ಬುದ್ಧಿವಂತಿಕೆ, ತಾಳ್ಮೆ ಮತ್ತು ಶಕ್ತಿಚೇತನರ ಪ್ರತೀಕ ವಿಕಲಚೇತನರು;ಶಾಸಕ ರಾಜಾ ವೇಣುಗೋಪಾಲ ನಾಯಕ
ಸುರಪುರ ಟೈಮ್ಸ್ ವಾರ್ತೆ
ಸುರಪುರ : ವಿಕಲಚೇತನರು ಎಲ್ಲರಂತೆ ಸಮಾನರು. ಅವರು ಕೂಡ ಬುದ್ದಿವಂತಿಕೆ, ತಾಳ್ಮೆ ಅವರು ಶಕ್ತಿ ಚೇತನರ ಪ್ರತೀಕ. ಕಾರಣ ಅವರುಗಳು ಸದಾ ಧೈರ್ಯದಿಂದ ಇರಬೇಕು. ವಿಕಲಚೇತನರು ಬೇಡಿಕೆಗಳ ಈಡೇರಿಕೆಗೆ ಸರಕಾರ ಮಟ್ಟದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ಆಶ್ವಾಸನೆ ನೀಡಿದರು.
ಇಲ್ಲಿಯ ಗರುಡಾದ್ರಿ ಕಲಾ ಮಂದಿರದಲ್ಲಿ ಕರ್ನಾಟಕ ವಿಕಲಚೇತನರ ಹಕ್ಕುಗಳ ಒಕ್ಕೂಟ ಮತ್ತು ಗ್ರಾಮೀಣ ನಗರ ಹಾಗೂ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರ ಒಕ್ಕೂಟ ಶುಕ್ರವಾರ ಹಮ್ಮಿಕೊಂಡಿದ್ದ ಸುರಪುರ-ಹುಣಸಗಿ ತಾಲೂಕು ಮಟ್ಟದ ವಿಕಲಚೇತನರ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಇಂದು ವಿಕಲಚೇತನರ ಶ್ರಯೋಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿ ಮಾಡುತ್ತಿದೆ. ಅದೇ ರೀತಿ ತಾವು ನೀಡಿರುವ ಬೇಡಿಕೆಗಳನ್ನು ಸರಕಾರದ ಗಮನಕ್ಕೆ ತಂದು ಈಡೇರಿಸುತ್ತೇನೆ ಎಂದು ತಿಳಿಸಿದರು.
ನಮ್ಮ ತಂದೆ ರಾಜಾ ವೆಂಕಟಪ್ಪ ನಾಯಕ ಅವರು ಶಾಸಕರಿದ್ದ ಸಂದರ್ಭದಲ್ಲಿ ವಿಕಲಚೇತನರಿಗೆ ತ್ರಿಚಕ್ರ ವಾಹನ ಸೇರಿದಂತೆ ಅನೇಕ ಸೌಲಭ್ಯಗಳನ್ನು ಒದಗಿಸಿಕೊಟ್ಟಿರುತ್ತಾರೆ. ನಾನು ಕೂಡಾ ಕಳೆದ ಒಂದು ವರ್ಷದಿಂದ ಅದನ್ನೇ ಮುಂದುವರೆಸಿಕೊಂಡು ಹೊರಟಿರುವೆ. ನಾನು ಸುರಪುರ ವಿಧಾನಸಭಾ ಕ್ಷೇತ್ರದ ಶಾಸಕನಾದ ನಂತರ ಎಲ್ಲರ ಧ್ವನಿಯಾಗಿ ಕೆಲಸ ಮಾಡುತ್ತಿರುವೆ ಮಾಡುವೆ. ವಿಕಲಚೇತನರು ನಿಜಕ್ಕೂ ಬಹಳ ಉತ್ಸಾಹ, ಹುಮ್ಮಸ್ಸಿನಿಂದ ತಾಲೂಕು ಮಟ್ಟದ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ಮಾಡಿದ್ದಾರೆ ಇದು ನಿಜಕ್ಕೂ ಹೆಮ್ಮೆಪಡುವ ವಿಷಯ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಅರಸು ಮನೆತನ ರಾಜಾ ಲಕ್ಷ್ಮೀನಾರಾಯಣ ನಾಯಕ ಉದ್ಘಾಟಿಸಿದರು. ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ರಾಜಾ ಮುಕುಂದ ನಾಯಕ, ಸುರಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗರಾಜ್ ಬಾಚಿಮಟ್ಟಿ, ತಾಪಂ ಇಒ ಬಸವರಾಜ ಸಜ್ಜನ್, ವಿಕಲಚೇತನರ ಅಧಿಕಾರಿ ಶರಣಪ್ಪ ಪಾಟೀಲ್, ಸಗರನಾಡು ಸೇವಾ ಸಂಸ್ಥೆ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಮಾತನಾಡಿದರು.
ದೇವಪುರ ಶ್ರೀ ಜಡಿಶಾಂತಲಿಂಗೇಶ್ವರ ಸಂಸ್ಥಾನ ಹಿರೇಮಠದ ಶಿವಮೂರ್ತಿ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಭಗವಂತ ಎಲ್ಲರಿಗೂ ಸಮಾನವಾಗಿ ಬುದ್ದಿ ಕೊಟ್ಟಿದ್ದಾನೆ. ವಿಕಲಚೇತನರಿಗೆ ಒಂದು ಹಂತದ ಶಕ್ತಿ ಕೊರತೆ ಅಂಗಾಂಗಳಲ್ಲಿ ಕೊಟ್ಟರೆ ಬುದ್ದಿಯಲ್ಲಿ ಹೆಚ್ಚಿಗೆ ಕೊಟ್ಟಿದ್ದಾನೆ. ಅತ್ಯಂತ ವಿಶಿಷ್ಟವಾದ ಪ್ರತಿಭೆ, ಬುದ್ದಿವಂತಿಕೆ ಅವರಲ್ಲಿದೆ. ಅವರು ನಿಜಕ್ಕೂ ಬುದ್ದಿವಂತರು. ಅವರು ವಿಕಲಚೇತನ, ವಿಶೇಷಚೇತನರಲ್ಲ ಸಕಲ ಚೇತನರು ಎಂದು ಗುಣಗಾನ ಮಾಡಿದರು. ವಿಕಲಚೇತನರ ಬಳಿ ಅದ್ಬುತಾದ ಶಕ್ತಿ ಇದೆ. ಸರಕಾರ, ಸಂಘ-ಸಂಸ್ಥೆಗಳು ಸೇರಿ ಅನೇಕರು ನಿಮ್ಮ ಜತೆಯಲ್ಲಿದ್ದಾರೆ. ಸರಕಾರದ ಸೌಲಭ್ಯಗಳನ್ನು ಪಡೆದುಕೊಂಡು ವಿಶೇಷ ವ್ಯಕ್ತಿಗಳಾಗಿ ರೂಪಗೊಳ್ಳಬೇಕು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಯೂಥ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜಾ ಕುಮಾರ ನಾಯಕ, ಮುಖಂಡರಾದ ಮಲ್ಲಿಕಾರ್ಜುನರೆಡ್ಡಿ ಅಮ್ಮಾಪುರ, ವೆಂಕಟೇಶ ನಾಯಕ ಬೈರಿಮಡ್ಡಿ, ಅಬ್ದುಲ್ ಗಫಾರ್, ಚಂದ್ರಶೇಖರ ಪಟ್ಟಣಶೆಟ್ಟಿ ವಜ್ಜಲ್, ಶೇಖ್ ಮಹಿಬೂಬ್ ಒಂಟಿ ಸೇರಿ ಇತರರು ವೇದಿಕೆಯಲ್ಲಿದ್ದರು. ಎಂಆರ್‌ಡಬ್ಲೂ ಮಾಳಪ್ಪ ಪೂಜಾರಿ ಪ್ರಾಸ್ತಾವಿಕ ಮಾತನಾಡಿದರು. ವಿಕಲಚೇತನರ ಸಂಘದ ವಿಭಾಗೀಯ ಅಧ್ಯಕ್ಷ ಸಂಗನಗೌಡ ಧನರೆಡ್ಡಿ ಆಶಯ ನುಡಿಗೈದರು. ವಿಕಲಚೇತನರ ಸಂಘದ ತಾಲೂಕು ಅಧ್ಯಕ್ಷ ನಾಗೇಂದ್ರ ದೊರೆ ಬೇಡಿಕೆಗಳ ಮನವಿ ಸಲ್ಲಿಸಿದರು. ವಿಕಲಚೇತನರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬೈರಿಮಡ್ಡಿ ಸ್ವಾಗತಿಸಿದರು. ಸಂಗೀತ ಶಿಕ್ಷಕರಾದ ಶರಣು ವಠಾರ ಪ್ರಾರ್ಥನೆ ಗೀತೆ ಹಾಡಿದರು. ಶಿಕ್ಷಕ ಎಸ್.ಎಸ್.ಮಾರನಾಳ ನಿರೂಪಿಸಿ ವಂದಿಸಿದರು. ಸುರಪುರ ಮತ್ತು ಹುಣಸಗಿ ತಾಲೂಕುಗಳ ನೂರಾರು ಸಂಖ್ಯೆಯಲ್ಲಿ ವಿಕಲಚೇತನರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ವಿಕಲಚೇತನರಿಗೆ ಅಲಿಂ ಕೋ ಕಂಪನಿಯಿಂದ ವಿಕಲಚೇತನರಿಗೆ ಸಾಧನ ಸಲಕರಣೆ ನೀಡಲಾಯಿತು.



















