೂರ ಹಾಗೂ ಸುತ್ತಲಿನ ಗ್ರಾಮದ ಸದ್ಭಕ್ತರು ಭಾಗವಹಿಸಿದ್ದರು.
ಖ್ಯಾತ ಸಂಗೀತ ಕಲಾವಿದ ಬಸವರಾಜ ಭಂಟನೂರ, ತಬಲವಾದಕ ಯಮನೇಶ ಯಾಳಗಿ, ಅಮರೇಶ ನಗನೂರ ಅವರು ಸಂಗೀತ ಸೇವೆ ನೀಡಿದರು. ಶಿಕ್ಷಕರಾದ ಸಿದ್ದನಗೌಡ ಗೂಗಲ್ ನಿರೂಪಿಸಿದರು. ಶರಣಕುಮಾರ ಆಲ್ಯಾಳ ಸ್ವಾಗತಿಸಿ, ವಂದಿಸಿದರು.

Leave a Reply

Your email address will not be published. Required fields are marked *

error: Content is protected !!