ಶ್ರೀ ಮಹರ್ಷಿ ವಾಲ್ಮೀಕಿ ಸಂಘದಿಂದ ಗ್ರಂಥಾಲಯ, ಉದ್ಯಾನಕ್ಕೆ ಭೂಮಿ ಮಂಜೂರಿಗೆ ಒತ್ತಾಯ
ಸುರಪುರ ಟೈಮ್ಸ್ ವಾರ್ತೆ
ಸುರಪುರ : ಶ್ರೀ ಪ್ರಭು ಕಾಲೇಜು ಮೈದಾನದಲ್ಲಿನ ಸರಕಾರಿ ಸರ್ವೆ ನಂಬರ 7/1 ರ ಖಾರೀಜ್ ಖಾತಾ ಭೂಮಿ 6 ಎಕರೆ 15 ಗುಂಟೆ ಇದ್ದು ಸದರಿ ಭೂಮಿಯಲ್ಲಿ ಮಹರ್ಷಿ ವಾಲ್ಮೀಕಿ ಗ್ರಂಥಾಲಯ ಮತ್ತು ರಾಜಾ ನಾಲ್ವಡಿ ವೆಂಕಟಪ್ಪ ನಾಯಕ ಉದ್ಯಾನವನ ನಿರ್ಮಾಣಕ್ಕೆ 4 ಎಕರೆ ಜಮೀನನ್ನು ಮಂಜೂರಿ ಮಾಡುವಂತೆ ಒತ್ತಾಯಿಸಿ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘದವರು ತಹಸೀಲ್ ಕರ‍್ಯಾಲಯದ ಮುಂದೆ ಬುಧವಾರ ಪ್ರತಿಭಟಿಸಿದರು.
ನಂತರ ಸಂಘದ ಮುಖಂಡರು ಮಾತನಾಡಿ, ಸುರಪುರ ಎಸ್ಟಿ ಮೀಸಲು ವಿಧಾನಸಭಾ ಕ್ಷೇತ್ರವಾಗಿದೆ. ತಾಲೂಕಿನಲ್ಲಿ ವಾಲ್ಮೀಕಿ ಸಮುದಾಯ ಅತ್ಯಂತ ದೊಡ್ಡ ಸಮುದಾಯವಾಗಿದೆ. ಆದರೆ ಇಲ್ಲಿ ಸಮುದಾಯಕ್ಕೆ ಒಂದು ಸಮುದಾಯ ಭವನವಾಗಲಿ ಅಥವಾ ಗ್ರಂಥಾಲಯವಾಗಲಿ ಇಲ್ಲ. ಆದ್ದರಿಂದ ಶ್ರೀ ಪ್ರಭು ಕಾಲೇಜು ಮೈದಾನದಲ್ಲಿ ಸರಕಾರಿ ಸರ್ವೆ ನಂಬರ 7/1ರ ಖಾರೀಜ್ ಖಾತಾ ಭೂಮಿ 6 ಎಕರೆ ಇದ್ದು ಸದರಿ ಭೂಮಿಯಲ್ಲಿ 4 ಎಕರೆ ಜಮೀನನ್ನು ಮಹರ್ಷಿ ವಾಲ್ಮೀಕಿ ಗ್ರಂಥಾಲಯ ಮತ್ತು ರಾಜಾ ನಾಲ್ವಡಿ ವೆಂಕಟಪ್ಪ ನಾಯಕ ಉಧ್ಯಾನವನ ನಿರ್ಮಾಣಕ್ಕೆ ಮಂಜೂರಿ ಮಾಡಬೇಕು ಎಂದು ಒತ್ತಾಯಿಸಿದರು.
ಈ ಕುರಿತು ತಹಸೀಲ್ದಾರರಿಗೆ, ಜಿಲ್ಲಾಧಿಕಾರಿಗೆ, ಪೊಲೀಸ್ ವರಿಷ್ಠಾಧಿಕಾರಿಗೆ ಅನೇಕ ಬಾರಿ ಮನವಿ ಮಾಡಿದ್ದರು ಪ್ರಯೋಜನವಾಗಿಲ್ಲ. ಕೂಡಲೆ ಭೂಮಿ ಮಂಜೂರು ಮಾಡಬೇಕು. ನಿರ್ಲಕ್ಷ್ಯ ವಹಿಸಿದಲ್ಲಿ ಜ.5 ರಂದು ಸುರಪುರ ಬಂದ್ ಮಾಡಿ ಹಸನಾಪುರದ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ವೃತ್ತದಲ್ಲಿ ರಸ್ತೆ ತಡೆ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಚ್ಚರಿಸಿದರು. ತಹಸೀಲ್ದಾರ್ ಹೆಚ್.ಎ.ಸರಾವಸ್ ಅವರಿಗೆ ಮನವಿ ಸಲ್ಲಿಸಿದರು.
ಸಮಾಜದ ತಾಲೂಕು ಅಧ್ಯಕ್ಷ ಭೀಮನಗೌಡ ಲಕ್ಷ್ಮಿ, ಉಪಾಧ್ಯಕ್ಷ ಭೀಮುನಾಯಕ ಮಲ್ಲಿಬಾವಿ, ಕಾರ್ಯದರ್ಶಿ ನಾಗರಾಜ ಪ್ಯಾಪ್ಲಿ, ಮುಖಂಡರಾದ ರಮೇಶ ದೊರೆ ಆಳ್ದಾಳ, ಗಂಗಾಧರ ನಾಯಕ, ವೆಂಕಟೇಶ ಬೇಟೆಗಾರ, ರಂಗನಾಥ ದೊರೆ, ಸಂಜೀವ ನಾಯಕ, ಮೌನೇಶ ದಳಪತಿ, ಕನಕಾಚಲ ನಾಯಕ, ಈರಣ್ಣಗೌಡ ಪಾಟೀಲ್, ವೀರಭದ್ರ ಅಂತರಗಂಗಿ, ದೇವಿಂದ್ರಪ್ಪ ಸುರಪುರ, ಶ್ರೀನಿವಾಸ ನಾಯಕ, ವಿನೋದ ಲಕ್ಷ್ಮೀಪುರ, ಅಯ್ಯಣ್ಣ ಪಾಟೀಲ, ವಾಸುದೇವ ನಾಯಕ, ದೇವು ನಾಯಕ, ಮಲ್ಲು ನಾಯಕ, ಸಕ್ರೆಪ್ಪ ನಾಯಕ, ದುರ್ಗಪ್ಪ ಗುಡಿಯಾಳ, ಮಂಜುನಾಥ ಹೆಮನೂರ, ಸಿದ್ದಪ್ಪ ಹೆಮನೂರ, ರಾಜೇಂದ್ರ ಕವಡಿಮಟ್ಟಿ, ರಂಗನಾಥ ಬಿರಾದಾರ, ಹಣಮಂತ ಮಲ್ಲಿಬಾವಿ ಸೇರಿ ಇತರರಿದ್ದರು.
ಸಕ್ರಮಕ್ಕೆ ಅವಕಾಶವಿದೆ
ಸದರಿ ಭೂಮಿ ಸುರಪುರ ಸಂಸ್ಥಾನಕ್ಕೆ ಸೇರಿದ್ದಾಗಿದೆ. ಅವರು ಈ ಭೂಮಿಯನ್ನು ಆಟದ ಮೈದಾನವನ್ನಾಗಿ ಉಪಯೋಗಿಸಿಕೊಳ್ಳಲು ಹೈಕಶಿ ಸಂಸ್ಥೆಯ ಕಾಲೇಜಿನವರಿಗೆ ನೀಡಿದ್ದಾರೆ. ಸದರಿ ಜಮೀನು ಸುಮಾರು ೪೫ ವರ್ಷಗಳಿಂದ ನಮ್ಮ ಕಬ್ಜದಲ್ಲಿದೆ. ಕಲಂ 342 ರ ಪ್ರಕಾರ ಪರಿಶಿಷ್ಟ ವರ್ಗದವರ ಕಬ್ಜೆಯಲ್ಲಿರುವ ಜಮೀನನ್ನು ಸಕ್ರಮ ಮಾಡಿಕೊಳ್ಳುವುದಕ್ಕೆ ಅವಕಾಶವಿದೆ. ಆದ್ದರಿಂದ ಸದರಿ ಭೂಮಿಯನ್ನು ಮಹರ್ಷಿ ವಾಲ್ಮೀಕಿ ಗ್ರಂಥಾಲಯ ಹಾಗೂ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ಉದ್ಯಾವನ ನಿರ್ಮಾಣಕ್ಕೆ 4 ಎಕರೆ ಭೂಮಿ ಮಂಜೂರು ಮಾಡಬೇಕು ಎಂದು ವಾಲ್ಮೀಕಿ ಸಮಾಜದ ಮುಖಂಡರು ತಿಳಿಸಿದರು.

