ಸಮಯಕ್ಕೆ ಸರಿಯಾಗಿ ಬಸ್ ಓಡಿಸಿ: ಬೋನ್ಹಾಳ ಶಾಲಾ ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
ಸುರಪುರ ಟೈಮ್ಸ್ ವಾರ್ತೆ
ಸುರಪುರ;ಸಮೀಪದ ಬೋನ್ಹಾಳ ಗ್ರಾಮಕ್ಕೆ ನಿಗದಿತ ಸಮಯಕ್ಕೆ ಬಸ್ ಸೌಕರ್ಯ ಇಲ್ಲದಿರುವುದನ್ನು ಖಂಡಿಸಿ,ಗ್ರಾಮದ ವಿದ್ಯಾರ್ಥಿಗಳು ಸೋಮವಾರ ಬಸ್ ನಿಲ್ದಾಣದಲ್ಲಿ ದಿಢೀರ್ ಪ್ರತಿಭಟನೆ ನಡೆಸಿದರು.
ಬಸ್ ಸೌಲಭ್ಯ ಕೊರತೆಯಿಂದಾಗಿ ಶಾಲಾ-ಕಾಲೇಜಿಗೆ ತೆರಳಲು ಅಡಚಣೆಯಾಗಿದೆ. ಅಲ್ಲದೇ ತರಗತಿಗೆ ಗೈರು ಹಾಜರಾಗುವಂತಾಗಿದ್ದು,ಅಭ್ಯಾಸಕ್ಕೆ ತೊಂದರೆ ಎದುರಾಗಿದೆ. ಈ ಮೊದಲು ಸರಿಯಾದ ಸಮಯಕ್ಕೆ ಇದ್ದ ಬಸ್‌ಗಳು ತೆಗೆದಿರುವುದುರಿಂದ ದಿನಾಲೂ ಶಾಲೆಗೆ ತಲುಪಲಾಗದೇ ಬಹಳಷ್ಟು ವಿದ್ಯಾರ್ಥಿಗಳು ಶಿಕ್ಷಣ ಅರ್ಧಕ್ಕೆ ಮೊಟಕುಗೊಳಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಾಲಾ-ಕಾಲೇಜುಗಳಲ್ಲಿ ಮುಂದಿನ ಅಭ್ಯಾಸಕ್ಕಾಗಿ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು, ಸಾರಿಗೆ ಸೌಕರ್ಯ ಕೊರತೆಯಿಂದ ನಾಲ್ಕಾರು ಕಿ.ಮೀ.ಕಾಲ್ನಡಿಗೆಯಲ್ಲೇ ಸಾಗಬೇಕಾದ ಅನಿವಾರ್ಯತೆ ಉಂಟಾಗಿದೆ. ವಾಹನ ಸೌಕರ್ಯದ ಸಮಸ್ಯೆಯಿಂದಾಗಿ ಪರೀಕ್ಷಾ ಸಂದರ್ಭದಲ್ಲಿ ಪಟ್ಟಣದಲ್ಲಿ ಬಾಡಿಗೆ ಮನೆ ಹಿಡಿದು ಪರೀಕ್ಷೆ ಬರೆಯುವಂತಾಗಿದೆ. ಸರಿಯಾದ ಸಮಯಕ್ಕೆ ತರಗತಿಗೆ ಹಾಜರಾಗದಿರುವುದರಿಂದ ಪರೀಕ್ಷೆಗಳಲ್ಲಿ ಕಡಿಮೆ ಅಂಕಗಳು ಬಂದಿದ್ದು, ಇದರಿಂದಾಗಿ ಪಾಲಕರು ಹಾಗೂ ಶಿಕ್ಷಕರ ಅಸಮಾಧಾನಕ್ಕೆ ಗುರಿಯಾಗಿದ್ದೇವೆ ಎಂದು ವಿದ್ಯಾರ್ಥಿಗಳು ದೂರಿದರು. ಸಾರಿಗೆ ಮತ್ತು ಶಿಕ್ಷಣ ಇಲಾಖೆಗಳು ವಿಳಂಬ ಮತ್ತು ಅವೈಜ್ಞಾನಿಕ ನೀತಿ, ನಿಯಮಗಳಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿನ ಮೇಲೆ ಬರೆ ಎಳೆಯುತ್ತಿವೆ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.
ಉಪಯೋಗವಿಲ್ಲ: ಸಾರಿಗೆ ಇಲಾಖೆಗೆ ಮುಂಗಡ ಹಣ ಪಾವತಿಸಿ ಬಸ್ ಪಾಸ್ ಪಡೆದಿದ್ದು, ಬಸ್ ಸೌಕರ್ಯ ಇಲ್ಲದಿರುವುದರಿಂದ ಉಪಯೋಗ ಇಲ್ಲದಂತಾಗಿದೆ. ಬಸ್ ಸೌಕರ್ಯಕ್ಕಾಗಿ ಹಲವಾರು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಗಮನಕ್ಕೆ ತಂದರೂ ಯಾವುದೇ ರೀತಿಯ ಪ್ರಗತಿಯಾಗಿಲ್ಲ. ಇದು ಇಲಾಖೆ ಅಧಿಕಾರಿಗಳ ಉದಾಸೀನಕ್ಕೆ ಸಾಕ್ಷಿಯಾಗಿದೆ ಎಂದು ವಿದ್ಯಾರ್ಥಿಗಳು ಹೇಳಿದರು.
ಒತ್ತಾಯ: ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಬೋನ್ಹಾಳ ಈ ಮೊದಲಿನಂತೆ ಶೀಘ್ರ ಸಾರಿಗೆ ಸೌಕರ್ಯ ಒದಗಿಸಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದರು. ಬೋನ್ಹಾಳ ಗ್ರಾಮದ ಯುವ ಮುಖಂಡ ಹಂಪಯ್ಯ ಹಿರೇಮಠ, ಬಸವರಾಜ ಮದ್ರಕಿ ಸೇರಿದಂತೆ ಕಾಲೇಜು ,ಪ್ರಾಥಮಿಕ, ಪ್ರೌಢ ಶಾಲೆಯ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರತಿಭಟನೆ ಸುದ್ದಿ ತಿಳಿದ ಸ್ಥಳಕ್ಕಾಗಮಿಸಿದ ಸಂಚಾರ ನಿಯಂತ್ರಕರು ವಿದ್ಯಾರ್ಥಿಗಳ ಜೊತೆ ಮಾತುಕತೆ ನಡೆಸಿ ಶೀಘ್ರದಲ್ಲೆ ಸರಿಯಾದ ಸಮಯಕ್ಕೆ ಬಸ್ ಓಡಾಟ ನಡೆಸುವುದಾಗಿ ಭರವಸೆ ನೀಡಿದ ನಂತರ ವಿದ್ಯಾರ್ಥಿಗಳು ಪ್ರತಿಭಟನೆ ಹಿಂಪಡೆದರು.




