ಉಕ್ಕಿನಾಳ ಭಕ್ತರಿಂದ ಶ್ರೀ ಖಂಡಪ್ಪ ತಾತಾನವರಿಗೆ ತುಲಾಭಾರ ಭಕ್ತಿ ಸೇವೆ
ಸುರಪುರ ಟೈಮ್ಸ್ ವಾರ್ತೆ
ಸುರಪುರ:-ದೇವರು, ಧರ್ಮದಲ್ಲಿ ನಂಬಿಕೆಯಿರಿಸಿದ ಹೃದಯ ಶ್ರೀಮಂತಿಕೆಯುಳ್ಳ ನಗನೂರು, ಖಾನಾಪುರ ಹಾಗೂ ಸುತ್ತಲಿನ ಗ್ರಾಮದ ಭಕ್ತರ ಸೇವೆ ಮತ್ತು ದಾಸೋಹ ಭಾವನೆ ಶ್ರೇಷ್ಠ ಭಕ್ತಿಯಿಂದ ಕೂಡಿದೆ ಎಂದು ಶ್ರೀ ನಗರೇಶ್ವರ ದೇವಸ್ಥಾನದ ಪಟ್ಟಾಧಿಕಾರಿ ಪೂಜ್ಯ ಶ್ರೀ ಖಂಡಪ್ಪ ತಾತನವರು ಬಣ್ಣಿಸಿದರು.
ಪಟ್ಟಣ ಸಮೀಪದ ನಗನೂರ ಗ್ರಾಮದಲ್ಲಿ ಪವಾಡ ಪುರುಷ ಲಿಂ. ಪೂಜ್ಯ ಕರೆಪ್ಪ ತಾತನವರ 15ನೇ ವರ್ಷದ ಪುಣ್ಯಾರಾಧನೆ ಅಂಗವಾಗಿ ಹಮ್ಮಿಕೊಂಡಿದ್ದ ಶಿವಶಿದ್ಧ ಶ್ರೀ ಭೀರಲಿಂಗೇಶ್ವರರ
ಮಹಾಪುರಾಣ-ಪ್ರವಚನ ಕಾರ್ಯಕ್ರಮದಲ್ಲಿ ಉಕ್ಕಿನಾಳ ಗ್ರಾಮದ ಸದ್ಭಕ್ತರಾದ ಮಲ್ಲನಗೌಡ ಹಳ್ಳೆಪ್ಪಗೌಡ ಪೊಲೀಸ್ ಪಾಟೀಲ ಅವರಿಂದ ನಾಣ್ಯಗಳಿಂದ ತುಲಾಭಾರ ಸೇವೆ ಸ್ವೀಕರಿಸಿ ಅವರು ಆಶೀರ್ವಚನ ನೀಡಿದರು.
ಪ್ರವಚನ ಹಾಗೂ ಪುರಾಣಗಳು ಮನುಷ್ಯನ ವ್ಯಕ್ತಿತ್ವನ್ನು ಬದಲಾಯಿಸಿ ಸನ್ಮಾರ್ಗದಿಂದ ಸಾಗಲು ನೆರವಾಗುತ್ತವೆ. ಪ್ರತಿಯೊಬ್ಬ ಮನುಷ್ಯರು ಸಂಸಾರಿಕ ಜೀವನದಲ್ಲಿ ಸಿಲುಕಿ ತೊಳಲಾಡುತ್ತಾರೆ. ಸಂಸಾರದ ತಾಪತ್ರಯ ಎನಿಸಿದಾಗ ಸಹಜವಾಗಿ ಬೇಸರ ಮೂಡುತ್ತದೆ. ಇಂತಹ ಬೇಸರ ದೂರ ಮಾಡಿ ಶಾಂತಿ, ಸಹನೆ, ತಾಳ್ಮೆ ಮೂಡಬೇಕಾದರೆ ಮಹಾತ್ಮರ ಪುರಾಣ-ಪ್ರವಚನ ಆಲಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶ್ರೀ ಅಭಿನವ ಸಿದ್ಧರತ್ನ ಮದಗೊಂಡೇಶ್ವರ ಮಹಾರಾಜರು, ಶ್ರೀ ನಗರೇಶ್ವರ ದೇವಸ್ಥಾನದ ಪಟ್ಟಾಧಿಕಾರಿ ಶ್ರೀ ದೊಡ್ಡಪ್ಪ ತಾತ, ಶ್ರೀ ಸಿದ್ದಪ್ಪ ಪೂಜಾರಿ, ಶ್ರೀ ರೇವಣಸಿದ್ದೇಶ್ವರ ಪೂಜಾರಿ, ಶ್ರೀ ಕೆಂಚಪ್ಪ ಪೂಜಾರಿ, ಶ್ರೀ ಭೀರಪ್ಪ ಪೂಜಾರಿ, ಶ್ರೀ ಸಿದ್ದಪ್ಪ ಪೂಜಾರಿ ಸೇರಿದಂತೆ ನಗನೂರ, ಖಾನಪೂರ ಹಾಗೂ ಸುತ್ತಲಿನ ಗ್ರಾಮದ ಸದ್ಭಕ್ತರು ಉಪಸ್ಥಿತರಿದ್ದರು.

