ಕ್ಷೇತ್ರದ ಜನತೆಯ ಸೇವೆಗೆ ಸದಾ ಬದ್ಧನಾಗಿರುವ
ಫೋಟೊ : ೨೭ಸುರ್೧ ಸುರಪುರ ತಾಲೂಕಿನ ಪೇಠ ಅಮ್ಮಾಪುರ ಗ್ರಾಮದಲ್ಲಿ ಶಾಸಕ ರಾಜಾ ವೇಣುಗೋಪಾಲ ನಾಯಕ ಮತ್ತು ಕೆವೈಡಿಸಿಸಿ ಬ್ಯಾಂಕ್ ಅಧ್ಯಕ್ಷ ವಿಠ್ಠಲ ಯಾದವ ಅವರಿಗೆ ಅಭಿನಂದನಾ ಸಮಾರಂಭ ಜರುಗಿತು.
ಪೇಠ ಅಮ್ಮಾಪುರ ಗ್ರಾಮದಲ್ಲಿ ಅಭಿನಂದನಾ ಸಮಾರಂಭ | ಶಾಸಕ ರಾಜಾ ವೇಣುಗೋಪಾಲ ನಾಯಕ ಹೇಳಿಕೆ
ಕ್ಷೇತ್ರದ ಜನತೆಯ ಸೇವೆಗೆ ಸದಾ ಬದ್ಧನಾಗಿರುವೆ
ಸುರಪುರ : ಕ್ಷೇತ್ರದ ಜನತೆ ಗೋಸ್ಕರ ನಮ್ಮ ಮನೆ ಮತ್ತು ಕಚೇರಿ ಬಾಗಿಲು ಸದಾ ತೆಗೆದಿರುತ್ತದೆ. ಹಗಲು-ರಾತ್ರಿಯನ್ನದೇ ಕ್ಷೇತ್ರದ ಜನತೆಯ ಸೇವೆಗೆ ಸದಾ ಬದ್ಧನಾಗಿರುವೆ ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ಹೇಳಿದರು.
ತಾಲೂಕಿನ ಪೇಠ ಅಮ್ಮಾಪುರ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಶಾಸಕ ರಾಜಾ ವೇಣುಗೋಪಾಲ ನಾಯಕ ಮತ್ತು ಕೆವೈಡಿಸಿಸಿ ಬ್ಯಾಂಕ್ ನೂತನ ಅಧ್ಯಕ್ಷ ವಿಠ್ಠಲ ಯಾದವ ಅವರಿಗೆ ಶನಿವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಕಾಯಕವೇ ಕೈಲಾಸ ಎಂಬ ತತ್ವದಲ್ಲಿ ನಂಬಿಕೆಯಿಟ್ಟಿರುವ ನನಗೂ ಕಾಯಕವೇ ಮುಖ್ಯ. ಈ ಅಭಿನಂದನೆ ಮತ್ತು ಗೌರವದಿಂದ ನನಗೆ ಇನ್ನೂ ಹೆಚ್ಚಿನ ಹುಮ್ಮಸ್ಸು ಬರಲಿದೆ. ಪೇಠ ಅಮ್ಮಾಪುರ ಜಿಪಂ ಅಭಿವೃದ್ಧಿಪಡಿಸಬೇಕು, ಸುರಪುರ-ಹುಣಸಗಿ ತಾಲೂಕುಗಳನ್ನು ಸಮಗ್ರವಾಗಿ ಅಭಿವೃದ್ಧಿ ಮಾಡಬೇಕು ಎಂಬ ಛಲ ಬರುತ್ತದೆ. ನಮ್ಮ ತಂದೆ ರಾಜಾ ವೆಂಕಟಪ್ಪ ನಾಯಕ ಅವರದು ಮಾತು ಕಡಿಮೆ, ಕೆಲಸ ಜಾಸ್ತಿ ಅದೇ ರೀತಿ ಕೂಡ ನಾನು ನಮ್ಮ ತಂದೆಯ ಆದರ್ಶಗಳನ್ನು ಪಾಲಿಸುತ್ತಿರುವೆ. ನಿಮ್ಮ ಒಂದೊಂದು ಮತ ನನಗೆ ಹೆಚ್ಚಿನ ಸ್ಪೂರ್ತಿ, ಶಕ್ತಿ ಕೊಡುತ್ತದೆ. ತಮ್ಮೆಲ್ಲರ ಸಹಕಾರ ಇದೇ ರೀತಿ ಇರಬೇಕು. ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಆಗಬೇಕು ಎಂಬುದು ನನ್ನ ಗುರಿಯಾಗಿದೆ ಎಂದರು.
ಪೇಠ ಅಮ್ಮಾಪುರ ನಮ್ಮ ತಂದೆ ರಾಜಾ ವೆಂಕಟಪ್ಪ ನಾಯಕ ಅವರಿಗೆ ರಾಜಕೀಯ ಭವಿಷ್ಯ ಕಲ್ಪಿಸಿದ ಊರು. 1987 ರಲ್ಲಿ ಇದೇ ಗ್ರಾಮದಿಂದ ಅವರು ಮಂಡಲ ಪ್ರಧಾನರಾಗಿ ರಾಜಕೀಯ ಜೀವನ ಪ್ರಾರಂಭಿಸಿದರು. ಅನೇಕ ಅಭಿವೃದ್ಧಿ ಕಾರ್ಯಗಳ ಮೂಲಕ ಸುರಪುರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದರು ಎಂದು ಸ್ಮರಿಸಿದ ಅವರು, ನಮ್ಮ ತಂದೆಗೆ ಆತ್ಮೀಯರಾಗಿರುವ ವಿಠ್ಠಲ ಯಾದವ ಅವರನ್ನು 2023ರಲ್ಲಿಯೇ ಡಿಸಿಸಿ ಬ್ಯಾಂಕ್ ಅಧ್ಯಕ್ಷರನ್ನಾಗಿ ಮಾಡಬೇಕು ಇಚ್ಚೆಯಿತ್ತು ಅದು ಯಾವುದೋ ಒಂದು ಕಾರಣದಿಂದ ತಪ್ಪಿತ್ತು. ಈ ಬಾರಿ ನಾನು ಕಲಬುರಗಿ-ಯಾದಗಿರಿ ಜಿಲ್ಲೆಯ ಸಚಿವರು, ಶಾಸಕರನ್ನು ಭೇಟಿಯಾಗಿ ಯಾದವ ಅವರಿಗೆ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಮನವಿ ಮಾಡಿದಾಗ ಅವರು ಸಹಕರಿಸಿದರು ಎಂದು ತಿಳಿಸಿದರು.
ಕಲಬುರಗಿ-ಯಾದಗಿರಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ವಿಠ್ಠಲ ಯಾದವ ಮಾತನಾಡಿ, ಈ ಗ್ರಾಮದ ಜನತೆ, ಮುಖಂಡರು, ಹಿರಿಯರು, ಸಹೋದರರು ಮತ್ತು ತಾಲೂಕಿನಾದ್ಯಂತ ನಮ್ಮ ಪಕ್ಷದ ಮುಖಂಡರು ನನ್ನ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸವೇ ನಾನು ಅಧ್ಯಕ್ಷನಾಗಲು ಕಾರಣವಾಯಿತು. 25 ವರ್ಷಗಳ ಹಿಂದೆ ರಾಜಾ ವೆಂಕಟಪ್ಪ ನಾಯಕ ಅವರು ನನ್ನನ್ನು ತಾಪಂ ಅಧ್ಯಕ್ಷನನ್ನಾಗಿ ಮಾಡಿದಾಗ ಇಡೀ ಗ್ರಾಮವೇ ವಿಜೃಂಭಣೆಯಿಂದ ಸಂಭ್ರಮಿಸಿತು. ಅದೇ ರೀತಿ ಅವರ ಮಗ ಶಾಸಕ ರಾಜಾ ವೇಣುಗೋಪಾಲ ನಾಯಕ ಅವರ ನೇತೃತ್ವದಲ್ಲಿ ಇಂದು ಕೆವೈಡಿಸಿಸಿ ಬ್ಯಾಂಕ್ ಅಧ್ಯಕ್ಷನಾಗಿರುವೆ. ನನಗೆ ಆಶೀರ್ವಾದಿಸಿ, ವಿಜಯೋತ್ಸವ ಮಾಡಿದ ನನ್ನೂರಿನ ಜನತೆಯ ಪ್ರೀತಿಯಿಂದ ನನಗೆ ತುಂಬಾ ಸಂತೋಷವಾಗಿದೆ. ಈ ಕ್ಷೇತ್ರದ ಅಭಿವೃದ್ಧಿಗಾಗಿ ಶಾಸಕ ರಾಜಾ ವೇಣುಗೋಪಾಲ ನಾಯಕ ಅವರು ಅವಿರತವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಸೇವಾ ಕಾರ್ಯ ಪ್ರಶಂಸನೀಯ ಎಂದರು. ಜಿಪಂ ಮಾಜಿ ಅಧ್ಯಕ್ಷ ರಾಜಶೇಖರಗೌಡ ವಜ್ಜಲ್, ಕೆವೈಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಬಾಪುಗೌಡ ಪಾಟೀಲ್, ಸುರಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗರಾಜ್ ಬಾಚಿಮಟ್ಟಿ ಮಾತನಾಡಿದರು.
ಶಾಸಕ ರಾಜಾ ವೇಣುಗೋಪಾಲ ನಾಯಕ ಮತ್ತು ಕೆವೈಡಿಸಿಸಿ ಬ್ಯಾಂಕ್ ಅಧ್ಯಕ್ಷ ವಿಠ್ಠಲ ಯಾದವ ಅವರಿಗೆ ಗ್ರಾಮಸ್ಥರು ಸೇರಿದಂತೆ ವಿವಿಧ ಊರುಗಳ, ಗ್ರಾಮಗಳ ನಾಗರಿಕರು, ಸಹಕಾರ ಸಂಘದವರು, ಕಾರ್ಯದರ್ಶಿಗಳು ಹೃದಯಸ್ಪರ್ಶಿಯಾಗಿ ಸನ್ಮಾನಿಸಿದರು. ಗ್ರಾಪಂ ಅಧ್ಯಕ್ಷೆ ಸರಸ್ವತಿ ಸಿದ್ದಪ್ಪ ಯೂಥ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜಾ ಕುಮಾರ ನಾಯಕ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಸನಗೌಡ ಪಾಟೀಲ್ ದೇವಪುರ, ಮುಖಂಡರಾದ ಶಾಂತಗೌಡ ಚನ್ನಪಟ್ಟಣ, ವೆಂಕೋಬ ಯಾದವ, ರಾಜಾ ಸಂತೋಷ ನಾಯಕ, ರಾಜಾ ವಾಸುದೇವ ನಾಯಕ, ರಾಜಾ ಪಿಡ್ಡ ನಾಯಕ (ತಾತಾ), ಮರಲಿಂಗಪ್ಪ ನಾಯಕ ಕರ್ನಾಳ, ದೊಡ್ಡ ದೇಸಾಯಿ ದೇವರಗೋನಾಲ, ರಂಗನಗೌಡ ಪಾಟೀಲ್, ರವಿಚಂದ್ರ ಸಾಹು ಆಲ್ದಾಳ, ವೆಂಕಟೇಶ ಹೊಸಮನಿ, ದುರ್ಗಪ್ಪ ಗೋಗಿಕೇರಾ, ಮಲ್ಲಣ್ಣ ಐಕೂರು, ಅಬ್ದುಲ್ ಗಫಾರ್ ಸೇರಿ ಇನ್ನಿತರರು ವೇದಿಕೆಯಲ್ಲಿದ್ದರು. ಗ್ರಾಮದ ಅನೇಕ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಪಾಲ್ಗೊಂಡಿದ್ದರು. ಯಂಕಣ್ಣ ಯಾದವ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಸಂಗನಬಸವ ಪಂಚಗಲ್ ನಿರೂಪಿಸಿ ವಂದಿಸಿದರು.
ಬ್ಯಾಂಕ್ ಉನ್ನತಿಗೆ ಶ್ರಮಿಸುವೆ
ನಾನು 25 ವರ್ಷ ಸಹಕಾರ ರಂಗದಲ್ಲಿ ಕೆಲಸ ಮಾಡಿದ್ದನ್ನು ಗುರುತಿಸಿ ನನ್ನ ಹಿರಿಯರಾದ ರಾಜಾ ವೆಂಕಟಪ್ಪ ನಾಯಕ ಅವರು ಹಿಂದೆ ನನ್ನನ್ನು ಅಧ್ಯಕ್ಷನಾಗಿ ಮಾಡಲು ಸಾಕಷ್ಟು ಪ್ರಯತ್ನ ಪಟ್ಟರು. ಆದರೆ ಆಗಲಿಲ್ಲ ಆ ಸಂದರ್ಭದಲ್ಲಿ ಅಪೆಕ್ಸ್ ಬ್ಯಾಂಕ್ ನಿರ್ದೇಶಕನ್ನಾಗಿ ಮಾಡಿದರು. ಈಗ ನಾನು ಕೆವೈಡಿಸಿಸಿ ಬ್ಯಾಂಕ್ ಅಧ್ಯಕ್ಷನಾಗಲು ಕಾರಣ ನಮ್ಮ ಶಾಸಕರ ಶ್ರಮ ನೂರಕ್ಕೆ ನೂರರಷ್ಟಿದೆ. ಕಲಬುರಗಿ-ಯಾದಗಿರಿ ಜಿಲ್ಲೆಗಳ ಮಂತ್ರಿಗಳನ್ನು ಶಾಸಕರನ್ನು ಭೇಟಿಯಾಗಿ ಅವರ ಮನವೊಲಿಸುವಲ್ಲಿ ಯಶಸ್ವಿಯಾದರು. ಅವರ ದೃಢ ನಿರ್ಧಾರವೇ ನಾನು ಅಧ್ಯಕ್ಷನಾಗಲು ಕಾರಣವಾಯಿತು. ಕೆವೈಡಿಸಿಸಿ ಬ್ಯಾಂಕ್ ಈಗ ಲಾಭದಾಯಕ ಹೊಸ್ತಿಲಲ್ಲಿ ಬಂದು ನಿಂತಿದೆ. ಎಲ್ಲರ ಸಹಕಾರದಿಂದ ನಾನು ಕೂಡ ಬ್ಯಾಂಕ್‌ನ ಉನ್ನತಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸುವೆ ಎಂದು ಕೆವೈಡಿಸಿಸಿ ಬ್ಯಾಂಕ್ ಅಧ್ಯಕ್ಷ ವಿಠ್ಠಲ ಯಾದವ ಭರವಸೆ ನೀಡಿದರು.
